ದಾವಣಗೆರೆ: ಜಿಲ್ಲೆಯ ವಿವಿಧ ಭಾಗಗಳಲ್ಲಿ ಬುಧವಾರ ಸುರಿದ ಭಾರೀ ಆಶ್ಲೇಷಾ ಮಳೆ ಜನಜೀವನದ ಮೇಲೆ ಪರಿಣಾಮ ಬೀರಿದರೂ, ರೈತರಲ್ಲಿ ಹೊಸ ಭರವಸೆ ಮೂಡಿಸಿದೆ. ಈ ಮುಂಗಾರು ಹಂಗಾಮಿನಲ್ಲಿ ದಾಖಲಾದ ಪ್ರಮುಖ ಮಳೆಯಾಗಿದ್ದು, ಹಲವು ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಳಿಗೆ ಚೈತನ್ಯ ತುಂಬಿದೆ.
ನಿನ್ನೆ ಮಧ್ಯಾಹ್ನ 3 ಗಂಟೆ ಸುಮಾರಿಗೆ ಆರಂಭವಾದ ಮಳೆ ಹಲವು ಗಂಟೆಗಳ ಕಾಲ ನಿರಂತರವಾಗಿ ಸುರಿದ ಪರಿಣಾಮ, ದಾವಣಗೆರೆ ನಗರ ಸೇರಿದಂತೆ ಅನೇಕ ಪ್ರದೇಶಗಳ ರಸ್ತೆಗಳು ಜಲಾವೃತಗೊಂಡವು. ಮಾಯಕೊಂಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಮೈದಾನ ಸಂಪೂರ್ಣ ನೀರಿನಿಂದ ತುಂಬಿ ಕೆರೆಯಂತಾಗಿದ್ದು, ಶಾಲಾ ಮಕ್ಕಳು ಸುರಿಯುವ ಮಳೆಯಲ್ಲೇ ಮನೆಗಳಿಗೆ ತೆರಳಬೇಕಾಯಿತು.

ಮಾಯಕೊಂಡ ಹೋಬಳಿಯ ರಾಗಿ ಬೆಳೆ ಬೆಳೆದ ಹೊಲಗಳಲ್ಲಿ ನೀರು ನಿಂತಿದ್ದು, ರೈತರು ಉತ್ತಮ ಮಳೆಯಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ತುಂಗಾ ಜಲಾಶಯದಿಂದ ಹೊರಹರಿವು 40 ಸಾವಿರ ಕ್ಯೂಸೆಕ್‌ಗೆ ಇಳಿಕೆಯಾಗಿರುವುದರಿಂದ ಹೊನ್ನಾಳಿ ಹಾಗೂ ಹರಿಹರ ಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯ ನೀರಿನ ಮಟ್ಟವೂ ಇಳಿಮುಖವಾಗಿದೆ.

ದಾವಣಗೆರೆ ನಗರದಲ್ಲಿ ಮಳೆಯಿಂದ ರಸ್ತೆಗಳ ಗುಂಡಿಗಳು ನೀರಿನಿಂದ ತುಂಬಿ ವಾಹನ ಸವಾರರು ಹಾಗೂ ಸಾರ್ವಜನಿಕರು ಸಂಚಾರದಲ್ಲಿ ತೊಂದರೆ ಅನುಭವಿಸಿದರು. ಮಳೆ ತಪ್ಪಿಸಿಕೊಳ್ಳಲು ಜರ್ಕಿನ್ ಮತ್ತು ಛತ್ರಿಗಳ ಮೊರೆ ಹೋಗಬೇಕಾಯಿತು. ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಮಳೆಯಲ್ಲಿ ನೆನೆಯುತ್ತಲೇ ಮನೆ ಸೇರಿದರು.
ಹರಿಹರದಲ್ಲಿ ಮಧ್ಯಾಹ್ನದಿಂದಲೇ ಉತ್ತಮ ಮಳೆಯಾಗಿದ್ದರೆ, ಹೊನ್ನಾಳಿ, ಚನ್ನಗಿರಿ, ನ್ಯಾಮತಿ ಹಾಗೂ ಜಗಳೂರು ತಾಲೂಕುಗಳಲ್ಲಿ ಸಾಧಾರಣ ಮಳೆಯಾಗಿದೆ. ಚನ್ನಗಿರಿ ತಾಲೂಕಿನ ಚಿರಡೋಣಿ ಹಾಗೂ ಬಸವಾಪಟ್ಟಣ ಭಾಗದಲ್ಲಿ ಸುರಿದ ಮಳೆಯಿಂದ ಭತ್ತದ ನಾಟಿ ಸೇರಿದಂತೆ ಕೃಷಿ ಚಟುವಟಿಕೆಗಳು ವೇಗ ಪಡೆದುಕೊಂಡಿವೆ.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಅವರ ಪ್ರಕಾರ, ದಾವಣಗೆರೆ ನಗರದಲ್ಲಿ ಉತ್ತಮ ಮಳೆಯಾಗಿದ್ದರೂ ಜಿಲ್ಲಾದ್ಯಂತ ಇನ್ನೂ ಸಮರ್ಪಕ ಮಳೆಯಾಗಿಲ್ಲ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಶೇ.41ರಷ್ಟು ಮಳೆ ಕೊರತೆ ದಾಖಲಾಗಿದೆ ಎಂದು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಸೋಮವಾರ ಸರಾಸರಿ 3.5 ಮಿ.ಮೀ. ಮಳೆ ದಾಖಲಾಗಿದ್ದು, ಚನ್ನಗಿರಿ ತಾಲೂಕಿನಲ್ಲಿ ಎರಡು ಮನೆಗಳು ಹಾನಿಗೀಡಾಗಿ ಸುಮಾರು ₹1.80 ಲಕ್ಷ ನಷ್ಟ ಉಂಟಾಗಿದೆ. ತಾಲೂಕುವಾರು ಮಳೆ ಪ್ರಮಾಣದಲ್ಲಿ ಚನ್ನಗಿರಿ 8.5 ಮಿ.ಮೀ, ದಾವಣಗೆರೆ 1.8 ಮಿ.ಮೀ, ಹರಿಹರ 1.6 ಮಿ.ಮೀ, ಹೊನ್ನಾಳಿ 1.9 ಮಿ.ಮೀ, ಜಗಳೂರು 1 ಮಿ.ಮೀ ಹಾಗೂ ನ್ಯಾಮತಿ 2.5 ಮಿ.ಮೀ ಮಳೆಯಾಗಿದೆ.











