ಸುದ್ದಿಒನ್, ಚಿತ್ರದುರ್ಗ,ಸೆ.04 : ರಾಜ್ಯ ಸರ್ಕಾರದ ಬಹುಮುಖ್ಯ ಯೋಜನೆಯಾದ ‘ಪ್ರಜಾಸೇವಾ ಆಂದೋಲನ’ ಇದೇ ಸೆಪ್ಟೆಂಬರ್ 5ರಂದು ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಉಸ್ತುವಾರಿ ಜಿಲ್ಲಾಧಿಕಾರಿ ಡಾ. ಎಸ್. ಆಕಾಶ್ ತಿಳಿಸಿದ್ದಾರೆ.
ಸಾರ್ವಜನಿಕರ ಮನವಿ ಹಾಗೂ ಅಹವಾಲುಗಳನ್ನು ಸ್ವೀಕರಿಸಿ, ನಿಯಮಾನುಸಾರ ಸ್ಥಳದಲ್ಲೇ ಪರಿಹಾರ ನೀಡುವ ಉದ್ದೇಶದಿಂದ ಈ ಪ್ರಜಾಸೇವಾ ಆಂದೋಲನ ಸಭೆಗಳನ್ನು ಆಯೋಜಿಸಲಾಗಿದೆ.
ಸೆ.05ರಂದು 11 ಗಂಟೆಗೆ ಪ್ರಾರಂಭವಾಗುವ ಈ ಕಾರ್ಯಕ್ರಮದಲ್ಲಿ ಹಿರಿಯೂರು ಕಸಬಾ ಹೋಬಳಿಯ ನೆಹರೂ ಮೈದಾನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಟಿ. ರಘುಮೂರ್ತಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ. ಉಳಿದಂತೆ ಚಿತ್ರದುರ್ಗ ತಾಲ್ಲೂಕಿನ ಭರಮಸಾಗರದ ಬಸವೇಶ್ವರ ಸಮುದಾಯ ಭವನ, ಚಳ್ಳಕೆರೆ ತಾಲೂಕು ಕಚೇರಿ ಆವರಣ, ಹೊಸದುರ್ಗದ ಅಶೋಕರಂಗ ಮಂದಿರ, ಹೊಳಲ್ಕೆರೆ ತಾಲೂಕಿನ ರಾಮಗಿರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣ ಹಾಗೂ ಮೊಳಕಾಲ್ಮೂರು ತಾಲೂಕು ಪಂಚಾಯಿತಿ ಆವರಣದಲ್ಲಿ ಜನಸ್ಪಂದನ ನಡೆಯಲಿದೆ.

ಆಯಾ ತಾಲೂಕು ಮಟ್ಟದ ಕಾರ್ಯಕ್ರಮಗಳಲ್ಲಿ ಸ್ಥಳೀಯ ಶಾಸಕರು, ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿರಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮದ ಪ್ರಯೋಜನ ಪಡೆಯಬೇಕಾಗಿ ಉಸ್ತುವಾರಿ ಜಿಲ್ಲಾಧಿಕಾರಿ ಡಾ.ಎಸ್.ಆಕಾಶ್ ಕೋರಿದ್ದಾರೆ.










