ಮೈಸೂರು-ಅಜ್ಮೀರ್ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆ ಸೆಪ್ಟೆಂಬರ್ 5, 2026ರಿಂದ ಅಧಿಕೃತವಾಗಿ ಆರಂಭವಾಗಲಿದೆ. ರೈಲು ಸಂಖ್ಯೆ 16281/16282ರ ಈ ಸೇವೆ ದಕ್ಷಿಣ, ಮಧ್ಯ ಹಾಗೂ ಉತ್ತರ ಕರ್ನಾಟಕದ ಪ್ರಮುಖ ನಗರಗಳನ್ನು ಅಜ್ಮೀರ್ನೊಂದಿಗೆ ಸಂಪರ್ಕಿಸಲಿದೆ.ಸೆಪ್ಟೆಂಬರ್ 5ರಂದು ಶನಿವಾರ ಬೆಳಗ್ಗೆ 8 ಗಂಟೆಗೆ ಮೈಸೂರು ಜಂಕ್ಷನ್ನಿಂದ ರೈಲು ತನ್ನ ಮೊದಲ ಸಂಚಾರ ಆರಂಭಿಸಲಿದೆ. ಮೈಸೂರಿನಿಂದ ಹೊರಟು ಹಾಸನ, ದಾವಣಗೆರೆ, ಕೊಟ್ಟೂರು, ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ಲೋಂಡಾ ಸೇರಿದಂತೆ ಹಲವು ಪ್ರಮುಖ ನಿಲ್ದಾಣಗಳಲ್ಲಿ ನಿಲುಗಡೆ ಪಡೆದು ಮಹಾರಾಷ್ಟ್ರ, ಗುಜರಾತ್ ಮಾರ್ಗವಾಗಿ ಅಜ್ಮೀರ್ ತಲುಪಲಿದೆ.
ಅಜ್ಮೀರ್ನಿಂದ ಸೆಪ್ಟೆಂಬರ್ 7ರಂದು ಸೋಮವಾರ ಸಂಜೆ 6.30ಕ್ಕೆ ರೈಲು ಮೈಸೂರಿನತ್ತ ಪ್ರಯಾಣ ಆರಂಭಿಸಲಿದೆ. ಸುಮಾರು 48 ಗಂಟೆಗಳ ಪ್ರಯಾಣದ ಬಳಿಕ ಸಂಜೆ 7 ಗಂಟೆಗೆ ಮೈಸೂರು ತಲುಪಲಿದೆ.ಭಾರತೀಯ ರೈಲ್ವೆ ಮಾಹಿತಿಯಂತೆ, ಈ ರೈಲು ವಾರಕ್ಕೊಮ್ಮೆ ಮಾತ್ರ ಸಂಚರಿಸಲಿದೆ. ಈ ಹಿಂದೆ ವಿಶೇಷ ರೈಲು ಸಂಖ್ಯೆಗಳಾದ 06281/06282ರ ಅಡಿಯಲ್ಲಿ ಸಂಚರಿಸುತ್ತಿದ್ದ ಸೇವೆಯನ್ನು ಇದೀಗ 16281/16282 ಸಂಖ್ಯೆಯ ಸಾಪ್ತಾಹಿಕ ಎಕ್ಸ್ಪ್ರೆಸ್ ರೈಲು ಸೇವೆಯಾಗಿ ಕ್ರಮಬದ್ಧಗೊಳಿಸಲಾಗಿದೆ.
ಕರ್ನಾಟಕದ 15ಕ್ಕೂ ಹೆಚ್ಚು ಪ್ರಮುಖ ನಿಲ್ದಾಣಗಳಲ್ಲಿ ಈ ರೈಲಿಗೆ ನಿಲುಗಡೆ ಇರಲಿದ್ದು, ಮೈಸೂರು, ಹಾಸನ ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳನ್ನು ಕೊಪ್ಪಳ, ಗದಗ, ಹುಬ್ಬಳ್ಳಿ, ಧಾರವಾಡ ಹಾಗೂ ಬೆಳಗಾವಿಯಂತಹ ಉತ್ತರ ಕರ್ನಾಟಕದ ಪ್ರಮುಖ ನಗರಗಳೊಂದಿಗೆ ಸಂಪರ್ಕಿಸಲಿದೆ. ಇದರೊಂದಿಗೆ ಗೋವಾ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನ ರಾಜ್ಯಗಳಿಗೂ ರೈಲು ಸಂಪರ್ಕ ಕಲ್ಪಿಸಲಿದೆ.

ಮೈಸೂರು-ಅಜ್ಮೀರ್ ಎಕ್ಸ್ಪ್ರೆಸ್ ಸೇವೆಯಿಂದ ಕರ್ನಾಟಕದ ವಿವಿಧ ಭಾಗಗಳ ಪ್ರಯಾಣಿಕರಿಗೆ ಅಜ್ಮೀರ್ ಸೇರಿದಂತೆ ಉತ್ತರ ಭಾರತದ ಪ್ರಮುಖ ಸ್ಥಳಗಳಿಗೆ ಪ್ರಯಾಣಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ಈ ರೈಲು ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕೇಂದ್ರ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.










