ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ, ಆ. 13 : ಮತ ಬ್ಯಾಂಕ್ ಹಾಗೂ ರಾಜಕೀಯ ಲಾಭಕ್ಕಾಗಿ ರಾಜ್ಯ ಕಾಂಗ್ರೆಸ್ ಸರ್ಕಾರವು ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ ಕನ್ನಡಿಗರ ಹಾಗೂ ಕಾವೇರಿಯ ಹಿತ ಕಾಯುವುದಾಗಿ ಹೇಳಿಕೊಳ್ಳುವ ಸರ್ಕಾರವು, ತಮಿಳುನಾಡಿಗೆ ಶರಣಾಗಿ ರಾಜ್ಯದ ರೈತರ ಹಾಗೂ ಸಾರ್ವಜನಿಕರ ಹಿತಾಸಕ್ತಿಯನ್ನು ಬಲಿ ಕೊಡುತ್ತಿದೆ ಎಂದು ಸರ್ಕಾರದ ವಿರುದ್ದ ತೀವ್ರ ಆಕ್ರೋಶ ವ್ಯಕ್ತಪಡಿಸಲಾಗಿತು.
ತಮಿಳುನಾಡಿಗೆ ಕರ್ನಾಟಕದ ಕಾವೇರಿ ನೀರು ಹರಿಸುವುದರ ವಿರುದ್ದ ಗುರುವಾರ ನಗರದಲ್ಲಿ ಕರುನಾಡ ವಿಜಯಸೇನೆ ಹಾಗೂ ಸಮೃದಿ ಕರುನಾಡು ರಕ್ಷಣಾ ವೇದಿಕೆವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಕರುನಾಡ ವಿಜಯಸೇನೆ ಜಿಲ್ಲಾಧ್ಯಕ್ಷ ಕೆ.ಟಿ.ಶಿವಕುಮಾರ್ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಸ್ತುತ ಸರ್ಕಾರವು ಮತಬ್ಯಾಂಕ್ ಓಲೈಕೆಗಾಗಿ ತಮಿಳುನಾಡಿಗೆ ನೀರು ಹರಿಸುತ್ತಿದ್ದು, ಇದು ಖಂಡನೀಯವಾಗಿದೆ. ಕಾವೇರಿ ಕೊಳ್ಳದ ಹಾಗೂ ರಾಜ್ಯದ ಜನರಿಗೆ ಮೊಸಳೆ ಕಣ್ಣೀರು ಸುರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಕಾವೇರಿ ವಿವಾದವನ್ನು ಶಾಶ್ವತವಾಗಿ ಬಗೆಹರಿಸುವ ಧೈರ್ಯ ಹಾಗೂ ಇಚ್ಛಾಶಕ್ತಿ ಪ್ರಸ್ತುತ ಕಾಂಗ್ರೆಸ್ ಸರ್ಕಾರಕ್ಕಾಗಲಿ ಅಥವಾ ಈ ಹಿಂದೆ ಆಡಳಿತ ನಡೆಸಿದ ಬಿಜೆಪಿ ಮತ್ತು ಜೆಡಿಎಸ್ ಸರ್ಕಾರಗಳಿಗಾಗಲಿ ಇಲ್ಲ. ರಾಜಕೀಯ ಪಕ್ಷಗಳಿಗೆ ಕೇವಲ ಮತಷ್ಟೇ ಮುಖ್ಯ ವಾಗಿದ್ದು, ರಾಜ್ಯದಲ್ಲಿ ಬರದ ಪರಿಸ್ಥಿತಿ ಇದ್ದರೂ ಜನ ಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ ಎಂದು ದೂರಿದರು.
ರಾಜ್ಯದಲ್ಲಿ ಭೀಕರ ಅಭಾವ ಅಥವಾ ಬರದ ಪರಿಸ್ಥಿತಿ ನಿವಾರಣೆಯಾಗಬೇಕಾದರೆ ಸರ್ಕಾರ ತಮಿಳುನಾಡಿಗೆ ನೀರು ಹರಿಸುವುದನ್ನು ತಕ್ಷಣವೇ ತಡೆಯಬೇಕು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀರು ಹರಿಸದಿರಲು ದೃಢ ನಿರ್ಧಾರ ಕೈಗೊಳ್ಳಬೇಕು. ಕಾವೇರಿ ವಿಚಾರವಾಗಿ ಪದೇ ಪದೇ ‘ಕರ್ನಾಟಕ ಬಂದ್’ ಕರೆ ನೀಡುವುದು ಸರಿಯಾದ ಪರಿಹಾರವಲ್ಲ. ಸರ್ಕಾರ ನೀರು ಹರಿಸುವುದನ್ನು ತಡೆಯದಿದ್ದರೆ, ಬಂದ್ ಆಚರಿಸುವ ಬದಲಿಗೆ ರಾಜ್ಯದ ಎಲ್ಲಾ 224 ಶಾಸಕರ ಮನೆಗಳ ಬಾಗಿಲಿಗೆ ಬೀಗ ಜಡಿಯುವ ಮೂಲಕ ವಿಭಿನ್ನ ಹಾಗೂ ತೀವ್ರ ರೀತಿಯ ಹೋರಾಟ ನಡೆಸಿ, ಶಾಸಕರ ರಾಜೀನಾಮೆಗೆ ಒತ್ತಾಯಿಸುವುದಾಗಿ ಎಚ್ಚರಿಸಲಾಗಿದೆ.
ಕಾವೇರಿ ನದಿ ನೀರು ಹಂಚಿಕೆ ವಿಷಯದಲ್ಲಿ ಸರ್ಕಾರ ರಾಜಕೀಯ ಹಿತಾಸಕ್ತಿಯನ್ನು ಬದಿಗಿಟ್ಟು, ಕನ್ನಡಿಗರ ಹಾಗೂ ರಾಜ್ಯದ ರೈತರ ಹಿತವನ್ನು ಕಾಪಾಡಲು ತಕ್ಷಣವೇ ದೃಢ ನಿಲುವು ತಳೆಯಬೇಕು. ಇಲ್ಲವಾದಲ್ಲಿ ಜನಪ್ರತಿನಿಧಿಗಳ ವಿರುದ್ಧ ಹೋರಾಟ ತೀವ್ರಗೊಳ್ಳಲಿದೆ ಎಂದು ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ಕರ್ನಾಟಕದ ಕಾವೇರಿ ನೀರು ಹರಿಸುವುದರ ಮೂಲಕ ಕರ್ನಾಟಕ ಜನತೆಗೆ ಖಾಲಿ ಚಂಬನ್ನು ನೀಡುತ್ತಿದೆ ಎಂದು ಪ್ರತಿಭಟನೆಯಲ್ಲಿ ಖಾಲಿ ಕೂಡ ಹಾಗೂ ಚಂಬನ್ನು ಪ್ರದರ್ಶನ ಮಾಡಲಾಯಿತು.
ಸಮೃದ್ಧಿ ಕರುನಾಡು ರಕ್ಷಣಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಕೆ. ರಂಗಸ್ವಾಮಿ ಮಾತನಾಡಿ, ತಮಿಳುನಾಡಿಗೆ ಕಾವೇರಿ ನೀರನ್ನು ಹರಿಸುವ ಮೂಲಕ ಕರ್ನಾಟಕಕ್ಕೆ ಮತ್ತು ಕನ್ನಡಿಗರಿಗೆ ನಿರಂತರವಾಗಿ ಅನ್ಯಾಯವೆಸಗಲಾಗುತ್ತಿದೆ ಕಾವೇರಿ, ಮಹಾದಾಯಿ ಹಾಗೂ ಕಳಸಾ-ಬಂಡೂರಿ ಸೇರಿದಂತೆ ರಾಜ್ಯದ ನೀರಾವರಿ ಯೋಜನೆಗಳಲ್ಲಿ ಕನ್ನಡಿಗರಿಗೆ ಪದೇ ಪದೇ ಅನ್ಯಾಯವಾಗುತ್ತಿದ್ದು, ಇದನ್ನು ತಕ್ಷಣವೇ ತಡೆಹಿಡಿಯಬೇಕು ಎಂದು ಆಗ್ರಹಿಸಿ ಆಡಳಿತಕ್ಕೆ ಬರುವ ಯಾವುದೇ ಸರ್ಕಾರಗಳಿದ್ದರೂ ನೆರೆಯ ರಾಜ್ಯಗಳ ಎದುರು ರಾಜ್ಯದ ಹಿತಾಸಕ್ತಿಯನ್ನು ಕಾಯುವಲ್ಲಿ ನಿರಸನ ತೋರುತ್ತಿವೆ ಪ್ರಸ್ತುತ ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿಗಳು ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಕನ್ನಡಿಗರ ಹಾಗೂ ರಾಜ್ಯದ ರೈತರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿ, ತಮಿಳುನಾಡಿಗೆ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಮನವಿ ಮಾಡಿದರು.
ಈ ಮುಂಚೆ ರಾಜ್ಯದ ಮುಖ್ಯಮಂತ್ರಿಗಳು ತಾವು ಕನ್ನಡಿಗರ ಮತ್ತು ರಾಜ್ಯದ ಪರವಾಗಿರುವುದಾಗಿ ಹೇಳಿಕೆ ನೀಡಿದ್ದು, ಆ ಮಾತಿಗೆ ಬದ್ಧರಾಗಿ ನಡೆದುಕೊಳ್ಳಬೇಕು ಹಾಗೂ ರಾಜ್ಯದ ಹಿತವನ್ನು ಕಾಪಾಡಿಕೊಳ್ಳಬೇಕು ಒಂದು ವೇಳೆ ಸರ್ಕಾರ ಕನ್ನಡಿಗರ ಹಿತ ಕಾಯುವಲ್ಲಿ ವಿಫಲವಾದರೆ ಹಾಗೂ ಈ ಸಮಸ್ಯೆಯನ್ನು ಸರಿಪಡಿಸದಿದ್ದರೆ, ಮುಂಬರುವ ದಿನಗಳಲ್ಲಿ ರಾಜ್ಯದ 224 ಕ್ಷೇತ್ರಗಳ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲಾಗುವುದು. ಅಷ್ಟೇ ಅಲ್ಲದೆ, ರಾಜ್ಯಾದ್ಯಂತ ವಿಧಾನಸೌಧ ಮುತ್ತಿಗೆ ಚಳುವಳಿಗೆ ಕರೆ ನೀಡಲಾಗುವುದು ಎಂದು ಎಚ್ಚರಿಸಿದ್ದಾರೆ.
ಈ ಸಂದರ್ಭದಲ್ಲಿ ಕರುನಾಡ ವಿಜಯಸೇನೆಯ ಮಹಿಳಾ ಜಿಲ್ಲಾ ಧ್ಯಕ್ಷರಾದ ವೀಣಾಗೌರಣ್ಣ, ನಗರಾಧ್ಯಕ್ಷ ಆವಿನಾಶ್, ವಿದ್ಯಾರ್ಥಿ ಘಟಕದ ಅಧ್ಯಕ್ಷ ಅಖಿಲೇಶ್, ಜಿಲ್ಲಾ ಕಾರ್ಯದರ್ಶಿ ಜಗದೀಶ್, ಜಿಲ್ಲಾ ಉಪಾಧ್ಯಕ್ಷ ಮುಜಾಹಿದ್ ಸಮೃದ್ಧಿ ಕರುನಾಡು ರಕ್ಷಣಾ ವೇದಿಕೆಯ ಗೌರವಾಧ್ಯಕ್ಷರಾದ ಮಂಜುನಾಥ್, ರಾಜ್ಯ ಉಪಾಧ್ಯಕ್ಷರಾದ ದೇವರಾಜ್, ಪದಾಧಿಕಾರಿಗಳಾದ ಚಂದ್ರಮ್ಮ, ಅಭೀಷೇಕ್, ಆಕಾಶ್, ರಂಗಸ್ವಾಮಿ, ಕೃತಿಕ್ ಗೀರೀಶ್, ಮದನ್, ಲಿಖಿತ್, ಸುದೀಪ್ ದೇವರಾಜ್, ಸ್ವಾಮಿ, ಲಿಂಗರಾಜು, ಸಿದ್ದಪ್ಪ ಧನುಷು ರಾಕೇಶ್ ಭಾಗವಹಿಸಿದ್ದರು.











