Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವಂಶವೃಕ್ಷ ಪ್ರಮಾಣಪತ್ರ ಪಡೆಯುವುದು ಹೇಗೆ? ಬೇಕಾಗುವ ದಾಖಲೆ ಏನು

---Advertisement---

ಬೆಂಗಳೂರು: ಆಸ್ತಿ ಹಕ್ಕು, ವಾರಸುದಾರಿಕೆ, ಪಿಂಚಣಿ ಸೇರಿದಂತೆ ಹಲವು ಸರ್ಕಾರಿ ಹಾಗೂ ಕಾನೂನು ಸಂಬಂಧಿತ ಕೆಲಸಗಳಿಗೆ ವಂಶವೃಕ್ಷ ಪ್ರಮಾಣಪತ್ರ ಪ್ರಮುಖ ದಾಖಲೆಯಾಗಿದೆ. ಕುಟುಂಬದ ಸದಸ್ಯರ ನಡುವಿನ ಸಂಬಂಧ ಹಾಗೂ ವಂಶಾವಳಿಯನ್ನು ಅಧಿಕೃತವಾಗಿ ದೃಢೀಕರಿಸುವ ಈ ಪ್ರಮಾಣಪತ್ರವನ್ನು ಆಸ್ತಿ ಹಂಚಿಕೆ, ವಾರಸುದಾರಿಕೆ ಹಾಗೂ ಸರ್ಕಾರಿ ದಾಖಲೆಗಳಲ್ಲಿನ ಬದಲಾವಣೆ ಸೇರಿದಂತೆ ವಿವಿಧ ಸಂದರ್ಭಗಳಲ್ಲಿ ಬಳಸಲಾಗುತ್ತದೆ.

ಕರ್ನಾಟಕ ಕಂದಾಯ ಇಲಾಖೆಯ ಮಾರ್ಗಸೂಚಿಯಂತೆ ವಂಶವೃಕ್ಷ ಪ್ರಮಾಣಪತ್ರ ಪಡೆಯಲು ಅರ್ಜಿ ಸಲ್ಲಿಕೆ, ದಾಖಲೆಗಳ ಪರಿಶೀಲನೆ ಹಾಗೂ ಪ್ರಮಾಣಪತ್ರ ವಿತರಣೆ ಸೇರಿದಂತೆ ನಿರ್ದಿಷ್ಟ ಪ್ರಕ್ರಿಯೆ ಇದೆ.

ವಂಶವೃಕ್ಷ ಪ್ರಮಾಣಪತ್ರಕ್ಕೆ ಬೇಕಾಗುವ ದಾಖಲೆಗಳು
ಅರ್ಜಿ ಸಲ್ಲಿಸುವಾಗ ಸಾಮಾನ್ಯವಾಗಿ ಈ ದಾಖಲೆಗಳನ್ನು ಒದಗಿಸಬೇಕು:
₹100 ಮುಖಬೆಲೆಯ ಸ್ಟಾಂಪ್ ಪೇಪರ್‌ನಲ್ಲಿ ನೋಟರಿಯಿಂದ ದೃಢೀಕರಿಸಿದ ಅಫಿಡವಿಟ್
ಅರ್ಜಿದಾರರ ಆಧಾರ್ ಇ-ಕೆವೈಸಿ
ಜೀವಂತ ಕುಟುಂಬ ಸದಸ್ಯರ ಗುರುತಿನ ದಾಖಲೆ
ಆಧಾರ್, ಮತದಾರರ ಗುರುತಿನ ಚೀಟಿ, ಪಾಸ್‌ಪೋರ್ಟ್, ಚಾಲನಾ ಪರವಾನಗಿ, ಪ್ಯಾನ್ ಕಾರ್ಡ್ ಅಥವಾ ಶಾಲಾ ದಾಖಲೆಗಳ ಪೈಕಿ ಅಗತ್ಯವಿರುವ ದಾಖಲೆ
ಅರ್ಜಿದಾರರ ಪಾಸ್‌ಪೋರ್ಟ್ ಅಳತೆಯ ಭಾವಚಿತ್ರ

ಮೃತಪಟ್ಟ ಕುಟುಂಬ ಸದಸ್ಯರ ವಿವರ ಸೇರಿಸುವುದು ಹೇಗೆ?
ವಂಶವೃಕ್ಷದಲ್ಲಿ ಮೃತಪಟ್ಟ ಸದಸ್ಯರ ಹೆಸರನ್ನು ಸೇರಿಸಬೇಕಾದರೆ ಅವರ ಡಿಜಿಟಲ್ ಮರಣ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸಬೇಕು.ಡಿಜಿಟಲ್ ಮರಣ ಪ್ರಮಾಣಪತ್ರ ಲಭ್ಯವಿಲ್ಲದಿದ್ದರೆ ದೃಢೀಕೃತ ಭೌತಿಕ ಮರಣ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಎರಡೂ ದಾಖಲೆಗಳು ಲಭ್ಯವಿಲ್ಲದ ಸಂದರ್ಭದಲ್ಲಿ, ಮೃತ ವ್ಯಕ್ತಿಯ ಗುರುತಿನ ದಾಖಲೆಯೊಂದಿಗೆ ಗ್ರಾಮ ಆಡಳಿತ ಅಧಿಕಾರಿಯ ಪರಿಶೀಲನಾ ವರದಿಯನ್ನು ಸಲ್ಲಿಸಬೇಕಾಗುತ್ತದೆ.

ಎಲ್ಲಿ ಅರ್ಜಿ ಸಲ್ಲಿಸಬಹುದು?
ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ನಾಡಕಚೇರಿ, ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರ ಅಥವಾ ಅಧಿಕೃತ ಆನ್‌ಲೈನ್ ನಾಗರಿಕ ಸೇವಾ ಪೋರ್ಟಲ್ ಮೂಲಕ ಸಲ್ಲಿಸಬಹುದು.

ಅರ್ಜಿ ಸಲ್ಲಿಸಿದ ನಂತರ ಏನಾಗುತ್ತದೆ?
ಅರ್ಜಿ ಸ್ವೀಕರಿಸಿದ ಬಳಿಕ ಗ್ರಾಮ ಆಡಳಿತ ಅಧಿಕಾರಿ ಅರ್ಜಿದಾರರ ಮನೆಗೆ ಭೇಟಿ ನೀಡಿ ಕುಟುಂಬದ ಸದಸ್ಯರು ಹಾಗೂ ದಾಖಲೆಗಳನ್ನು ಪರಿಶೀಲಿಸುತ್ತಾರೆ.ನಂತರ ಪರಿಶೀಲನಾ ವರದಿಯನ್ನು ರಾಜಸ್ವ ನಿರೀಕ್ಷಕರಿಗೆ ಕಳುಹಿಸಲಾಗುತ್ತದೆ. ರಾಜಸ್ವ ನಿರೀಕ್ಷಕರು ವರದಿಯನ್ನು ಪರಿಶೀಲಿಸಿ, ಅಗತ್ಯವಿದ್ದರೆ ಸ್ಥಳ ತನಿಖೆ ನಡೆಸಿ ಉಪ ತಹಶೀಲ್ದಾರರಿಗೆ ಶಿಫಾರಸು ಮಾಡುತ್ತಾರೆ.ಅಂತಿಮವಾಗಿ ವಂಶವೃಕ್ಷ ಪ್ರಮಾಣಪತ್ರ ನೀಡುವ ಅಥವಾ ಅರ್ಜಿಯನ್ನು ತಿರಸ್ಕರಿಸುವ ಅಧಿಕಾರ ಉಪ ತಹಶೀಲ್ದಾರರಿಗೆ ಇರುತ್ತದೆ.

ಎಷ್ಟು ದಿನಗಳಲ್ಲಿ ಪ್ರಮಾಣಪತ್ರ ಸಿಗುತ್ತದೆ?
ಹೊಸ ಮಾರ್ಗಸೂಚಿಯ ಪ್ರಕಾರ ಅರ್ಜಿಯನ್ನು 14 ದಿನಗಳ ಒಳಗೆ ವಿಲೇವಾರಿ ಮಾಡಬೇಕಾಗಿದೆ. ಪ್ರಮಾಣಪತ್ರ ಮಂಜೂರಾದ ಅಥವಾ ಅರ್ಜಿ ತಿರಸ್ಕೃತಗೊಂಡ ಮಾಹಿತಿಯನ್ನು ಅರ್ಜಿದಾರರಿಗೆ SMS ಅಥವಾ ಇ-ಮೇಲ್ ಮೂಲಕ ತಿಳಿಸಲಾಗುತ್ತದೆ.

ಸುಳ್ಳು ಮಾಹಿತಿ ನೀಡಿದರೆ ಕಾನೂನು ಕ್ರಮ
ವಂಶವೃಕ್ಷ ಪ್ರಮಾಣಪತ್ರ ಪಡೆಯುವ ಸಂದರ್ಭದಲ್ಲಿ ತಪ್ಪು ಅಥವಾ ಸುಳ್ಳು ಮಾಹಿತಿ ನೀಡಿದರೆ ಅರ್ಜಿದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ. ಹೀಗಾಗಿ ಕುಟುಂಬದ ಸದಸ್ಯರ ಹೆಸರು, ಸಂಬಂಧ ಹಾಗೂ ಇತರ ವಿವರಗಳನ್ನು ಅರ್ಜಿಯಲ್ಲಿ ನಿಖರವಾಗಿ ನಮೂದಿಸುವುದು ಮುಖ್ಯ.

ಪ್ರಮಾಣಪತ್ರದ ಮಾನ್ಯತೆ ಎಷ್ಟು?
ವಂಶವೃಕ್ಷ ಪ್ರಮಾಣಪತ್ರವು ಕುಟುಂಬದಲ್ಲಿ ಹೊಸ ಜನನ ಅಥವಾ ಮರಣ ಸಂಭವಿಸುವವರೆಗೆ, ಅಥವಾ ಗರಿಷ್ಠ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.

ವಂಶವೃಕ್ಷ ಪ್ರಮಾಣಪತ್ರದಲ್ಲಿ ಯಾವ ವಿವರಗಳಿರುತ್ತವೆ?
ವಂಶವೃಕ್ಷದಲ್ಲಿ ಸಾಮಾನ್ಯವಾಗಿ ಈ ವಿವರಗಳನ್ನು ದಾಖಲಿಸಲಾಗುತ್ತದೆ:
ಅರ್ಜಿದಾರರ ಹೆಸರು
ತಂದೆ ಅಥವಾ ತಾಯಿ ಹೆಸರು
ಪತಿ ಅಥವಾ ಪತ್ನಿಯ ಹೆಸರು
ಮಗ ಅಥವಾ ಮಗಳ ಹೆಸರು
ಮೊಮ್ಮಕ್ಕಳ ವಿವರ
ಕುಟುಂಬ ಸದಸ್ಯರ ವಯಸ್ಸು
ಅರ್ಜಿದಾರರೊಂದಿಗೆ ಇರುವ ಸಂಬಂಧ
ಅಗತ್ಯವಿದ್ದಲ್ಲಿ ಆಧಾರ್, ಪ್ಯಾನ್ ಅಥವಾ ಎಪಿಕ್ ವಿವರ
ಮೃತ ವ್ಯಕ್ತಿಯ ಹೆಸರು ಮತ್ತು ಮರಣದ ವಿವರ
ಕುಟುಂಬದ ವಿಳಾಸ

ಯಾವ ಸಂದರ್ಭಗಳಲ್ಲಿ ವಂಶವೃಕ್ಷ ಬೇಕಾಗುತ್ತದೆ?
ವಂಶವೃಕ್ಷ ಪ್ರಮಾಣಪತ್ರವನ್ನು ಪ್ರಮುಖವಾಗಿ ಈ ಸಂದರ್ಭಗಳಲ್ಲಿ ಬಳಸಲಾಗುತ್ತದೆ:
ಆಸ್ತಿಯ ಮಾಲೀಕರು ಮೃತಪಟ್ಟಾಗ
ವಾರಸುದಾರರನ್ನು ಗುರುತಿಸಲು
ಪೌತಿ ಖಾತೆ ಅಥವಾ ಮ್ಯೂಟೇಶನ್ ಪ್ರಕ್ರಿಯೆಯಲ್ಲಿ
ಆಸ್ತಿ ಹಂಚಿಕೆ ಮತ್ತು ಉತ್ತರಾಧಿಕಾರ ವಿಚಾರಗಳಲ್ಲಿ
ಪಿಂಚಣಿ ಹಾಗೂ ಕುಟುಂಬ ಪಿಂಚಣಿ ಪಡೆಯಲು
ವಿಮೆ ಮತ್ತು ಇತರ ಸರ್ಕಾರಿ ಪ್ರಯೋಜನಗಳಿಗೆ
ಸರ್ಕಾರಿ ಸೇವಾ ಪ್ರಯೋಜನಗಳಿಗಾಗಿ
ಉತ್ತರಾಧಿಕಾರ ಸಂಬಂಧಿತ ವ್ಯಾಜ್ಯಗಳಲ್ಲಿ
ಸರ್ವೆ ಮತ್ತು ಸೆಟಲ್‌ಮೆಂಟ್ ಸಂಬಂಧಿತ ಕೆಲಸಗಳಿಗೆ

ಪ್ರಮುಖವಾಗಿ ನೆನಪಿಡಬೇಕಾದ ಅಂಶಗಳು
ವಂಶವೃಕ್ಷದಲ್ಲಿ ವ್ಯಕ್ತಿಯ ಹೆಸರು ದಾಖಲಾಗಿರುವುದರಿಂದ ಮಾತ್ರ ಅವರಿಗೆ ಆಸ್ತಿಯಲ್ಲಿ ಕಾನೂನುಬದ್ಧ ಪಾಲು ಸಿಗುತ್ತದೆ ಎಂದರ್ಥವಲ್ಲ. ಆಸ್ತಿ ಹಕ್ಕು ಮತ್ತು ವಾರಸುದಾರಿಕೆ ನಿರ್ಧಾರವು ಸಂಬಂಧಪಟ್ಟ ಕಾನೂನು ನಿಯಮಗಳ ಪ್ರಕಾರ ನಡೆಯುತ್ತದೆ.
ಅದೇ ರೀತಿ ವಂಶವೃಕ್ಷ ಪ್ರಮಾಣಪತ್ರದಿಂದಲೇ ಆರ್‌ಟಿಸಿಯಲ್ಲಿ ಹೆಸರು ಬದಲಾಗುವುದಿಲ್ಲ. ಅದಕ್ಕಾಗಿ ಪ್ರತ್ಯೇಕ ಮ್ಯೂಟೇಶನ್ ಪ್ರಕ್ರಿಯೆ ಪೂರ್ಣಗೊಳಿಸಬೇಕಾಗುತ್ತದೆ.
ಸ್ವಯಂ ತಯಾರಿಸಿದ ವಂಶವೃಕ್ಷಕ್ಕಿಂತ ಸರ್ಕಾರದ ಸಂಬಂಧಪಟ್ಟ ಅಧಿಕಾರಿಗಳಿಂದ ದೃಢೀಕರಿಸಲ್ಪಟ್ಟ ವಂಶವೃಕ್ಷ ಪ್ರಮಾಣಪತ್ರವೇ ಅಧಿಕೃತ ದಾಖಲೆಗಳಲ್ಲಿ ಮುಖ್ಯವಾಗುತ್ತದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now