ಸುದ್ದಿಒನ್, ಚಿತ್ರದುರ್ಗ, ಸೆಪ್ಟೆಂಬರ್. 04 :
ಯಾವುದೇ ದುಶ್ಚಟಗಳಿಲ್ಲದೆ, ಪ್ರಾಮಾಣಿಕ ಸನ್ಮಾರ್ಗದಲ್ಲಿ ಸಾಗುವ ವ್ಯಕ್ತಿಗಳಿಗೂ ಹಠಾತ್ ಸಂಕಷ್ಟ-ಅನಾರೋಗ್ಯಗಳು ಏಕೆ ಕಾಡುತ್ತವೆ ಎಂಬ ಗಂಭೀರ ಜಿಜ್ಞಾಸೆಗೆ ಕಣ್ವಕುಪ್ಪೆ ತಪೋವನದ ಗವಿಮಠದ ಶ್ರೀಗಳು ಪೌರಾಣಿಕ ಉದಾಹರಣೆಯೊಂದಿಗೆ ಮಾರ್ಮಿಕ ಉತ್ತರ ನೀಡಿದ್ದಾರೆ.
ಈ ಬಗ್ಗೆ ಹಿರಿಯ ಪತ್ರಕರ್ತ ಬಸವರಾಜ ಮುದನೂರ್ ಅವರು ಬರೆದಿರುವ ವಿಶೇಷ ಲೇಖನ ಸುದ್ದಿಒನ್ ಓದುಗರ ಮುಂದೆ.

ಕಳೆದ ವರ್ಷ ನಮ್ಮೂರಿಗೆ ತೆರಳಿದ್ದ ವೇಳೆ ದಿಡೀರನೇ ಆರೋಗ್ಯ ಕೈಕೊಟ್ಟಿತ್ತು. ಸದಾ ಸಕಲರಿಗೂ ಸಂಪ್ರೀತಿ ಹಂಚಲು ಪ್ರೇರಿಪಿಸುವ ಹೃದಯವೇ ದಣಿದಿತ್ತು. ಸಹೋದರರು, ಸನ್ಮಿತ್ರರ ಸಮಯಪ್ರಗ್ನೆಯಿಂದ ಸಕಾಲಕ್ಕೆ ಆಸ್ಪತ್ರೆ ಸೇರಿದ್ದೆನು. ನಮ್ಮೂರಿನವರೇ ಆದ ಸಹೋದರ ಡಾ.ಶಂಕರಗೌಡರು ಸೂಕ್ತ ಚಿಕಿತ್ಸೆ ನೀಡಿ ಬಚಾವ್ ಮಾಡಿದ್ದರು. ಸದ್ಯ ಆರೋಗ್ಯವೇನೋ ಯಥಾಸ್ಥಿತಿಗೆ ಮರಳಿದೆ. ಆದರೆ ಈ ಹೃದಯವೇಕೆ ಹೀಗೆ? ಎಂಬ ಪ್ರಶ್ನೆ ಮಾತ್ರ ಕಾಡುತ್ತಲೇ ಇತ್ತು. ಮಾನಸಿಕ ತೊಳಲಾಟಕ್ಕೆ ಸಂತರ ಗುರುಬೋಧನೆಯ ಅಗತ್ಯತೆ ಇದೆ ಅನ್ನಿಸುತ್ತಿತ್ತು.
ತಪೋಭೂಮಿಯ ಶ್ರೀಗುರುವಿನ ಬಗ್ಗೆ ಕೇಳಿ ತಿಳಿದಿದ್ದೆನು. ಎರಡು ದಶಕದಲ್ಲಿ ಅನೇಕ ಸಲ ಪುಣ್ಯಭೂಮಿಗೆ ಹೋಗಿ ಬಂದಿದ್ದಿದೆ. ಒಂದೆರಡು ಸಲ ದೂರದಿಂದಲೇ ಗುರುವಿನ ದರ್ಶನ ಪಡೆಯುವ ಅವಕಾಶ ಲಭಿಸಿತ್ತು. ಅನಾರೋಗ್ಯದ ಬಳಿಕವೂ ತಪೋಭೂಮಿಯ ದರ್ಶನ ಪಡೆದಿದ್ದುಂಟು. ಈಸಲ ಗುರುವಿನ ದರ್ಶನ ಜತೆಗೆ ಗುರುಬೋಧನೆ ಆಗಬೇಕೆಂಬ ಆಶಯ ಮನದಲ್ಲಿ ಮೂಡಿತ್ತು.
ಶ್ರಾವಣ ಸೋಮವಾರ ಕುಟುಂಬ ಸಮೇತ ಕಣ್ವಕುಪ್ಪೆಯ ತಪೋವನಕ್ಕೆ ತೆರಳಿ ಗವಿಮಠದ ದರ್ಶನ ಪಡೆದೆವು. ಶ್ರೀಗುರುಗಳು ದೇಗುಲದ ಪಕ್ಕದ ಕುಟೀರದ ಬಳಿ ಆಸೀನರಾಗಿದ್ದರು. ಕಾವಿಧಾರಿ ಶ್ರೀಗಳ ದಿವ್ಯ ತೇಜಸ್ಸು ಎಂಥವರನ್ನೂ ಮಂತ್ರಮುಗ್ಧಗೊಳಿಸುವಂತಿತ್ತು. ಅನೇಕ ಭಕ್ತರು ಶ್ರೀಗಳೆದುರು ಭಕ್ತಿಪರವಶರಾಗಿ ಕುಳಿತಿದ್ದರು. ನಾವುಗಳು ಸಹ ಹೋಗಿ ಗುರುಗಳ ಪಾದತಲದಲ್ಲಿ ಆಸೀನರಾದೆವು. ಶ್ರೀಗಳ ಭೇಟಿ ವೇಳೆ ಹೆಣ್ಣು ಮಕ್ಕಳು ತಲೆ ಮೇಲೆ ಸೆರಗು ಹೊದ್ದು ಬರುತ್ತಿದ್ದರು. ಮರೆತವರಿಗೆ ‘ತಲೆ ಮೇಲೆ ಸೆರಗು ಹಾಕಿಕೊಳ್ಳಮ್ಮ’ ಎಂದು ಶ್ರೀಗಳೇ ಸೂಚಿಸುತ್ತಿದ್ದರು. ಕೆಲಹೊತ್ತು ಕುಳಿತು ಧ್ಯಾನಿಸಿದ ಭಕ್ತರು ಬಳಿಕ ಆಶೀರ್ವಾದ ಪಡೆದು ತೆರಳುತ್ತಿದರು. ಶ್ರೀಗಳು ಕಲ್ಲು ಸಕ್ಕರೆ ಕೊಟ್ಟು ಒಳ್ಳೆಯದಾಗಲಿ ಹೋಗಿಬನ್ನಿ ಎಂದು ಹರಸುತ್ತಿದ್ದರು.
ಕೆಲವರು ಮಕ್ಕಳ ಮದುವೆ ಬಗ್ಗೆ, ಗೃಹ ನಿರ್ಮಾಣ, ಗೃಹ ಪ್ರವೇಶ ಬಗ್ಗೆ ಕೇಳಿದಾಗ ಶ್ರೀಗಳು ಪಂಚಾಂಗ ನೋಡಿ ಮದುವೆ-ಮೂಹರ್ತದ ಬಗ್ಗೆ ಸಲಹೆ ನೀಡುತ್ತಿದ್ದರು. ಮಕ್ಕಳಿಗೆ ಚನ್ನಾಗಿ ಓದಿ, ಕುರುಕಲು ತಿನಿಸು ಬಿಟ್ಟು ಆರೋಗ್ಯ ಕಾಪಾಡಿಕೊಳ್ಳಿ ಎಂದು ಸೂಚಿಸುತ್ತಿದ್ದರು. ಸಣ್ಣಗಿದ್ದ ಮಕ್ಕಳಿಗೆ ಹಠ ಬಿಟ್ಟು ಅಮ್ಮ ಕೊಟ್ಟ ಆಹಾರ, ಹಣ್ಣು-ಹಂಪಲು ತಿಂದು ಗಟ್ಟಿ ಆಗಬೇಕೆಂದು ಹೇಳಿ ಆಶೀರ್ವದಿಸಿದರು. ಯುವಕರಿಗೆ ಬೈಕ್ ನಲ್ಲಿ ಓಡಾಡುವಾಗ ಹುಷಾರು. ಅತಿ ವೇಗ ಒಳ್ಳೆಯದಲ್ಲ; ನಿಮ್ಮ ತಂದೆ ತಾಯಿ ನಿಮ್ಮ ಮೇಲೆ ಜೀವವೇ ಇಟ್ಟುಕೊಂಡಿದ್ದಾರೆ. ಓದಿನ ಕಡೆ ಗಮನ ಕೊಡಿ ಎಂದು ತಿಳಿ ಹೇಳುತ್ತಿದ್ದರು. ಮನದಲ್ಲೇ ಜಪಿಸಿ ಕೈಗೆ ಕಟ್ಟಲು ಶ್ರೀರಕ್ಷೆಯ ದಾರ ನೀಡುತ್ತಿದ್ದರು. ಹಿರಿಯರಿಗೆ ಭಗವದ್ಗೀತೆಯ ಪುಸ್ತಕ ನೀಡಿ ಆಶೀರ್ವದಿಸಿದರು. ಭಕ್ತರು ಭಕ್ತಿಯ ಕಾಣಿಕೆ ಹಾಕಿ ಮುಂದೆ ಸಾಗುತ್ತಿದ್ದರು.
ಶ್ರೀಗಳೆದುರು ಕುಳಿತಲ್ಲೇ ಎಲ್ಲವನ್ನೂ ಗ್ರಹಿಸುತ್ತಿದ್ದ ನನಗೆ ಸಾಕಿಷ್ಟು ಗುರುವಿನ ದರ್ಶನ ಅನ್ನಿಸಿತು. ಅಷ್ಟರಲ್ಲೇ ನಮ್ಮ ಸರದಿ ಬಂದಿತ್ತು. ಶ್ರೀಗಳು ಏನು ಬಂದಿದ್ದು ಎಂದು ಕೇಳಿದರು. ‘ನಿಮ್ಮ ಆಶೀರ್ವಾದ ಪಡೆಯಲು ಬಂದಿದ್ದೇವೆ ಅಷ್ಟೇ’ ಎಂದಾಗ ನಗುತ್ತಲೇ ಕಲ್ಲು ಸಕ್ಕರೆ ನೀಡಿದರು. ಅಷ್ಟರಲ್ಲೇ ನನ್ನ ಮಡದಿ ಗುರುಗಳೇ ‘ಹಿರಿ ಮಗ ವಿನಯ ಇತ್ತೀಚೆಗೆ ಹೆಚ್ಚು ಹಠ ಮಾಡುತ್ತಿದ್ದಾನೆ ನೋಡಿ’ ಎಂದಳು. ಕ್ಷಣಕಾಲ ಧ್ಯಾನಿಸಿದ ಶ್ರೀಗಳು ‘ಎಡಭಾಗದ ಕಿವಿಯಲ್ಲಿ ಕಪ್ಪು ಮಚ್ಚೆ ಇದೆಯೇ’ ಎಂದು ಕೇಳಿದರು. ನಾವು ವಿನಯನ ಎಡ ಕಿವಿಯತ್ತ ನೋಡುತ್ತಲೇ ‘ಇಲ್ಲ’ ಎಂದೇ ಉತ್ತರಿಸಿದೆವು. ‘ಸರಿಯಾಗಿ ನೋಡಿ ಕಪ್ಪು ಚುಕ್ಕೆ ಆಕಾರದ ಮಚ್ಚೆ ಇದೆ’ ಎಂದಾಗ ಕಿವಿಯೊಳಗೆ ಹೊರಗೆ ಕಾಣಿಸದಂತಿರುವ ಕಪ್ಪು ಚುಕ್ಕಿ ಕಂಡು ಅಚ್ಚರಿ ಮೂಡಿತು. ‘ತೊಂದರೆ ಏನಿಲ್ಲ, ಹಠ ಬಿಡು, ಆಟದ ಕಡೆ ಗಮನ ಕಡಿಮೆ ಮಾಡಿ ಓದುವ ಕಡೆ ಗಮನಹರಿಸು ವಿನಾಯಕ’ ಎಂದು ಹೇಳಿದರು.
‘ಆರೋಗ್ಯ ಕಡೆ ಗಮನವಿರಲಿ’ ಎನ್ನುತ್ತಲೇ ಗುರುಗಳು ನನ್ನತ್ತ ದೃಷ್ಟಿ ಹರಿಸಿದರು. ಶ್ರೀಗಳೇ ಏನೋ ಕೇಳಿದಂತಾಗಿ ‘ಕಳೆದ ವರ್ಷ ದಿಡೀರನೇ ಅನಾರೋಗ್ಯ ಕಾಡಿತ್ತು. ನನಗಂತೂ ಬೈಬರ್ತ್ ಯಾವುದೇ ದುಶ್ಚಟಗಳಿಲ್ಲ. ಆದರೂ ಏಕೆ ಹಾರ್ಟ್ ಅಟ್ಯಾಕ್ ಆಯಿತೋ ಗೊತ್ತಿಲ್ಲ ಗುರುಗಳೇ’ ಎಂದು ಕೈಮುಗಿದೆನು. ಶ್ರಿಗುರುಗಳು ನನ್ನನ್ನೇ ನೋಡುತ್ತ ಪದ್ಮಾಸನ ಹಾಕಿ ಕ್ಷಣಹೊತ್ತು ಧ್ಯಾನಕ್ಕೆ ಶರಣಾದರು. ಬಳಿಕ ‘ತೊಂದರೆ ಏನಿಲ್ಲ; ಆಹಾರವೇ ಕಲುಷಿತಗೊಂಡಿದ್ದರ ಪರಿಣಾಮ ಈರೀತಿಯ ಅನಾರೋಗ್ಯಗಳು ಕಾಡುತ್ತವೆ. ಯಾವುದೇ ದುಶ್ಚಟಗಳಿಲ್ಲ, ಪ್ರಾಮಾಣಿಕ ಜೀವನ ಸಾಗಿಸಿದರೂ ಕಷ್ಟಗಳು ನಮ್ಮನ್ನೇ ಏಕೆ ಕಾಡುತ್ತವೆ ಎಂಬುದು ನಿಮ್ಮಂಥ ಅನೇಕರ ಪ್ರಶ್ನೆ ಆಗಿದೆ. ಪ್ರಾರಬ್ಧ, ಕರ್ಮಫಲಗಳು ಕಾಡುತ್ತವೆ’ ಎಂದು ಮಹಾಭಾರತದ ಕಥೆ ಶುರು ಮಾಡಿದರು. ನೆರೆದಿದ್ದವರೆಲ್ಲ ನಿಶ್ಯಬ್ಧವಾದರು. ಗುರುಗಳ ದಿವ್ಯದನಿಯತ್ತಲೇ ಭಕ್ತರೆಲ್ಲರ ಚಿತ್ತ ನೆಟ್ಟಿತು.
‘ಭೀಷ್ಮ ಪಿತಾಮಹ ಎಂದೇ ಖ್ಯಾತಿ ಗಳಿಸಿದವರಲ್ಲವೇ. 58 ದಿನ ಮರಣಶಯ್ಯೆಯಲ್ಲಿ ನರಳುವ ದುಸ್ಥಿತಿ ಎದುರಾಗುತ್ತದೆ. ನೆಟ್ಟ ಬಾಣಗಳಿಂದ ರಕ್ತ ಸೋರಿ, ಕಿವವಾಗಿ, ದುರ್ವಾಸನೆ ಬೀರುವ ದಾರುಣ ಸ್ಥಿತಿ ಎದುರಾಗುತ್ತದೆ. ಭೀಷ್ಮ ಶ್ರೀಕೃಷ್ಣನಿಗೆ ಈ ಬಗ್ಗೆ ಪ್ರಶ್ನೆ ಮಾಡುತ್ತಾನೆ. ನಾನೇನು ಕರ್ಮ ಮಾಡಿದ್ದೇನೆ?. ನನಗೇ ಏಕೆ ಇಂಥ ಪರಿಸ್ಥಿತಿ ಬಂತು ಎಂದಾಗ ಶ್ರೀಕೃಷ್ಣ ಪ್ರಾರಬ್ಧ ಮತ್ತು ಕರ್ಮದ ಬಗ್ಗೆ ಹೇಳುತ್ತಾನೆ.
ಭೀಷ್ಮ ಸ್ವರ್ಗವಾಸಿ ಆಗಿದ್ದು ಅಷ್ಟವಸುಗಳಲ್ಲೋರ್ವ ಆಗಿದ್ದನು. ಅಷ್ಟವಸುಗಳಲ್ಲಿ ದು ಅಥವಾ ಪ್ರಭಾಸ್ ಎಂಬ ಹೆಸರಿನ ಪ್ರಮುಖನಾಗಿದ್ದನು. ಅದೊಂದು ಸಲ ಸ್ವರ್ಗವಾಸಿ ಅಷ್ಟವಸುಗಳು ಭೂಲೋಕ ವೀಕ್ಷಣೆಗೆ ಬರುತ್ತಾರೆ’.
‘ವಸಿಷ್ಟ ಋಷಿಗಳ ಆಶ್ರಮದ ಬಳಿ ಬಂದಾಗ ಕಾಮಧೇನುವಿನ ಮಗಳು ನಂದಿನಿಯನ್ನು ಕಂಡು ಪ್ರಭಾಸ್ ನ ಪತ್ನಿ ಮನ ಸೋಲುತ್ತಾಳೆ. ನಂದಿನಿಯನ್ನು ಸ್ವರ್ಗಕ್ಕೆ ಕೊಂಡೊಯ್ಯಲು ಆಸೆ ಪಡುತ್ತಾಳೆ. ಪತ್ನಿಯ ಆಸೆ ಪೂರೈಸಲು ಮುಂದಾದ ಪ್ರಭಾಸ್ ಉಳಿದ ವಸುಗಳ ನೆರವು ಪಡೆದು ನಂದಿನಿ ಸ್ವರ್ಗಕ್ಕೆ ಒಯ್ಯಲು ಮುಂದಾಗುತ್ತಾರೆ. ನಂದಿನಿ ಸುತಾರಂ ಸ್ಪಂದಿಸುವುದಿಲ್ಲ. ಆಗ ಕೈಗೆ ಸಿಕ್ಕ ಮುಳ್ಳು ಕಟ್ಟಿಗೆಯಿಂದ ನಂದಿನಿಗೆ ಒಡೆಯುತ್ತಾರೆ. ಪರಿಣಾಮ ನಂದಿನ ಕಿವಿ ಹರಿಯುತ್ತದೆ, ಮೈಯೆಲ್ಲ ಮುಳ್ಳು ಚುಚ್ಚಿ ರಕ್ತಸ್ರಾವ ಆಗುತ್ತದೆ. ನಂದಿನಿ ಪಡಬಾರದ ನರಕ ಯಾತನೆ ಪಡಬೇಕಾಗುತ್ತದೆ’.
‘ವಸಿಷ್ಟ ಮಹರ್ಷಿಗಳು ದಿವ್ಯ ದೃಷ್ಟಿಯಿಂದ ಗಮನಿಸಿ ಅಷ್ಟವಸುಗಳಿಗೆ ಶಾಪ ನೀಡುತ್ತಾರೆ. ಭೂಲೋಕದಲ್ಲಿ ಜನಿಸಿ ನಂದಿನ ಅನುಭವಿಸಿದ ಶಿಕ್ಷೆ ಅನುಭವಿಸುವಂತಾಗಲಿ ಎಂದು ಶಾಪ ನೀಡುತ್ತಾರೆ. ಪರಿಣಾಮ ಸ್ವರ್ಗವಾಸಿ ಪ್ರಭಾಸ್ ಭೂಲೋಕದಲ್ಲಿ ಗಂಗಾಮಾತೆ ಮತ್ತು ಶಂತ ಮಹಾರಾಜರ ಮಗನಾಗಿ ಜನಿಸಿ ಭಿಷ್ಮ ಪಿತಾಮಹ ಎಂದೇ ಖ್ಯಾತಿ ಗಳಿಸುತ್ತಾನೆ. ಕೊನೆ ಗಳಿಗೆಯಲ್ಲಿ ಅರ್ಜುನನ ಬಾಣಗಳಿಗೆ ತುತ್ತಾಗಿ ಶರಪಂಜರದ ಮೇಲೆ ಪ್ರಾಣ ಬಿಡುವ ಪರಿಸ್ಥಿತಿ ಎದುರಾಗುತ್ತದೆ.
ಅಂಥ ಸ್ವರ್ಗವಾಸಿಗಳಿಗೆ ಪ್ರಾರಬ್ಧ, ಕರ್ಮಫಲ ಬಿಟ್ಟಿಲ್ಲ. ಒಂದೊಮ್ಮೆ ದುಷ್ಟರು, ದುರುಳರು ಆರಾಮಾಗಿದಾರಲ್ಲ ಎಂದೆನಿಸಬಹುದು. ಹಾಗಂತ ಧೃತಿಗೆಡಬಾರದು, ಧರ್ಮ ಮಾರ್ಗ ಬಿಡಬಾರದು. ಬಿಟ್ಟರೆ ಕೆಟ್ಟಂತೆಯೇ ಸರಿ’ ಎಂದು ಎಚ್ಚರಿಸಿದರು. ‘ಬರುವುದೆಲ್ಲ ಬರಲಿ ಭಗವಂತನ ದಯೆ ಇರಲಿ ಎಂದು ಮುನ್ನಡೆಯಬೇಕು’ ಎಂದು ಹೇಳುತ್ತಲೇ ಎನ್ನ ಮನಸಲ್ಲಿ ಕೊರೆಯುತ್ತಿದ್ದ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿ ಮನಸು ಹಗುರಗೊಳಿಸಿದರು. ಪಾದಸ್ಪರ್ಶಿಸಿ ನಮಿಸಿದಾಗ ಎದೆಗುಂದದೆ ಮುನ್ನಡೆಯಿರಿ ಏನೂ ತೊಂದರೆ ಇಲ್ಲ ‘ ಎಂದು ಶುಭಾಶೀರ್ವಾದ ಕರುಣಿಸಿದರು. ಕಿರಿ ಮಗ ವಿವೇಕನನ್ನ ನೋಡಿ ಅಣ್ಣನ ಮೇಲೆ ಸವಾರಿ ಮಾಡ್ತಿಯಾ ನೀನು, ಜೋರು ಇದಾನಲ್ಲ ಇವನು ಎಂದು ನಕ್ಕು ನಗಿಸಿದರು. ಸುಮಾರು ಅರ್ಧಗಂಟೆ ಕಾಲ ಶ್ರೀಗುರುವಿನ ಬೋಧನೆ ಆಲಿಸುವ ಸುಸಮಯ ದಕ್ಕಿದ್ದು ನಮ್ಮ ಪುಣ್ಯವೇ ಸರಿ.
ಗುರು ಬೋಧನೆಯ ಗುಂಗಿನಲ್ಲೇ ನಲವತ್ತು ಕಿ.ಮೀ ದೂರದ ದುರ್ಗಕ್ಕೆ ಬಂದೆವು. ಮನೆಯಲ್ಲಿ ರಾತ್ರಿ ಊಟಕ್ಕೆ ಕುಳಿತ ವೇಳೆ ಗುರುಗಳು ಹೇಳಿದ ಕಥೆ ಹೇಗಿತ್ತೆಂದಾಗ ಹಿರಿಮಗ ವಿನಯ ಪೂರ್ಣ ಕಥೆಯನ್ನು ಗಿಳಿಪಾಠದಂತೆ ಹೇಳಿ ಬೆರಗುಗೊಳಿಸಿದನು. ಶ್ರೀಗುರುವಿನ ಗುರುಬೋಧನೆಗೆ ಇನ್ನೆಂಥ ಸಾರ್ಥಕತೆ ಬೇಕು!
ಶ್ರೀಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು…














