ಢಾಕಾ.ಆಗಸ್ಟ್.23: ಬಾಂಗ್ಲಾದೇಶದ ರಂಗ್ಪುರ ನಗರದಲ್ಲಿ ನಿವೃತ್ತ ಹಿಂದೂ ಶಿಕ್ಷಕರೊಬ್ಬರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮನೆಯೊಳಗೆ ಬೀಗ ಹಾಕಿದ ಸ್ಥಿತಿಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಸಾಧ್ಯತೆಯ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಮೃತರನ್ನು ರಂಗ್ಪುರ ಜಿಲ್ಲಾ ಶಾಲೆಯ ನಿವೃತ್ತ ಶಿಕ್ಷಕ ಗಣಪತಿ ಚಕ್ರವರ್ತಿ (65), ಅವರ ಪತ್ನಿ ಪ್ರೀತಿಲತಾ ಚಕ್ರವರ್ತಿ (50), ಪುತ್ರಿ ಆಗಮಿ ಚಕ್ರವರ್ತಿ ಪ್ರಾರ್ಥಿ (23) ಹಾಗೂ 12 ವರ್ಷದ ಪುತ್ರ ಪ್ರಿಯಂ ಚಕ್ರವರ್ತಿ ಎಂದು ಗುರುತಿಸಲಾಗಿದೆ.
ಮನೆಯ ವಿವಿಧೆಡೆ ಮೃತದೇಹಗಳು
ಶನಿವಾರ ರಾತ್ರಿ ಸುಮಾರು 11.30ರ ವೇಳೆಗೆ ಮನೆಯ ಬೀಗ ಮುರಿದು ಪೊಲೀಸರು ಒಳ ಪ್ರವೇಶಿಸಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಪ್ರೀತಿಲತಾ ಮತ್ತು ಆಗಮಿ ಅವರ ಮೃತದೇಹಗಳು ಮೆಟ್ಟಿಲುಗಳ ಬಳಿ ಪತ್ತೆಯಾಗಿದ್ದರೆ, ಗಣಪತಿ ಅವರ ಮೃತದೇಹ ಛಾವಣಿಯಲ್ಲಿ ಪತ್ತೆಯಾಗಿದೆ. 12 ವರ್ಷದ ಪ್ರಿಯಂನ ಮೃತದೇಹ ಹಾಸಿಗೆಯ ಕೆಳಗೆ ದೊರೆತಿದೆ.
ಪ್ರಾಥಮಿಕ ತನಿಖೆಯಲ್ಲಿ ನಾಲ್ವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಗುರುವಾರ ಮಧ್ಯರಾತ್ರಿಯಿಂದ ಶುಕ್ರವಾರ ಮುಂಜಾನೆ ನಡುವೆ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ.
ಮೊಬೈಲ್ಗಳು ಸ್ವಿಚ್ಆಫ್ ಆಗಿದ್ದರಿಂದ ಅನುಮಾನ
ಕುಟುಂಬದ ನಾಲ್ವರ ಮೊಬೈಲ್ಗಳು ಗುರುವಾರ ರಾತ್ರಿ ಬಳಿಕ ಏಕಾಏಕಿ ಸ್ವಿಚ್ಆಫ್ ಆಗಿದ್ದವು. ಹಲವು ಬಾರಿ ಸಂಪರ್ಕಿಸಲು ಪ್ರಯತ್ನಿಸಿದರೂ ಯಾವುದೇ ಪ್ರತಿಕ್ರಿಯೆ ದೊರೆಯದ ಹಿನ್ನೆಲೆಯಲ್ಲಿ ಶನಿವಾರ ರಾತ್ರಿ ಸಂಬಂಧಿಕರು ಮನೆಗೆ ತೆರಳಿದ್ದಾರೆ.
ಮನೆಯ ಮುಖ್ಯ ಗೇಟ್ಗೆ ಬೀಗ ಹಾಕಲಾಗಿತ್ತು. ಒಳಗಿನ ದೀಪಗಳೂ ಆರಿದ್ದವು. ಬಳಿಕ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬೀಗ ಮುರಿದು ಮನೆಯೊಳಗೆ ಪ್ರವೇಶಿಸಿದಾಗ ನಾಲ್ವರ ಮೃತದೇಹಗಳು ಪತ್ತೆಯಾಗಿವೆ.
ಮೃತ ಗಣಪತಿ ಅವರಿಗೆ ಯಾವುದೇ ಶತ್ರುಗಳಿರುವುದು ತಿಳಿದಿರಲಿಲ್ಲ ಎಂದು ಕುಟುಂಬಸ್ಥರು ಹೇಳಿದ್ದಾರೆ. ಇತ್ತೀಚೆಗಷ್ಟೇ ಅವರು ಆ ಪ್ರದೇಶದಲ್ಲಿ ಹೊಸ ಮನೆಯನ್ನು ನಿರ್ಮಿಸಿದ್ದರು ಎನ್ನಲಾಗಿದೆ.
ನಿವೃತ್ತಿ ಬಳಿಕ ಹೋಮಿಯೋಪತಿ ಚಿಕಿತ್ಸೆ
ಗಣಪತಿ ಚಕ್ರವರ್ತಿ ಕಳೆದ ವರ್ಷ ಡಿಸೆಂಬರ್ 31ರಂದು ರಂಗ್ಪುರ ಜಿಲ್ಲಾ ಶಾಲೆಯ ಶಿಕ್ಷಕ ಹುದ್ದೆಯಿಂದ ನಿವೃತ್ತರಾಗಿದ್ದರು. ಬಳಿಕ ಅವರು ಹೋಮಿಯೋಪತಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅವರ ಪುತ್ರಿ ಆಗಮಿ ಈ ವರ್ಷ ರಂಗ್ಪುರ ಕಾರ್ಮೈಕಲ್ ಕಾಲೇಜಿನಲ್ಲಿ ಇಂಗ್ಲಿಷ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಪುತ್ರ ಪ್ರಿಯಂ ರಂಗ್ಪುರ ಜಿಲ್ಲಾ ಶಾಲೆಯಲ್ಲಿ 5ನೇ ತರಗತಿಯಲ್ಲಿ ಓದುತ್ತಿದ್ದ.
ಕುಟುಂಬವು ಕಳೆದ ಸುಮಾರು ನಾಲ್ಕು ವರ್ಷಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿತ್ತು. ಗಣಪತಿ ಅವರು ನಿರ್ಮಿಸಿದ್ದ ಮೂರು ಅಂತಸ್ತಿನ ಮನೆಯ ಕಾಮಗಾರಿ ಇನ್ನೂ ಸಂಪೂರ್ಣಗೊಂಡಿರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ರಂಗ್ಪುರ ಮೆಟ್ರೋಪಾಲಿಟನ್ ಪೊಲೀಸರು, ಸಿಐಡಿ ಹಾಗೂ ಡಿಟೆಕ್ಟಿವ್ ಬ್ರಾಂಚ್ ತಂಡಗಳು ಜಂಟಿಯಾಗಿ ತನಿಖೆ ನಡೆಸುತ್ತಿವೆ. ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ವರದಿ ಬಂದ ಬಳಿಕ ತಿಳಿದುಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.












