ಬೆಂಗಳೂರು.ಆಗಸ್ಟ್.17: ರಾಜ್ಯದ ವಾಹನ ಸವಾರರಿಗೆ ಸಾರಿಗೆ ಇಲಾಖೆಯು ದರ ಏರಿಕೆಯ ಶಾಕ್ ನೀಡಿದೆ. ರಾಜ್ಯ ಸರ್ಕಾರವು ಎಲ್ಲಾ ಮಾದರಿಯ ವಾಹನಗಳ ಹೊರಸೂಸುವಿಕೆ ಪರೀಕ್ಷಾ (ಎಮಿಷನ್ ಟೆಸ್ಟ್) ಶುಲ್ಕವನ್ನು ಪರಿಷ್ಕರಿಸಿದ್ದು, ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಇನ್ನು ಮುಂದೆ ವಾಹನ ಮಾಲೀಕರು ಹೆಚ್ಚಿನ ಹಣ ತೆರಬೇಕಾಗಿದೆ.
ಪರೀಕ್ಷಾ ಕೇಂದ್ರಗಳ ನಿರ್ವಹಣಾ ವೆಚ್ಚ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಶುಲ್ಕ ಪರಿಷ್ಕರಣೆ ಮಾಡುವಂತೆ ಕೇಂದ್ರಗಳ ನಿರ್ವಾಹಕರು ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಿ, ಸಾರಿಗೆ ಇಲಾಖೆಯು ಆಗಸ್ಟ್ 13 ರಂದು ನೂತನ ದರಪಟ್ಟಿ ಪ್ರಕಟಿಸಿ ಆದೇಶ ಹೊರಡಿಸಿದೆ. ಈ ಹಿಂದೆ ಕೊನೆಯ ಬಾರಿಗೆ ಏಪ್ರಿಲ್ 2022 ರಲ್ಲಿ ಶುಲ್ಕ ಪರಿಷ್ಕರಣೆ ಮಾಡಲಾಗಿತ್ತು.
ಪರಿಷ್ಕೃತ ದರಗಳ ವಿವರ
ದ್ವಿಚಕ್ರ ವಾಹನಗಳು: ಈ ಹಿಂದೆ ಇದ್ದ ₹65 ಶುಲ್ಕವನ್ನು ₹15 ಹೆಚ್ಚಿಸಲಾಗಿದ್ದು, ಇನ್ನು ಮುಂದೆ ₹80 ಪಾವತಿಸಬೇಕಾಗುತ್ತದೆ.
ಆಟೋರಿಕ್ಷಾಗಳು: ಈ ಹಿಂದೆ ಇದ್ದ ₹75 ಶುಲ್ಕವನ್ನು ₹5 ಹೆಚ್ಚಿಸಲಾಗಿದ್ದು, ಹೊಸ ದರ ₹80 ನಿಗದಿಯಾಗಿದೆ.
ನಾಲ್ಕು ಚಕ್ರದ ಲಘು ವಾಹನಗಳು (ಪೆಟ್ರೋಲ್, ಸಿಎನ್ಜಿ, ಎಲ್ಪಿಜಿ/ಪಿಎನ್ಜಿ): ಇವುಗಳ ಶುಲ್ಕವನ್ನು ₹115 ರಿಂದ ₹35 ಹೆಚ್ಚಳ ಮಾಡಲಾಗಿದ್ದು, ಇನ್ಮುಂದೆ ₹150 ಪಾವತಿಸಬೇಕಿದೆ.
ಡೀಸೆಲ್ ವಾಹನಗಳು: ಎಲ್ಲಾ ಬಗೆಯ ಡೀಸೆಲ್ ವಾಹನಗಳ ಪರೀಕ್ಷಾ ಶುಲ್ಕವನ್ನು ₹160 ರಿಂದ ₹40 ಹೆಚ್ಚಿಸಲಾಗಿದ್ದು, ಹೊಸ ದರ ₹200 ಕ್ಕೆ ಏರಿಕೆಯಾಗಿದೆ.











