ಮುಂಬೈ.ಆಗಸ್ಟ್.16: ವಿಮಲ್ ಎಲೈಚಿ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಬಾಲಿವುಡ್‌ನ ಖ್ಯಾತ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಇಲಾಖೆ (FDA) ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.
ಮಹಾರಾಷ್ಟ್ರದಲ್ಲಿ ನಿಷೇಧಿತವಾಗಿರುವ ಪಾನ್ ಮಸಾಲಾ ಬ್ರ್ಯಾಂಡ್ ಅನ್ನು ಪರೋಕ್ಷವಾಗಿ (ಸರೊಗೇಟ್ ಅಡ್ವರ್ಟೈಸಿಂಗ್) ಪ್ರಚಾರ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ (FSS Act, 2006) ಅಡಿಯಲ್ಲಿ ಈ ನೋಟಿಸ್ ನೀಡಲಾಗಿದ್ದು, ಎಲೈಚಿ ಹೆಸರಿನಲ್ಲಿ ತೋರಿಸಲಾಗುತ್ತಿರುವ ಜಾಹೀರಾತು ಗ್ರಾಹಕರನ್ನು ದಾರಿತಪ್ಪಿಸುವಂತಿದೆ ಎಂದು ಎಫ್‌ಡಿಎ ಅಭಿಪ್ರಾಯಪಟ್ಟಿದೆ. ಜಾಹೀರಾತಿನ ಶೈಲಿ, ಸಂಭಾಷಣೆ ಹಾಗೂ ಬ್ರ್ಯಾಂಡ್ ಹೆಸರು ನಿಷೇಧಿತ ಪಾನ್ ಮಸಾಲಾವನ್ನು ಪ್ರೋತ್ಸಾಹಿಸುವ ಉದ್ದೇಶವನ್ನು ಹೊಂದಿವೆ ಎಂದು ನೋಟಿಸ್‌ನಲ್ಲಿ ಉಲ್ಲೇಖಿಸಲಾಗಿದೆ. ಕಾಯ್ದೆಯ ಸೆಕ್ಷನ್ 24 ಮತ್ತು ಸೆಕ್ಷನ್ 53ರ ಅನ್ವಯ ದಾರಿತಪ್ಪಿಸುವ ಜಾಹೀರಾತುಗಳಲ್ಲಿ ಭಾಗಿಯಾದ ಪ್ರಚಾರಕರಿಗೆ (ಬ್ರ್ಯಾಂಡ್ ರಾಯಭಾರಿಗಳು) ಗರಿಷ್ಠ 10 ಲಕ್ಷ ರೂಪಾಯಿವರೆಗೆ ದಂಡ ವಿಧಿಸಲು ಅವಕಾಶವಿದೆ.
ಎಫ್‌ಡಿಎ ಆಯುಕ್ತ ತುಕಾರಾಂ ಮುಂಢೆ ಅವರ ನಿರ್ದೇಶನದ ಮೇರೆಗೆ ಮೂವರು ನಟರಿಗೂ ನೋಟಿಸ್ ತಲುಪಿಸಲಾಗಿದ್ದು, ಈ ಕುರಿತು ವಿವರವಾದ ಲಿಖಿತ ವಿವರಣೆ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣಗಳಿಂದ ಈ ಜಾಹೀರಾತಿಗೆ ಸಂಬಂಧಿಸಿದ ಎಲ್ಲಾ ಪ್ರಚಾರದ ಪೋಸ್ಟ್‌ಗಳನ್ನು 15 ದಿನಗಳ ಒಳಗೆ ತೆಗೆದುಹಾಕಲು ಮತ್ತು ಪ್ರಚಾರ ಅಭಿಯಾನದಿಂದ ತಕ್ಷಣವೇ ಹಿಂದೆ ಸರಿಯಲು ಎಫ್‌ಡಿಎ ಕಟ್ಟುನಿಟ್ಟಿನ ಆದೇಶ ನೀಡಿದೆ. ಮಹಾರಾಷ್ಟ್ರದಲ್ಲಿ 2012 ರಿಂದಲೇ ತಂಬಾಕು ಮತ್ತು ನಿಕೋಟಿನ್ ಯುಕ್ತ ಪಾನ್ ಮಸಾಲಾ ಉತ್ಪಾದನೆ ಹಾಗೂ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದ್ದು, ಇತ್ತೀಚೆಗೆ ಇಲಾಖೆಯು ಇಂತಹ ಸರೊಗೇಟ್ ಜಾಹೀರಾತುಗಳ ವಿರುದ್ಧ ಕಠಿಣ ನಿಗಾ ವಹಿಸಿದೆ.










