ನೇಪಾಳ: ಭೀಕರ ಪ್ರವಾಹ ಮತ್ತು ಭೂಕುಸಿತದಿಂದ ನೇಪಾಳ ತತ್ತರಿಸಿದ್ದು, 1,200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, 4 ಸಾವಿರಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ. ಇದರ ನಡುವೆ ಜಲವಿದ್ಯುತ್ ಯೋಜನೆಯ ಸುರಂಗದೊಳಗೆ ಸಿಲುಕಿದ್ದ ಭಾರತೀಯ ಮೂಲದ ಕಾರ್ಮಿಕರೊಬ್ಬರು ಬರೋಬ್ಬರಿ 9 ದಿನಗಳ ಬಳಿಕ ಜೀವಂತವಾಗಿ ಪತ್ತೆಯಾಗಿರುವ ಘಟನೆ ಗಮನ ಸೆಳೆದಿದೆ.
ನೇಪಾಳದ ರಸುವಾ ಜಿಲ್ಲೆಯ ತ್ರಿಶೂಲಿ-3A ಜಲವಿದ್ಯುತ್ ಯೋಜನೆಯ 4.5 ಕಿ.ಮೀ ಉದ್ದದ ಸುರಂಗಕ್ಕೆ ಆಗಸ್ಟ್ 26ರಂದು ಭೂಕುಸಿತದ ಅವಶೇಷಗಳು ಹಾಗೂ ಪ್ರವಾಹದ ನೀರು ನುಗ್ಗಿತ್ತು. ಈ ವೇಳೆ ಮೆಕ್ಯಾನಿಕಲ್ ಫೋರ್‌ಮನ್ ಆಗಿ ಕೆಲಸ ಮಾಡುತ್ತಿದ್ದ 30 ವರ್ಷದ ಸಂಜಯ್ ಸಾಹ್ ನಿಯಂತ್ರಣ ಕೊಠಡಿಯಲ್ಲಿದ್ದರು.

ಸುರಂಗದೊಳಗೆ ನೀರು ನುಗ್ಗುತ್ತಿರುವುದನ್ನು ಗಮನಿಸಿದ ಸಾಹ್, ತಮ್ಮ ಸಹೋದ್ಯೋಗಿಗಳಿಗೆ ತಕ್ಷಣ ಹೊರಗೆ ತೆರಳುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಎಲ್ಲರೂ ಹೊರಬರುವಷ್ಟರಲ್ಲಿ ಸುರಂಗದ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿಕೊಂಡಿದ್ದರಿಂದ ಸಂಜಯ್ ಸಾಹ್ ಹಾಗೂ ಮೆಕ್ಯಾನಿಕಲ್ ಸೂಪರ್‌ವೈಸರ್ 45 ವರ್ಷದ ಕಬೀರ್ ಮಹರ್ಜನ್ ಒಳಗೇ ಸಿಲುಕಿಕೊಂಡಿದ್ದರು.ಸುರಂಗದೊಳಗೆ ಸಿಲುಕಿಕೊಂಡಿದ್ದ ಸಂಜಯ್ ಸಾಹ್ ಅವರು ಒಂಬತ್ತು ದಿನಗಳ ಕಾಲ ‘ಹರೇ ಕೃಷ್ಣ’ ಮಹಾಮಂತ್ರವನ್ನು ಜಪಿಸುತ್ತಾ ದೇವರಲ್ಲಿ ಪ್ರಾರ್ಥಿಸುತ್ತಿದ್ದರು ಎಂದು ತಿಳಿಸಿದ್ದಾರೆ.
“ಆಹಾರ ಮತ್ತು ನೀರಿಲ್ಲದೆ ಒಂಬತ್ತು ದಿನ ಕಳೆಯುವುದು ನರಕಸದೃಶವಾಗಿತ್ತು. ಆದರೆ ನಿರಂತರವಾಗಿ ಹರೇ ಕೃಷ್ಣ ಮಹಾಮಂತ್ರವನ್ನು ಜಪಿಸುತ್ತಾ ನಮ್ಮನ್ನು ಕಾಪಾಡುವಂತೆ ದೇವರಲ್ಲಿ ಪ್ರಾರ್ಥಿಸುತ್ತಿದ್ದೆವು. ಕೊನೆಗೂ ಕೃಷ್ಣ ಜನ್ಮಾಷ್ಟಮಿಯಂದೇ ನಾನು ಹೊರಬಂದಾಗ ಮರುಜನ್ಮ ಸಿಕ್ಕಂತಾಯಿತು” ಎಂದು ಸಾಹ್ ಹೇಳಿದ್ದಾರೆ.ಸುಮಾರು 9 ದಿನಗಳ ಬಳಿಕ ರಕ್ಷಣಾ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಇಬ್ಬರು ಕಾರ್ಮಿಕರನ್ನು ಸುರಂಗದಿಂದ ಸುರಕ್ಷಿತವಾಗಿ ಹೊರತೆಗೆದಿದ್ದಾರೆ. ಕೃಷ್ಣ ಜನ್ಮಾಷ್ಟಮಿಯಂದೇ ಸಂಜಯ್ ಸಾಹ್ ಅವರನ್ನು ರಕ್ಷಿಸಿರುವುದು ವಿಶೇಷವಾಗಿ ಗಮನ ಸೆಳೆದಿದೆ.
ಭದ್ರತಾ ಅಧಿಕಾರಿಗಳ ಪ್ರಕಾರ ಸಂಜಯ್ ಸಾಹ್ ಅವರ ಆರೋಗ್ಯ ಸ್ಥಿರವಾಗಿದ್ದು, ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಕಂಡುಬಂದಿಲ್ಲ. ವೈದ್ಯಕೀಯ ತಪಾಸಣೆಗಾಗಿ ಅವರನ್ನು ತ್ರಿಶೂಲಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.ಇನ್ನೊಂದೆಡೆ, ಕಬೀರ್ ಮಹರ್ಜನ್ ಅವರಿಗೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ವಿಮಾನದ ಮೂಲಕ ಕಠ್ಮಂಡುವಿನ ಛೌನಿ ಪ್ರದೇಶದಲ್ಲಿರುವ ನೇಪಾಳ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.











