ನವದೆಹಲಿ: ಇಂಧನ ದರ ಏರಿಕೆ, ಕಚ್ಚಾ ವಸ್ತುಗಳ ಬೆಲೆ ಹೆಚ್ಚಳ ಹಾಗೂ ಜಾಗತಿಕ ಪೂರೈಕೆ ಸರಪಳಿಯಲ್ಲಿನ ಅಡಚಣೆಗಳ ಪರಿಣಾಮವಾಗಿ ಆಗಸ್ಟ್ 1ರಿಂದ ಹಲವು ಅಗತ್ಯ ವಸ್ತುಗಳು ಮತ್ತು ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ. ದಿನನಿತ್ಯ ಬಳಕೆಯ ಎಫ್‌ಎಂಸಿಜಿ (FMCG) ವಸ್ತುಗಳಿಂದ ಹಿಡಿದು ಎಲೆಕ್ಟ್ರಾನಿಕ್ಸ್, ಸ್ಮಾರ್ಟ್‌ಫೋನ್ ಮತ್ತು ಕಾರುಗಳವರೆಗೆ ಹಲವು ಉತ್ಪನ್ನಗಳ ದರ ಪರಿಷ್ಕರಣೆಗೆ ಕಂಪನಿಗಳು ಸಜ್ಜಾಗಿವೆ.ಈ ಬೆಳವಣಿಗೆಯಿಂದ ಈಗಾಗಲೇ ಹಣದುಬ್ಬರದ ಒತ್ತಡ ಎದುರಿಸುತ್ತಿರುವ ಮಧ್ಯಮ ವರ್ಗದ ಕುಟುಂಬಗಳ ಮಾಸಿಕ ವೆಚ್ಚ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.
ಟೀ, ಹೇರ್ ಆಯಿಲ್, ಸಾಬೂನು, ಪ್ಯಾಕ್ ಮಾಡಿದ ಆಹಾರ ಸೇರಿದಂತೆ ಹಲವು ದಿನನಿತ್ಯದ ಬಳಕೆಯ ವಸ್ತುಗಳ ಬೆಲೆ ಶೇ. 6 ರಿಂದ 8ರಷ್ಟು ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ಮನೆ ಬಜೆಟ್ ಮೇಲೆ ಹೆಚ್ಚುವರಿ ಹೊರೆ ಬೀಳಲಿದೆ.
ರೆಫ್ರಿಜರೇಟರ್, ವಾಷಿಂಗ್ ಮೆಷಿನ್ ಹಾಗೂ ಟೆಲಿವಿಷನ್‌ಗಳ ಬೆಲೆ ಶೇ. 4 ರಿಂದ 6ರಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಜಾಗತಿಕ ಮಟ್ಟದಲ್ಲಿ ಮೆಮೊರಿ ಚಿಪ್‌ಗಳ ಬೆಲೆ ಏರಿಕೆಯ ಪರಿಣಾಮ ಸ್ಮಾರ್ಟ್‌ಫೋನ್‌ಗಳ ದರವೂ ಹೆಚ್ಚುವ ನಿರೀಕ್ಷೆಯಿದೆ.
ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದ ವಾಹನ ಉತ್ಪಾದನಾ ವೆಚ್ಚ ಹೆಚ್ಚಿರುವ ಹಿನ್ನೆಲೆಯಲ್ಲಿ ಪ್ರಮುಖ ವಾಹನ ತಯಾರಿಕಾ ಕಂಪನಿಗಳು ಬೆಲೆ ಹೆಚ್ಚಿಸಲು ಮುಂದಾಗಿವೆ. ಮಾರುತಿ ಸುಜುಕಿ ಕೆಲವು ಮಾದರಿಗಳ ಬೆಲೆಯನ್ನು ಆಗಸ್ಟ್‌ನಿಂದ ₹30,000ವರೆಗೆ ಹೆಚ್ಚಿಸುವುದಾಗಿ ಘೋಷಿಸಿದ್ದು, ಹೋಂಡಾ ಕಾರ್ಸ್ ಹಾಗೂ ಮರ್ಸಿಡಿಸ್-ಬೆನ್ಜ್ ಕೂಡ ಶೀಘ್ರದಲ್ಲೇ ದರ ಪರಿಷ್ಕರಣೆ ಮಾಡುವ ಸಾಧ್ಯತೆ ಇದೆ.
ಬೆಲೆ ಏರಿಕೆಗೆ ಕಾರಣವೇನು?
ಕಚ್ಚಾ ತೈಲ, ಪಾಮ್ ಆಯಿಲ್ ದರ ಏರಿಕೆ, ಪ್ಯಾಕಿಂಗ್ ಸಾಮಗ್ರಿಗಳ ವೆಚ್ಚ ಹೆಚ್ಚಳ, ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯ ಉದ್ವಿಗ್ನತೆ, ಸಮುದ್ರ ಸಾರಿಗೆ ವೆಚ್ಚದ ಏರಿಕೆ ಹಾಗೂ ಡಾಲರ್ ಎದುರು ರೂಪಾಯಿ ವಿನಿಮಯ ಮೌಲ್ಯದ ಏರಿಳಿತಗಳಿಂದ ಆಮದು ವೆಚ್ಚ ಹೆಚ್ಚಾಗಿದೆ. ಇದೇ ಕಾರಣಕ್ಕೆ ಉತ್ಪನ್ನಗಳ ಬೆಲೆ ಏರಿಕೆ ಅನಿವಾರ್ಯವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಗ್ರಾಹಕರ ಮೇಲಿನ ಒತ್ತಡವನ್ನು ಒಂದೇ ಬಾರಿ ಹೆಚ್ಚಿಸದಿರಲು ಕಂಪನಿಗಳು ಹಂತ ಹಂತವಾಗಿ ಬೆಲೆ ಏರಿಸಲು ನಿರ್ಧರಿಸಿವೆ. ಮೊದಲಿಗೆ ಪ್ರೀಮಿಯಂ ಉತ್ಪನ್ನಗಳ ದರ ಹೆಚ್ಚಿಸಿ, ಬಳಿಕ ಸಣ್ಣ ಪ್ಯಾಕ್‌ಗಳ ಬೆಲೆಯನ್ನೂ ಪರಿಷ್ಕರಿಸುವ ಸಾಧ್ಯತೆ ಇದೆ. ಸೆಪ್ಟೆಂಬರ್ ತ್ರೈಮಾಸಿಕದಲ್ಲಿಯೂ ಶೇ. 2 ರಿಂದ 5ರಷ್ಟು ಹೆಚ್ಚುವರಿ ದರ ಏರಿಕೆ ಸಂಭವಿಸಬಹುದು ಎಂದು ಮಾರುಕಟ್ಟೆ ವಲಯ ಅಂದಾಜಿಸಿದೆ.
ಆಹಾರ ಪದಾರ್ಥಗಳು ಸೇರಿದಂತೆ ವಿವಿಧ ಉತ್ಪನ್ನಗಳ ಬೆಲೆ ಏರಿಕೆಯಿಂದ ಹಣದುಬ್ಬರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದ್ದು, ಮುಂಬರುವ ಹಬ್ಬದ ಋತುವಿನಲ್ಲಿ ಮಧ್ಯಮ ವರ್ಗದ ಕುಟುಂಬಗಳಿಗೆ ಖರ್ಚು ನಿರ್ವಹಣೆ ದೊಡ್ಡ ಸವಾಲಾಗಬಹುದು ಎಂದು ಆರ್ಥಿಕ ತಜ್ಞರು ಎಚ್ಚರಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











