ಸುದ್ದಿಒನ್, ಚಳ್ಳಕೆರೆ, ಸೆಪ್ಟೆಂಬರ್. 02 :ಬಾಗಲಕೋಟೆ ಜಿಲ್ಲೆಯ ವಿಶ್ವ ಬಂಜಾರ ಕಲಾ ಸಾಹಿತ್ಯ ಸಂಘ ಸಾಹಿತ್ಯ ಸೇವಾ ಕಾರ್ಯಕ್ಕೆ ಕೊಡಮಾಡುವ ವಾರ್ಷಿಕ ‘ ಅನರ್ಘ್ಯ ರತ್ನ ‘ ರಾಜ್ಯ ಪ್ರಶಸ್ತಿಗೆ ಚಳ್ಳಕೆರೆ ತಾಲೂಕಿನ ಕವಿ, ಪತ್ರಕರ್ತ ಕೊರ್ಲಕುಂಟೆ ತಿಪ್ಪೇಸ್ವಾಮಿ ಭಾಜನರಾಗಿದ್ದಾರೆ ಎಂದು ವೇದಿಕೆ ಸಂಸ್ಥಾಪಕ ಅಧ್ಯಕ್ಷ ಎಚ್. ವಾಯ್ ರಾಠೋಡ ತಿಳಿಸಿದ್ದಾರೆ.
ಆಂಧ್ರ ಗಡಿ ಗ್ರಾಮದಲ್ಲಿ ಕನ್ನಡ ಸೇವಾ ಕಾರ್ಯಕ್ಕೆ ಕನ್ನಡ ಮನೆ ನಿರ್ಮಾಣ ಮಾಡಿರುವ ತಿಪ್ಪೇಸ್ವಾಮಿ, ಮೂರು ದಶಕಗಳಿಂದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡವರು. ಚಿತ್ರದುರ್ಗ ಜಿಲ್ಲಾ ರಂಗಮಂದಿರಕ್ಕೆ ತರಾಸು ನಾಮಕರಣ ಮಾಡಬೇಕೆಂದು ಸ್ವಗ್ರಾಮದಿಂದ ಜಿಲ್ಲಾಧಿಕಾರಿ ಕಚೇರಿ ತನಕ 72 ಕಿಮೀ ಪಾದಯಾತ್ರೆ ಮಾಡಿ ಯಶಸ್ವಿ ಕಂಡವರು. ಬಯಲು ಸೀಮೆಯ ಜನ ಸಂಸ್ಕೃತಿಯ ಅನುಭವದಲ್ಲಿ ‘ ಜೇನಹನಿ’, ಮನದಾಳದ ಬಯಕೆ’, ಎದೆಯ ಕದವ ತೆರೆದು’, ಭಾವರೂಪ’, ಬರಹದ ಒಳನೋಟ ಸಂಕಲನಗಳನ್ನು ಸಾಹಿತ್ಯ ವಲಯಕ್ಕೆ ಕೊಡುಗೆ ನೀಡಿರುವ ಸೇವೆ ಗುರುತಿಸಿ,ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಸೆ.6 ರಂದು ಚಿತ್ರದುರ್ಗ ನಗರದ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯಾಲಯದಲ್ಲಿ ಜರುಗಲಿರುವ ಸಾಹಿತ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











