ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಸೆ. 04 : ಶ್ರೀ ಕೃಷ್ಣನು ಕೇವಲ ರಾಸಲೀಲೆ ಅಥವಾ ಗೀತೋಪದೇಶಕ್ಕೆ ಮಾತ್ರ ಸೀಮಿತವಾಗದೆ, ಜಗತ್ತಿನಲ್ಲಿ ದುಃಖ ಮತ್ತು ಅಶಾಂತಿ ನೆಲೆಸಿದಾಗ ಶಾಂತಿ ಮತ್ತು ಕಲ್ಯಾಣವನ್ನು ಸ್ಥಾಪಿಸಲು ಅವತರಿಸಿದ ಶ್ರೀಮನ್ನಾರಾಯಣನ ಶಕ್ತಿ ಎಂದು ಕಬೀರಾನಂದಾಶ್ರಮದ ಶ್ರೀ ಶಿವಲಿಂಗಾನಂದ ಶ್ರೀಗಳು ಪ್ರತಿಪಾದಿಸಿದರು.

ಚಿತ್ರದುರ್ಗ ನಗರದ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶುಕ್ರವಾರ ಎಲ್.ಕೆ.ಜಿ.ಮತ್ತು ಯು.ಕೆ.ಜಿ ಮಕ್ಕಳಿಗಾಗಿ ಹಮ್ಮಿಕೊಂಡಿದ್ದ ಶ್ರೀ ಕೃಷ್ಣ ಜನ್ಮಾಷ್ಠಮಿ ಕಾರ್ಯಕ್ರಮದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು, ಕೃಷ್ಣಾಷ್ಟಮಿಯ ಪವಿತ್ರ ದಿನದಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಹಾಗೂ ರೋಹಿಣಿ ನಕ್ಷತ್ರದ ಶುಭ ಯೋಗದಲ್ಲಿ ಈ ಸಮಾರಂಭ ನಡೆಯುತ್ತಿರುವುದು ಅತ್ಯಂತ ಪುಣ್ಯದ ವಿಷಯವೆಂದು ಬಣ್ಣಿಸಿ, ಹಿಂದೆ ವರುಣ ದೇವನು ಹಾಗೂ ಇತರ ದೇವತೆಗಳು ಕೋಪಗೊಂಡು ಮೂರು ತಿಂಗಳುಗಳ ಕಾಲ ಬಿರುಗಾಳಿ, ಮಳೆ ಹಾಗೂ ಮಿಂಚಿನಿಂದ ಉಪದ್ರವ ನೀಡಿದಾಗ, ಕೃಷ್ಣನು ಗೋವರ್ಧನ ಪರ್ವತವನ್ನು ತನ್ನ ಕಿರುಬೆರಳಿನಿಂದ ಎತ್ತಿ ಹಿಡಿದು ಗೋಪಾಲಕರು, ಧನಕರು ಹಾಗೂ ಜನಸಾಮಾನ್ಯರಿಗೆ ರಕ್ಷಣೆ ನೀಡಿದ್ದನ್ನು ಉಲ್ಲೇಖಿಸಿದರು. ಪ್ರಸ್ತುತ ಕಾಲದಲ್ಲಿ ನೇಪಾಳದಲ್ಲಿ ಸಂಭವಿಸಿದ ಭೂಕಂಪ ಹಾಗೂ ಹಿಮಪಾತದಂತಹ ನೈಸರ್ಗಿಕ ವಿಕೋಪಗಳನ್ನು ಉದಾಹರಿಸುತ್ತಾ, ಕೃಷ್ಣನ ಅವತಾರವು ಜೀವಕುಲದ ರಕ್ಷಣೆ ಮತ್ತು ಕಲ್ಯಾಣಕ್ಕಾಗಿ ಸಾಗಿದ ಹಾದಿಯನ್ನು ವಿವರಿಸಿದರು.

ಇಂದಿನ ಜಗತ್ತಿನಲ್ಲಿ ಪಾಕಿಸ್ತಾನ, ರಷ್ಯಾ ಮತ್ತು ಅಮೆರಿಕದಂತಹ ರಾಷ್ಟ್ರಗಳ ನಡುವಿನ ಉದ್ವಿಗ್ನತೆ ಹಾಗೂ ಸಂಘರ್ಷಗಳನ್ನು ಪ್ರಸ್ತಾಪಿಸಿದ ಅವರು, ಪ್ರಾಚೀನ ಕಾಲದಲ್ಲೂ ಜರಾಸಂಧ, ನರಕಾಸುರ, ಬಲಿಚಕ್ರವರ್ತಿ ಹಾಗೂ ಬಾಣಾಸುರನಂತಹ ರಾಕ್ಷಸ ಬಲಗಳು ಸಮಾಜಕ್ಕೆ ಕಂಟಕವಾಗಿದ್ದವು ಅಂತಹ ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಭಗವಂತನು ನಾನಾ ಲೀಲೆಗಳನ್ನು ತೋರಿದನು ಎಂದು ಹೇಳಿದರು. ಅಲ್ಲದೆ, ತಮ್ಮ ಬಡ ಗೆಳೆಯ ಕುಚೇಲನ ದಾರಿದ್ರ್ಯವನ್ನು ನೀಗಿ ಸಂಪತ್ತನ್ನು ಕರುಣಿಸಿದ ಕೃಷ್ಣನ ಕರುಣಾಮಯಿ ಗುಣವನ್ನು ನೆನಪಿಸಿಕೊಂಡರು. ಮಕ್ಕಳು ಶ್ರೀ ಕೃಷ್ಣನ ಆದರ್ಶಗಳು ಹಾಗೂ ತತ್ವಾದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಬೇಕು. ಪೋಷಕರು ತಮ್ಮ ಮಕ್ಕಳನ್ನು ಆ ನಿಟ್ಟಿನಲ್ಲಿ ಸಂಸ್ಕಾರವಂತರನ್ನಾಗಿ ಬೆಳೆಸಬೇಕು ಎಂದು ಕರೆ ನೀಡಿದರು.
ಕೃಷ್ಣಾಷ್ಟಮಿಯ ಪವಿತ್ರ ದಿನದಂದು ಶ್ರಾವಣ ಮಾಸದ ಕೃಷ್ಣ ಪಕ್ಷದ ಅಷ್ಟಮಿ ಹಾಗೂ ರೋಹಿಣಿ ನಕ್ಷತ್ರದ ಶುಭ ಯೋಗದಲ್ಲಿ ಈ ಸಮಾರಂಭ ನಡೆಯುತ್ತಿರುವುದು ಅತ್ಯಂತ ಪುಣ್ಯದ ವಿಷಯವೆಂದು ಬಣ್ಣಿಸಿ ಕೃಷ್ಣನು ಕೇವಲ ರಾಸಲೀಲೆ ಅಥವಾ ಗೀತೋಪದೇಶಕ್ಕೆ ಮಾತ್ರ ಸೀಮಿತವಾಗದೆ, ಜಗತ್ತಿನಲ್ಲಿ ದುಃಖ ಮತ್ತು ಅಶಾಂತಿ ನೆಲೆಸಿದಾಗ ಶಾಂತಿ ಮತ್ತು ಕಲ್ಯಾಣವನ್ನು ಸ್ಥಾಪಿಸಲು ಅವತರಿಸಿದ ಶ್ರೀಮನ್ನಾರಾಯಣನ ಶಕ್ತಿ ಎಂದು ಪ್ರತಿಪಾದಿಸಿ ಕೃಷ್ಣನ ಜೀವನ, ತತ್ವಾದರ್ಶಗಳು ಮತ್ತು ಆತನ ಲೀಲೆಗಳ ಕುರಿತು ಪ್ರಮುಖ ಸಂದೇಶವನ್ನು ನೀಡಲಾಯಿತು.
ಸಮಾರಂಭದಲ್ಲಿ ಕೃಷ್ಣ ಹಾಗೂ ರಾಧೆಯರ ವೇಷಭೂಷಣ ಧರಿಸಿ ಬಂದಿದ್ದ ಮಕ್ಕಳ ಉತ್ಸಾಹವನ್ನು ಶ್ಲಾಘಿಸಿದರು, ಸಮಾರಂಭದಲ್ಲಿ ಮಕ್ಕಳು, ಪೋಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಕ ವೃಂದದವರು ಸಕ್ರಿಯವಾಗಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿಯರಾದ ಕರಿಷ್ಮ, ಮಂಜುಳಾ, ಸೇರಿದಂತೆ ಭೋಧಕ ಬೋಧಕೇತರರು ಉಪಸ್ಥಿತರಿದ್ದರು.










