ದಾವಣಗೆರೆ, ಆಗಸ್ಟ್ 23 : ತುಂಬಿಗೆರೆ ಗ್ರಾಮ ಮತ್ತು ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ 22 ಕೆರೆಗಳಿಗೆ ನೀರು ತುಂಬಿಸುವ ರೂ. 982 ಲಕ್ಷ ವೆಚ್ಚದ ಯೋಜನೆಯು ಈ ಭಾಗದ ರೈತರ ಬಹುದಿನಗಳ ಕನಸಾಗಿದ್ದು ಸರ್ಕಾರ ಮಾಯಕೊಂಡ ಕ್ಷೇತ್ರ ಅಭಿವೃದ್ಧಿಗೆ ಬದ್ದ ಎಂದು ಗಣಿ, ಭೂವಿಜ್ಞಾನ ಮತ್ತು ತೋಟಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರು ತಿಳಿಸಿದರು.
ಅವರು ಭಾನುವಾರ ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ತುಂಬಿಗೆರೆ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಕೆರೆಗಳಿಗೆ ನೀರು ತುಂಬಿಸುವ ಏತ ನೀರಾವರಿ ಯೋಜನೆಯ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ನಂತರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಯಕೊಂಡ ವಿಧಾನಸಭಾ ಕ್ಷೇತ್ರದ ತುಂಬಿಗೆರೆ ಗ್ರಾಮದ ಕೆರೆಗಳಿಗೆ ನೀರು ತುಂಬಿಸುವ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಈ ಯೋಜನೆಗೆ ಇಂದು ಭೂಮಿಪೂಜೆ ನೆರವೇರಿಸಲಾಗಿದೆ. ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ರೂ. 9.82 ಕೋಟಿ ಅನುದಾನ. ಸಾಮಾನ್ಯ ಪೈಪ್‌ಗಳ ಬದಲಾಗಿ ದೀರ್ಘಕಾಲ ಬಾಳಿಕೆ ಬರುವ ಡಿ.ಐ. (ಆI) ಪೈಪ್‌ಗಳನ್ನು ಅಳವಡಿಸಲು ಕ್ರಮವಹಿಸಲಾಗಿದೆ ಎಂದರು.
ಉತ್ತರ ಕರ್ನಾಟಕ ಮಾದರಿಯಲ್ಲಿ ಸಬ್‌ಮರ್ಸಿಬಲ್ ಪಂಪ್‌ಗಳನ್ನು ಅಳವಡಿಸಿ, ಜ್ಯಾಕ್‌ವೆಲ್ ವ್ಯವಸ್ಥೆಯನ್ನು ಸರಳೀಕರಣಗೊಳಿಸುವ ಯೋಜನೆ ರೂಪಿಸಲಾಗಿದೆ. ಸಾರ್ವಜನಿಕರು ಹಾಗೂ ರೈತ ಬಾಂಧವರ ಸುದೀರ್ಘ ಹೋರಾಟಕ್ಕೆ ಸ್ಪಂದಿಸಿ, ಕುಡಿಯುವ ನೀರು ಹಾಗೂ ಕೆರೆಗಳಿಗೆ ನೀರು ತುಂಬಿಸುವ ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಿ ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಗುವುದು ಎಂದು ತಿಳಿಸಲಾಯಿತು.
ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರ ಗಮನಕ್ಕೆ ತಂದು, ಯೋಜನೆಗೆ ಹೆಚ್ಚುವರಿಯಾಗಿ 75 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿಸಲಾಗಿದೆ. ಈ ಹಿಂದೆ ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದ 18 ಕೋಟಿ ರೂಪಾಯಿ ಸೇರಿ ಒಟ್ಟು ವೆಚ್ಚದಲ್ಲಿ ಈ ಯೋಜನೆಯನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗಿದೆ. ಭರಮಸಾಗರ ಮತ್ತು ಜಗಳೂರು ಭಾಗದ ಕೆರೆಗಳಿಗೆ ಪ್ರಸ್ತುತ ಸರಾಗವಾಗಿ ನೀರು ಹರಿಯುತ್ತಿದ್ದು, ಅದೇ ಮಾದರಿಯಲ್ಲಿ ತುಂಬಿಗೆರೆ ಮತ್ತು ಸುತ್ತಮುತ್ತಲಿನ ಕೆರೆಗಳಿಗೂ ಶೀಘ್ರವೇ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಹರಿಹರ ತಾಲೂಕು ಗಡಿಯಿಂದ ಹಿಡಿದು ಕ್ಷೇತ್ರದ ಕೊನೆಯ ಭಾಗದ ಕೆರೆಗಳವರೆಗೂ ನೀರು ತಲುಪಿಸಲು ಶಾಶ್ವತ ಪರಿಹಾರ ಕಂಡುಕೊಳ್ಳುವ ಯೋಜನೆಯಾಗಿದೆ, ಮಗನಹಳ್ಳಿ, ಬೇತೂರು, ಕಾಡಜ್ಜಿ, ಹುಟುರ್ನಾಳು ಸೇರಿದಂತೆ ಹೆಚ್ಚುವರಿ 5 ರಿಂದ 6 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ರೂಪುರೇಷೆ ಸಿದ್ಪಪಡಿಸಲು ಕ್ರಮವಹಿಸಲಾಗಿದೆ ಎಂದರು.
ರೈತರ ಶ್ರೇಯೋಭಿವೃದ್ಧಿಗೆ ನೀರಾವರಿ ಸೌಲಭ್ಯ ಕಲ್ಪಿಸುವುದು ಸರ್ಕಾರದ ಮೊದಲ ಆದ್ಯತೆಯಾಗಿದ್ದು, ಈ ಭಾಗದ ಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ ಅಗತ್ಯ ಅನುದಾನ ನೀಡಲಾಗುವುದು ಎಂದು ಭರವಸೆ ನೀಡಿದರು.
“ಕೆರೆಗಳಿಗೆ ನೀರು ತುಂಬಿಸುವುದರಿಂದ ಅಂತರ್ಜಲ ಮಟ್ಟ ಹೆಚ್ಚಿ, ಬೋರ್‌ವೆಲ್‌ಗಳಿಗೆ ಅನುಕೂಲವಾಗಲಿದೆ. ಇದರಿಂದ ಸಣ್ಣ ಹಾಗೂ ಅತಿ ಸಣ್ಣ ಕೃಷಿಕರ ಬದುಕಿಗೆ ದೊಡ್ಡ ಆಸರೆಯಾಗಲಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಸಮಾಲೋಚನೆ ನಡೆಸಿ, ಅಗತ್ಯ ಕಾಮಗಾರಿಗಳನ್ನು ಶೀಘ್ರವೇ ಪೂರ್ಣಗೊಳಿಸಲು ಕ್ರಮ ವಹಿಸಲಾಗುವುದು ಎಂದರು.
ಮುಜರಾಯಿ, ಬಂದರು ಮತ್ತು ಮೀನುಗಾರಿಕೆ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಬಸಂತಪ್ಪ ಅವರು ಮಾತನಾಡಿ, ಕೆರೆಗಳಿಗೆ ನೀರು ತುಂಬಿಸುವ ಯೋಜನೆಗಾಗಿ ಸ್ಥಳೀಯ ಮುಖಂಡರು, ಗ್ರಾಮಸ್ಥರು ಹಾಗೂ ನಿವಾಸಿಗಳು ಸುದೀರ್ಘ ಹೋರಾಟ ನಡೆಸಿದ್ದು, ಅವರ ಶ್ರಮ ಶ್ಲಾಘನೀಯ. ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಆರಂಭದಲ್ಲಿದ್ದ ತಾಂತ್ರಿಕ ತೊಡಕುಗಳು ಹಾಗೂ ಎಲ್ ಅಂಡ್ ಟಿ ಕಂಪನಿಯಿಂದಾದ ವಿಳಂಬವನ್ನು ಸರಿಪಡಿಸಿ, ಮರುಜೀವ ನೀಡಲಾಗಿದೆ” ಎಂದು ತಿಳಿಸಿದರು.
ಲಿಂಗಾಪುರ ಹಾಗೂ ಸುತ್ತಮುತ್ತಲಿನ ನಾಲ್ಕೈದು ಹಳ್ಳಿಗಳ ವ್ಯಾಪ್ತಿಯಲ್ಲಿ ರಸ್ತೆ ಮತ್ತು ಕೃಷಿ ಹಾದಿಗಳ ನಿರ್ಮಾಣದ ಜೊತೆಗೆ, ಊರಿನ ಆಂಜನೇಯ ಸ್ವಾಮಿ ದೇವಸ್ಥಾನದ ಜೀರ್ಣೋದ್ಧಾರ ಕಾಮಗಾರಿಗೆ ಧಾರ್ಮಿಕ ದತ್ತಿ ಇಲಾಖೆಯಿಂದ ಹೆಚ್ಛಿನ ಅನುದಾನ ಒದಗಿಸಲಾಗುವುದು. ಸರ್ಕಾರದ ಅನುದಾನದ ಜೊತೆಗೆ ಗ್ರಾಮದ ದಾನಿಗಳು, ಶ್ರಮಿಕರು ಹಾಗೂ ಸಾರ್ವಜನಿಕರು ಕೈಜೋಡಿಸಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು , ಮುಖಂಡರುಗಳಾದ ಗಿರೀಶ, ಮಂಜುನಾಥ್, ಪರಮೇಶ್ವರ್, ಎಸ್.ಕೆ. ಚಂದ್ರಶೇಖರ್, ಚಂದ್ರಣ್ಣ, ಬಸವರಾಜಪ್ಪ, ಶಿವು, ರಾಜು, ಮಂಜುನಾಥ್, ಹನುಮಂತಯ್ಯ ಇನ್ನು ಮುಂತಾದ ಮುಖಂಡರುಗಳು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.











