ಚಿತ್ರದುರ್ಗ. ಸೆ.01: ತಾಲೂಕಿನ ಭೀಮಸಮುದ್ರ ಗ್ರಾಮದಲ್ಲಿ ಗಣಿ ಲಾರಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ಸೃಷ್ಟಿಯಾಗಿರುವ ವಿವಾದವನ್ನು ಕಾನೂನು ಚೌಕಟ್ಟಿನಲ್ಲಿ ಬಗೆಹರಿಸಲಾಗುವುದು. ನ್ಯಾಯಾಲಯದ ಆದೇಶಕ್ಕೂ ಮನ್ನಣೆ ನೀಡಿ, ಸಾರ್ವಜನಿಕರ ಹಿತರ ರಕ್ಷಣೆಗೂ ಸರ್ಕಾರ ಬದ್ದವಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಟಿ.ರಘುಮೂರ್ತಿ ಭರವಸೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳು, ರೈತ ಮುಖಂಡರು, ಲಾರಿ ಮಾಲಿಕರ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿದರು.

ಗ್ರಾಮದಲ್ಲಿ ಕಳೆದ 15 ದಿನಗಳಿಂದ ಗಣಿ ಲಾರಿಗಳ ಸಂಚಾರಕ್ಕೆ ಸಂಬಂಧಿಸಿದಂತೆ ರೈತರು ಹಾಗೂ ಲಾರಿ ಮಾಲಿಕರ ನಡುವೆ ತಿಕ್ಕಾಟ ನಡೆಯುತ್ತಿದೆ. ಸುಮಾರು 700 ರಿಂದ 800 ಲಾರಿಗಳಿದ್ದು, ಲಾರಿ ಮಾಲಿಕರು, ಚಾಲಕರು ಮತ್ತು ಕಾರ್ಮಿಕರ ಜೀವನೋಪಾಯಕ್ಕೆ ತೊಂದರೆಯಾಗಿದೆ ಎಂದು ಲಾರಿ ಮಾಲಿಕರು ಅಳಲು ತೋಡಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸಭೆ ಕರೆಯಲಾಗಿತ್ತು ಎಂದು ಸಚಿವರು ವಿವರಿಸಿದರು.

ನ್ಯಾಯಾಲಯದ ಆದೇಶ ಹಾಗೂ ಸಾರ್ವಜನಿಕರ ಹಿತ:
ಭೀಮಸಮುದ್ರದ ಸುಮಾರು 4 ಕಿ.ಮೀ. ರಸ್ತೆಯಲ್ಲಿ ಗಣಿ ಲಾರಿಗಳ ಸಂಚಾರದಿಂದ ಸಾರ್ವಜನಿಕರಿಗೆ ಹಾಗೂ ರೈತರಿಗೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ಹಾಗೂ ರೈತ ಮುಖಂಡರು ಪ್ರತಿಭಟನೆ ನಡೆಸಿ ಲಾರಿ ಓಡಾಟಕ್ಕೆ ತಡೆ ಹಾಕಿದ್ದಾರೆ. ಈ ಹಿಂದೆಯೂ ಇದೇ ಪ್ರತಿಭಟನೆಗಳು ನಡೆದು, ವಿಚಾರ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಕಳೆದ ಏಪ್ರಿಲ್ 7 ರಂದು ನ್ಯಾಯಾಲಯ ಆದೇಶ ಹೊರಡಿಸಿ, ಪರ್ಯಾಯ ರಸ್ತೆ (ಮೈನಿಂಗ್ ಕಾರಿಡಾರ್) ನಿರ್ಮಿಸುವವರೆಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕ ವ್ಯವಸ್ಥೆಗೆ ಅವಕಾಶ ನೀಡಲಾಗಿತ್ತು. ಲಾರಿ ಸಂಚಾರಕ್ಕೆ ಅನುಮತಿ ನೀಡಿ ಯಾಥಸ್ಥಿತಿ ಕಾಪಾಡುವಂತೆ ನಿರ್ದೇಶನ ನೀಡಿದೆ. ಈ ಆದೇಶವು 15 ತಿಂಗಳವರೆಗೆ ಚಾಲ್ತಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ತದನಂತರ ಜುಲೈ 29 ರಂದು ನೀಡಿರುವ ಮತ್ತೊಂದು ಆದೇಶದಲ್ಲೂ ಕೋರ್ಟ್, ಹಳೆಯ ಆದೇಶವನ್ನು ಎತ್ತಿಹಿಡಿದು ಅಗತ್ಯವಿದ್ದರೆ ಪೋಲೀಸ್ ರಕ್ಷಣೆ ನೀಡುವಂತೆ ತಿಳಿಸಿದೆ. ಪೆÇಲೀಸ್ ರಕ್ಷಣೆ ಪಡೆದು ಬಲವಂತವಾಗಿ ಲಾರಿ ಓಡಿಸುವುದಕ್ಕಿಂತ ರೈತರನ್ನು ಹಾಗೂ ಗ್ರಾಮಸ್ಥರನ್ನು ಮನವೊಲಿಸಿ, ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸುವುದು ಸರ್ಕಾರದ ಉದ್ದೇಶವಾಗಿದೆ ಎಂದು ಸಚಿವ ಟಿ.ರಘುಮೂರ್ತಿ ತಿಳಿಸಿದರು.
ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿಯಮಗಳ ರಚನೆ:
ಸೆಪ್ಟೆಂಬರ್ 4ರಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಗಣಿ ಟಾಸ್ಕ್ ಫೆÇೀರ್ಸ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಲಾರಿ ಓಡಾಟದ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಕುರಿತು ವಿಸ್ತøತವಾಗಿ ಚರ್ಚಿಸಿ ನಡೆಸಲಾಗುವುದು. ಸಾರ್ವಜನಿಕರ ಹಾಗೂ ರೈತರ ಹಿತರಕ್ಷಣೆಗೆ ಮೊದಲ ಆದ್ಯತೆ ನೀಡಲಾಗುವುದು. ಲಾರಿಗಳ ಟನ್‍ಏಜ್ ಮಿತಿ, ಗಣಿ ಪ್ರದೇಶದಿಂದ ಧೂಳು ಏಳದಂತೆ ತಡೆಯಲು ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು, ಲಾರಿಗಳಲ್ಲಿ ಮಣ್ಣು ಅಥವಾ ಅದಿರು ಸಾಗಿಸುವಾಗ ಕಡ್ಡಾಯವಾಗಿ ತಾರ್ಪಲ್ ಮುಚ್ಚುವುದು, ನಿರಂತರವಾಗಿ ನೀರು ಸಿಂಪಡಿಣೆ, ವೇಗ ಮಿತಿ, ಬೆಳೆಗಳಿಗೆ ಧೂಳಿನಿಂದ ಹಾನಿಯಾಗದಂತೆ ನೋಡಿಕೊಳ್ಳಬೇಕೆಂಬ ನಿಯಮಗಳು ಪಾಲನೆ ಒತ್ತು ನೀಡಲಾಗುವುದು. ನಿಯಮ ಪಾಲಿಸದ ಲಾರಿಗಳನ್ನು ಶಾಶ್ವತವಾಗಿ ಅಧಿರು ಸಾಗಟ ಮಾಡದಂತೆ ನಿರ್ಭಂಧಿಸಲಾಗುವುದು. ಈ ಕುರಿತು ಗಣಿ, ಪರಿಸರ, ಆರ್.ಟಿ.ಓ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ ನೀಡಿದ್ದೇನೆ ಎಂದು ಸಚಿವ ಟಿ.ರಘುಮೂರ್ತಿ ಹೇಳಿದರು.
ರಸ್ತೆ ಅಭಿವೃದ್ಧಿಗೆ ಯೋಜನೆ:
ಗಣಿ ಲಾರಿಗಳ ಸಂಚಾರಕ್ಕೆ ಸೂಕ್ತ ರಸ್ತೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ. ಸದ್ಯ ಹಾಳಾಗಿರುವ 4 ಕಿಲೋಮೀಟರ್ ರಸ್ತೆ ಅಭಿವೃದ್ಧಿಗೆ ಕೆ.ಎಂ.ಇ.ಆರ್.ಸಿ ಅಡಿ ರೂ.22 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ಇದಕ್ಕೆ ಸಮ್ಮತಿಯೂ ದೊರೆತಿದ್ದು, ಟೆಂಡರ್ ಅನುಮೋದನೆ ಪ್ರಕ್ರಿಯೆಯಲ್ಲಿದೆ. ಗಣಿ ಲಾರಿಗಳಿಗಾಗಿಯೇ ಪ್ರತ್ಯೇಕ ಬೈಪಾಸ್ ಕ್ಯಾರಿಡಾರ್ ರಸ್ತೆ ನಿರ್ಮಿಸಲು ಸುಮಾರು ರೂ.400 ಕೋಟಿ ವೆಚ್ಚದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಮತ್ತು ಅನುಮೋದನೆ ಹಂತದಲ್ಲಿದೆ. ಕಾಯಂ ರಸ್ತೆ ನಿರ್ಮಾಣವಾಗುವವರೆಗೆ ಗುಂಡಿಗಳನ್ನು ಮುಚ್ಚಿ, ಸಂಚಾರಕ್ಕೆ ಅನುಕೂಲವಾಗುವಂತೆ ತಾತ್ಕಾಲಿಕ ವ್ಯವಸ್ಥೆ ಮಾಡಲು ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಯೋಜನೆ ಸಂಬಂದ ಈಗಾಗಲೇ 143 ಎಕರೆ ಭೂಮಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗಿದೆ. ಕಾಯ್ದೆಯ ನಿಯಮಾವಳಿಯಂತೆ 60 ದಿನಗಳ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶವಿರುತ್ತದೆ. ಈ ಅವಧಿ ಮುಗಿದ ನಂತರ ಅಂತಿಮ ಅಧಿಸೂಚನೆ ಹೊರಡಿಸಿ, ಪರಿಹಾರದ ಮೊತ್ತವನ್ನು ನಿಗದಿಪಡಿಸಲಾಗುವುದು ಎಂದರು.
ಗಣಿ ಸುತ್ತಮುತ್ತಲಿನ ಜಮೀನು ಮಾಲೀಕರು ಹಾಗೂ ರೈತರು ಎದುರಿಸುತ್ತಿರುವ ನಷ್ಟದ ಬಗ್ಗೆ ಪರಿಶೀಲನೆ ನಡೆಸಲಾಗುವುದು. ನಿಯಮಗಳ ಪ್ರಕಾರ ಸಿಗಬೇಕಾದ ಪರಿಹಾರದ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು. ನ್ಯಾಯಾಲಯ ನೀಡಿರುವ ನಿರ್ದೇಶನಗಳಿಗೆ ಬದ್ಧವಾಗಿ ಜಿಲ್ಲಾಡಳಿತ ಪಾರದರ್ಶಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಟಿ.ರಘುಮೂರ್ತಿ ಸ್ಪಷ್ಟಪಡಿಸಿದರು.

ಗಣಿ ಲಾರಿಗಳ ನಿಯಮ ಉಲ್ಲಂಘನೆ ಸಹಿಸಲ್ಲ:
ಭೀಮಸಮುದ್ರ ಗ್ರಾಮದಲ್ಲಿ ಗಣಿ ಲಾರಿಗಳ ಓಡಾಟ, ಸಂಚಾರ ನಿಯಮಗಳ ಉಲ್ಲಂಘನೆ ಹಾಗೂ ಸಾರ್ವಜನಿಕರ ಮೇಲಿನ ದೌರ್ಜನ್ಯ, ಕಾನೂನು ಉಲ್ಲಂಘನೆಯನ್ನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಅಂತಹರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಟಿ. ರಘುಮೂರ್ತಿ ಎಚ್ಚರಿಸಿದರು.
ರೈತರ ಮೇಲೆ ಲಾರಿ ಚಾಲಕರು ಅಥವಾ ಮಾಲೀಕರು ದೌರ್ಜನ್ಯ ಎಸಗುತ್ತಿರುವ ಹಾಗೂ ಪ್ರಕರಣಗಳನ್ನು ದಾಖಲಿಸದೆ ಇರಲು ಒತ್ತಡ ಹೇರುತ್ತಿರುವ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಏನಾಗಿದೆ ಎಂಬುದು ಗೊತ್ತಿಲ್ಲ. ಆದರೆ, ಇನ್ನು ಮುಂದೆ ಸಾರ್ವಜನಿಕರು ಅಥವಾ ರೈತರ ಮೇಲೆ ದೌರ್ಜನ್ಯ ನಡೆದರೆ ಸಹಿಸುವುದಿಲ್ಲ.
ಗಣಿ ಲಾರಿಗಳಿಂದ ಯಾವುದೇ ಅಪಘಾತ ಸಂಭವಿಸಿದರೂ ತಕ್ಷಣ ಎಫ್‍ಐಆರ್ ದಾಖಲಾಗಬೇಕು. ಪ್ರಕರಣದ ಹಿನ್ನೆಲೆಯನ್ನು ಸಂಪೂರ್ಣವಾಗಿ ಪರಿಶೀಲಿಸಬೇಕು. ಪ್ರರಕರಣಗಳನ್ನು ದಾಖಲಿಸಲು ಹಿಂದೇಟು ಹಾಕುವ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಲು ಪೊಲೀಸ್ ವರಿಷ್ಠಾಧಿಕಾರಿ ಸಚಿವ ಟಿ.ರಘುಮೂರ್ತಿ ಆಜ್ಞಾಪಿಸಿದರು.
ಗ್ರಾಮದಲ್ಲಿ ಸಾರ್ವಜನಿಕರ ನೆಮ್ಮದಿ ಮತ್ತು ಶಾಂತಿ-ಸುವ್ಯವಸ್ಥೆ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಲಾರಿ ಮಾಲಿಕರು ಮತ್ತು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಎಲ್ಲರಿಗೂ ಒಪ್ಪಿಯಾಗುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಗಣಿ ಲಾರಿಗಳ ಸಂಚಾರದ ಪರಿಸರ ಪರಿಣಾಮ, ರಸ್ತೆ ಬದಿಯ ತೋಟಗಳಲ್ಲಿನ ಬೆಳೆಗಳಿಗೆ ಆಗುತ್ತಿರು ಹಾನಿ, ಧೂಳಿನಿಂದಾಗಿ ನೀರು ಕಲುಷಿತಗೊಂಡು ದನ-ಕರುಗಳ ಆರೋಗ್ಯದ ಮೇಲಿನ ಪರಿಣಾಮದ ಬಗ್ಗೆ ಕೂಲಂಕುಷ ವರದಿ ನೀಡುವಂತೆ ಸಚಿವ ಟಿ.ರಘುಮೂರ್ತಿ ಈ ಸಂದರ್ಭದಲ್ಲಿ ಸೂಚಿಸಿದರು.
ಈ ವೇಳೆ ಶಾಸಕ ಕೆ.ಸಿ.ವೀರೇಂದ್ರ ಪಪ್ಪಿ, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಉಪನಿರ್ದೇಶಕ ಎಂ.ಜೆ.ಮಹೇಶ್, ಉಪವಿಭಾಗಾಧಿಕಾರಿ ಡಾ.ಕಾಂತರಾಜ್, ರೈತರು, ಗ್ರಾಮಸ್ಥರು, ಲಾರಿ ಮಾಲಿಕರು ಇದ್ದರು.












