ವರದಿ ಮತ್ತು ಫೋಟೋ ಕೃಪೆ
ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಆಗಸ್ಟ್. 29 ; ಬಸವಾದಿ ಶಿವಶರಣರ ವಚನಗಳಲ್ಲಿರುವ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಜೀವನ ಸಾರ್ಥಕವಾಗುತ್ತದೆಂದು ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಡಾ.ಬಸವಕುಮಾರ ಸ್ವಾಮೀಜಿ ತಿಳಿಸಿದರು.
ಮುರುಘಾಮಠ, ಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠ, ವೀರಶೈವ ಸಮಾಜ ಹಾಗೂ ಜಗದ್ಗುರು ಜಯದೇವ ವಿದ್ಯಾರ್ಥಿ ನಿಲಯ ಸಮಿತಿ ಹೊಸದುರ್ಗ ಹಾಗೂ ಬಸವಪರ ಸಂಘಟನೆಗಳ ಸಹಯೋಗದಲ್ಲಿ ಹೊಸದುರ್ಗದಲ್ಲಿ ನಡೆದ ಅನುಭವ ಶ್ರಾವಣದ ಶರಣರ ಚಿಂತನ ಮಾಲಿಕೆ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ನಿಮ್ಮ ಬದುಕಿನಲ್ಲಿ ಒಳ್ಳೆಯವರ ಒಡನಾಟವಿಟ್ಟುಕೊಳ್ಳಿ. ಆಚಾರ ವಿಚಾರಗಳು ಆರೋಗ್ಯ ಪೂರ್ಣವಾಗಿರುತ್ತದೆ. ಬಸವವಾದಿ ಶಿವಶರಣರ ವಚನಗಳಲ್ಲಿನ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಹೇಳಿದರು.
ದಾವಣಗೆರೆ ವಿರಕ್ತ ಮಠದ ಡಾ.ಬಸವಪ್ರಭು ಸ್ವಾಮೀಜಿ ಮಾತನಾಡಿ ಮುರುಘಾಮಠವು ಇಂತಹ ಅನುಭವ ಶ್ರಾವಣದ ಶರಣರ ಚಿಂತನೆ ಮಾಲಿಕೆ ಕಾರ್ಯಕ್ರಮಗಳ ಮುಖಾಂತರ ಸಮಾಜಕ್ಕೆ ಒಳ್ಳೆಯ ಮಾರ್ಗದರ್ಶನ ಮಾಡುತ್ತಿದೆ. ಹಿಂದಿನ ಕಾಲದಲ್ಲಿ ಬಸವಾದಿ ಶರಣರು ತಮ್ಮ ಆಚಾರ ವಿಚಾರಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಮೌಲ್ಯಯುತವಾದ ಜೀವನ ಸಾಗಿಸುತ್ತಿದ್ದರು ಎಂದರು.
ನಿವೃತ್ತ ಶಿಕ್ಷಕ ಬಿ.ಬಿ.ಓಂಕಾರಪ್ಪ ಶರಣರ ವಚನಗಳಲ್ಲಿ ಜೀವನ ಮೌಲ್ಯಗಳು ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.
ಗುರು ಒಪ್ಪತ್ತಿನಸ್ವಾಮಿ ವಿರಕ್ತಮಠದ ಕಾರ್ಯದರ್ಶಿ ಕೆ.ಎಸ್.ಕಲ್ಮಠ ಪ್ರಾಸ್ತಾವಿಕವಾಗಿ ಮಾತನಾಡಿ ಕೇವಲ ಗುಡಿ ಗುಂಡಾರಗಳಿಗೆ ಸೀಮಿತವಾಗದೆ ಶರಣರ ಬದುಕಿನ ವಿಚಾರಗಳನ್ನು ಅಳವಡಿಸಿಕೊಂಡರೆ ಜೀವನ ಸಾರ್ಥಕವಾಗುತ್ತದೆಂದು ಹೇಳಿದರು.
ಗುರು ಒಪ್ಪತ್ತಿನಸ್ವಾಮಿ ವಿರಕ್ತ ಮಠದ ಸಮಿತಿ ಉಪಾಧ್ಯಕ್ಷ ಎಂ.ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು.
ಮುರುಘಾಮಠದ ಆಡಳಿತ ಮಂಡಳಿ ಸದಸ್ಯ ಸಿ.ಎನ್.ಚಂದ್ರಶೇಖರ್, ಮಲ್ಲೇಶ್ ರೇಷ್ಮೆ ರಾಜ, ಎ.ಎಸ್.ಸಿದ್ದರಾಮೇಶ್ ಇವರುಗಳು ವೇದಿಕೆಯಲ್ಲಿದ್ದರು.
ಜಮುರಾ ಕಲಾವಿದರು ಪ್ರಾರ್ಥಿಸಿದರು. ಮಂಜುನಾಥ್ ಸ್ವಾಗತಿಸಿದರು. ಎಸ್.ಜೆ.ಎಂ.ಕಾಲೇಜಿನ ಪ್ರಾಚಾರ್ಯರಾದ ಪ್ರಕಾಶ್ ಜಿ.ಟಿ. ನಿರೂಪಿಸಿದರು.















