ಬೆಂಗಳೂರು.ಆಗಸ್ಟ್.17: ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ‘ಯುವ ಶಕ್ತಿ, ರಾಜ್ಯ ಶಕ್ತಿ’ ಆಶಯದಡಿ ‘ಭಾರತ್ ಜೋಡೋ ಯುವ ಸಂಘ’ ರಚಿಸಲಾಗುತ್ತಿದ್ದು, ಯುವಕರ ಸದಸ್ಯತ್ವ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.
ಯುವಕರಲ್ಲಿ ನಾಯಕತ್ವ ಗುಣ, ಕೌಶಲ್ಯ ಹಾಗೂ ಸಾಮಾಜಿಕ ಜವಾಬ್ದಾರಿಯನ್ನು ಬೆಳೆಸುವ ಉದ್ದೇಶದಿಂದ ಈ ಸಂಘವನ್ನು ರೂಪಿಸಲಾಗುತ್ತಿದೆ. ರಾಜ್ಯದ ಯುವಜನರನ್ನು ಒಗ್ಗೂಡಿಸಿ ಕ್ರೀಡೆ, ಆರೋಗ್ಯ, ಪರಿಸರ ಸಂರಕ್ಷಣೆ ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಯುವ ಸಂಘದ ಪ್ರಮುಖ ಉದ್ದೇಶಗಳು
‘ಭಾರತ್ ಜೋಡೋ ಯುವ ಸಂಘ’ದ ಮೂಲಕ ಯುವಕರಲ್ಲಿ ವಿವಿಧ ಕ್ಷೇತ್ರಗಳ ಕುರಿತು ಅರಿವು ಮೂಡಿಸುವುದರ ಜೊತೆಗೆ, ಸಮಾಜಮುಖಿ ಚಟುವಟಿಕೆಗಳಲ್ಲಿ ಅವರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಯುವಕರಲ್ಲಿ ನಾಯಕತ್ವ ಗುಣ ಮತ್ತು ಕೌಶಲ್ಯ ಅಭಿವೃದ್ಧಿಪಡಿಸುವುದು
ಕ್ರೀಡೆ, ಆರೋಗ್ಯ ಹಾಗೂ ದೈಹಿಕ ಕ್ಷಮತೆಯನ್ನು ಉತ್ತೇಜಿಸುವುದು
ಸಂವಿಧಾನದ ಮೌಲ್ಯಗಳ ಬಗ್ಗೆ ಅರಿವು ಮೂಡಿಸುವುದು
ಪರಿಸರ ಮತ್ತು ಪ್ರಕೃತಿಯ ರಕ್ಷಣೆಗೆ ಆದ್ಯತೆ ನೀಡುವುದು
ಸಾಮಾಜಿಕ ಸೌಹಾರ್ದತೆ ಹಾಗೂ ಸಮುದಾಯದ ಒಗ್ಗಟ್ಟನ್ನು ಬೆಳೆಸುವುದು
ಸ್ಥಳೀಯ ಅಭಿವೃದ್ಧಿ ಕಾರ್ಯಗಳಲ್ಲಿ ಯುವಕರನ್ನು ಸಕ್ರಿಯವಾಗಿ ತೊಡಗಿಸಿಕೊಳ್ಳುವುದು
ಯಾರು ಸದಸ್ಯರಾಗಬಹುದು?
16ರಿಂದ 35 ವರ್ಷದೊಳಗಿನ ಯುವಕರು ‘ಭಾರತ್ ಜೋಡೋ ಯುವ ಸಂಘ’ದ ಸದಸ್ಯತ್ವ ಪಡೆಯಬಹುದು. ಸದಸ್ಯತ್ವ ಪಡೆಯಲು ₹10 ಶುಲ್ಕ ನಿಗದಿಪಡಿಸಲಾಗಿದೆ. ನೋಂದಣಿ ಸಂದರ್ಭದಲ್ಲಿ ಆಧಾರ್ ಆಧಾರಿತ ಪರಿಶೀಲನೆ ಮಾಡಲಾಗುತ್ತದೆ.
ಕರ್ನಾಟಕದ ಗ್ರಾಮ ಪಂಚಾಯಿತಿ ಅಥವಾ ವಾರ್ಡ್ ವ್ಯಾಪ್ತಿಯ ನಿವಾಸಿಗಳು ಈ ಸಂಘದ ಸದಸ್ಯತ್ವ ಪಡೆಯಬಹುದಾಗಿದೆ. ಒಬ್ಬ ವ್ಯಕ್ತಿ ಒಂದು ಭಾರತ್ ಜೋಡೋ ಯುವ ಸಂಘದಲ್ಲಿ ಮಾತ್ರ ಸದಸ್ಯರಾಗಲು ಅವಕಾಶವಿದೆ.
ಆನ್ಲೈನ್ನಲ್ಲಿ ನೋಂದಣಿ ಹೇಗೆ?
ಯುವಕರು ಅಧಿಕೃತ ವೆಬ್ಸೈಟ್ ಮೂಲಕ ಸದಸ್ಯತ್ವಕ್ಕೆ ನೋಂದಣಿ ಮಾಡಿಕೊಳ್ಳಬಹುದು. ಇದಕ್ಕಾಗಿ https://bjys.karnataka.gov.in/ ವೆಬ್ಸೈಟ್ಗೆ ಭೇಟಿ ನೀಡಿ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು. ನೋಂದಣಿಗೆ ಸಂಬಂಧಿಸಿದ ಮಾಹಿತಿಗಾಗಿ +91 6364 265 566 ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.
ಯುವಕರಲ್ಲಿ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಮತ್ತು ರಾಷ್ಟ್ರ ನಿರ್ಮಾಣದ ಮನೋಭಾವ ಬೆಳೆಸುವ ನಿಟ್ಟಿನಲ್ಲಿ ಈ ಸಂಘವು ಮಹತ್ವದ ವೇದಿಕೆಯಾಗುವ ನಿರೀಕ್ಷೆಯಿದೆ.














