ಇಂದಿನ ಡಿಜಿಟಲ್ ಯುಗದಲ್ಲಿ UPI ಮೂಲಕ ಹಣ ಪಾವತಿಸುವುದು ಅತ್ಯಂತ ಸುಲಭವಾಗಿದೆ. ಆದರೆ ಹಣ ಕಳುಹಿಸುವ ವೇಳೆ ಸಣ್ಣ ತಪ್ಪಾದರೂ, ಹಣ ಬೇರೊಬ್ಬರ ಖಾತೆಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ಕೆಲವೊಮ್ಮೆ ಹಣ ಪಡೆದವರು ಸ್ವಯಂಪ್ರೇರಿತವಾಗಿ ವಾಪಸ್ ಮಾಡಬಹುದು. ಆದರೆ ಅವರು ಹಣ ಹಿಂದಿರುಗಿಸದಿದ್ದರೂ ಆತಂಕಪಡುವ ಅಗತ್ಯವಿಲ್ಲ. ತಪ್ಪು ಪಾವತಿ ನಡೆದಿರುವುದು ಗೊತ್ತಾದ ತಕ್ಷಣ ಸರಿಯಾದ ಕ್ರಮ ಕೈಗೊಂಡರೆ ಹಣ ಮರಳಿ ಪಡೆಯುವ ಅವಕಾಶ ಹೆಚ್ಚುತ್ತದೆ.
ಮೊದಲು ಏನು ಮಾಡಬೇಕು?

ವಹಿವಾಟಿನ ಸ್ಥಿತಿ ಪರಿಶೀಲಿಸಿ
ನೀವು ಬಳಸಿದ UPI ಆ್ಯಪ್ ತೆರೆಯಿರಿ. ಪಾವತಿ ಯಶಸ್ವಿಯಾಗಿದೆಯೇ, ಬಾಕಿಯಲ್ಲಿದೆಯೇ ಅಥವಾ ವಿಫಲವಾಗಿದೆಯೇ ಎಂಬುದನ್ನು ಪರಿಶೀಲಿಸಿ. ವಹಿವಾಟಿನ ವಿವರಗಳ ಸ್ಕ್ರೀನ್ಶಾಟ್ ತೆಗೆದು ಸುರಕ್ಷಿತವಾಗಿ ಇಟ್ಟುಕೊಳ್ಳಿ.
UPI ಆ್ಯಪ್ನಲ್ಲೇ ದೂರು ದಾಖಲಿಸಿ
ನೀವು ಬಳಸಿದ BHIM, Google Pay, PhonePe, Paytm ಸೇರಿದಂತೆ UPI ಆ್ಯಪ್ಗಳಲ್ಲಿ ವಹಿವಾಟಿನ ಕುರಿತು ದೂರು ಸಲ್ಲಿಸುವ ಆಯ್ಕೆ ಇರುತ್ತದೆ.
ಇದಕ್ಕಾಗಿ ಆ್ಯಪ್ನ ಹಿಸ್ಟರಿ ವಿಭಾಗಕ್ಕೆ ತೆರಳಿ, ತಪ್ಪಾಗಿ ಮಾಡಿದ ಪಾವತಿಯನ್ನು ಆಯ್ಕೆ ಮಾಡಿ. ಬಳಿಕ Help, Raise Complaint ಅಥವಾ Report a Problem ರೀತಿಯ ಆಯ್ಕೆಯನ್ನು ಬಳಸಿ ದೂರು ದಾಖಲಿಸಬಹುದು.
ದೂರು ಸಲ್ಲಿಸುವಾಗ UPI Transaction ID, Reference Number, ವಹಿವಾಟಿನ ದಿನಾಂಕ ಮತ್ತು ಸ್ಕ್ರೀನ್ಶಾಟ್ ಮುಂತಾದ ವಿವರಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ.
ಕೂಡಲೇ ನಿಮ್ಮ ಬ್ಯಾಂಕ್ಗೆ ಮಾಹಿತಿ ನೀಡಿ
UPI ಆ್ಯಪ್ನಲ್ಲಿ ದೂರು ನೀಡುವುದರ ಜೊತೆಗೆ ಹಣ ಕಡಿತಗೊಂಡಿರುವ ನಿಮ್ಮ ಬ್ಯಾಂಕ್ ಖಾತೆಯ ಬ್ಯಾಂಕ್ನ್ನು ಕೂಡಲೇ ಸಂಪರ್ಕಿಸಿ. ಹಣ ತಪ್ಪಾದ ವ್ಯಕ್ತಿಗೆ ವರ್ಗಾವಣೆಯಾಗಿದೆ ಎಂದು ತಿಳಿಸಿ, ವಹಿವಾಟಿನ ಸಂಪೂರ್ಣ ವಿವರಗಳನ್ನು ನೀಡಿ.
ಹಣ ಪಡೆದ ವ್ಯಕ್ತಿಯನ್ನು ಸಂಪರ್ಕಿಸಿ
ಹಣ ಪಡೆದ ವ್ಯಕ್ತಿಯ ವಿವರಗಳು ಲಭ್ಯವಿದ್ದರೆ, ಅವರನ್ನು ಸಂಪರ್ಕಿಸಿ ಹಣ ತಪ್ಪಾಗಿ ವರ್ಗಾವಣೆಯಾಗಿದೆ ಎಂದು ತಿಳಿಸಿ. ಹಣವನ್ನು ಸರಿಯಾದ ವಿಧಾನದಲ್ಲಿ ಹಿಂದಿರುಗಿಸುವಂತೆ ವಿನಂತಿಸಬಹುದು.
ಆದರೆ ಈ ಸಂದರ್ಭದಲ್ಲಿ ಅತ್ಯಂತ ಎಚ್ಚರಿಕೆ ವಹಿಸಬೇಕು. UPI PIN, OTP, ಕಾರ್ಡ್ ವಿವರಗಳು ಅಥವಾ ಬ್ಯಾಂಕಿಂಗ್ ಪಾಸ್ವರ್ಡ್ಗಳನ್ನು ಯಾರಿಗೂ ನೀಡಬೇಡಿ. ಹಣ ವಾಪಸ್ ಪಡೆಯಲು UPI PIN ನಮೂದಿಸಿ ‘Refund’ ಅನ್ನು ಅನುಮೋದಿಸಬೇಕಾಗಿಲ್ಲ.
ಈ ತಪ್ಪುಗಳನ್ನು ಮಾತ್ರ ಮಾಡಬೇಡಿ!
ತಪ್ಪು ಪಾವತಿ ಗೊತ್ತಾದ ಬಳಿಕ ದೂರು ನೀಡುವುದನ್ನು ವಿಳಂಬ ಮಾಡಬೇಡಿ.

OTP, UPI PIN ಅಥವಾ ಕಾರ್ಡ್ ವಿವರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ.
ಹಣ ವಾಪಸ್ ಕೊಡುತ್ತೇವೆ ಎಂದು ಹೇಳಿ ಯಾರಾದರೂ ನಿಮ್ಮ ಮೊಬೈಲ್ನಲ್ಲಿ Remote Access ಆ್ಯಪ್ನ್ನು ಇನ್ಸ್ಟಾಲ್ ಮಾಡಲು ಹೇಳಿದರೆ ಮಾಡಬೇಡಿ.
ರಿಫಂಡ್ ಪಡೆಯಲು ಅಥವಾ ‘ಅನ್ಲಾಕ್’ ಮಾಡಲು ಮತ್ತೊಮ್ಮೆ ಹಣ ಪಾವತಿಸಬೇಡಿ.
ವಹಿವಾಟಿನ ಸ್ಕ್ರೀನ್ಶಾಟ್ ಹಾಗೂ ದೂರು ದಾಖಲಿಸಿದ ನಂತರ ದೊರೆಯುವ ರೆಫರೆನ್ಸ್ ಸಂಖ್ಯೆಯನ್ನು ಅಳಿಸಬೇಡಿ.
ತಪ್ಪಾಗಿ UPI ಮೂಲಕ ಹಣ ವರ್ಗಾವಣೆಯಾದರೆ ಗಾಬರಿಯಾಗದೆ, ಸಾಧ್ಯವಾದಷ್ಟು ಬೇಗ UPI ಆ್ಯಪ್ ಮತ್ತು ಬ್ಯಾಂಕ್ ಮೂಲಕ ದೂರು ದಾಖಲಿಸುವುದು ಹಣವನ್ನು ಮರಳಿ ಪಡೆಯುವ ಪ್ರಕ್ರಿಯೆಯಲ್ಲಿ ಪ್ರಮುಖ ಹೆಜ್ಜೆಯಾಗಿದೆ.














