ಬೆಂಗಳೂರು: ಬಿಡಿಎ ಅಥವಾ ವಿವಿಧ ಗೃಹ ನಿರ್ಮಾಣ ಸಹಕಾರ ಸಂಘಗಳಿಂದ ನಿವೇಶನ ಪಡೆದು ವರ್ಷಗಳೇ ಕಳೆದರೂ ಮನೆ ನಿರ್ಮಿಸದೆ ಖಾಲಿ ಬಿಟ್ಟಿರುವ ಮಾಲೀಕರಿಗೆ ರಾಜ್ಯ ಸರ್ಕಾರ ಖಡಕ್ ಎಚ್ಚರಿಕೆ ನೀಡಿದೆ. ನಿವೇಶನ ಹಂಚಿಕೆಯಾದ ಐದು ವರ್ಷಗಳ ಒಳಗೆ ಮನೆ ನಿರ್ಮಿಸದಿದ್ದರೆ, ಪಾವತಿಸಿದ ಹಣವನ್ನು ಬಡ್ಡಿ ಸಮೇತ ಹಿಂತಿರುಗಿಸಿ ಜಾಗವನ್ನು ಸರ್ಕಾರವೇ ಹಿಂಪಡೆಯಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.
ಶನಿವಾರ ಹೆಬ್ಬಾಳ ಜಂಕ್ಷನ್ ಬಳಿ ಆಯೋಜಿಸಲಾಗಿದ್ದ “ತ್ಯಾಜ್ಯದಿಂದ ಸ್ವಾತಂತ್ರ್ಯ” ಬೃಹತ್ ಅಭಿಯಾನಕ್ಕೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಖಾಲಿ ನಿವೇಶನಗಳನ್ನು ಹಲವರು ದಶಕಗಳಿಂದ ಹಾಗೆಯೇ ಬಿಟ್ಟಿರುವುದರಿಂದ ಅಲ್ಲಿ ಕಸ ಕಡ್ಡಿಗಳು ಬಿದ್ದು ಅಸ್ವಚ್ಛತೆ ತಾಂಡವವಾಡುತ್ತಿದೆ. ನಿವೇಶನ ಮಾಲೀಕರು ಕಾಂಪೌಂಡ್ ಕೂಡ ಹಾಕದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಮನೆ ನಿರ್ಮಿಸಲು ಸಾಧ್ಯವಾಗದಿದ್ದರೆ ಅಂತಹ ಜಾಗಕ್ಕೆ ದುಪ್ಪಟ್ಟು ತೆರಿಗೆ ವಿಧಿಸುವುದು ಅಥವಾ ಜಾಗವನ್ನು ಹಿಂಪಡೆಯುವುದನ್ನು ಬಿಟ್ಟು ಬೇರೆ ಮಾರ್ಗವಿಲ್ಲ ಎಂದು ಅವರು ತಿಳಿಸಿದರು.

ಎಲ್ಲೆಂದರಲ್ಲಿ ಕಸ ಚೆಲ್ಲಿದರೆ ವಾಹನ ಮುಟ್ಟುಗೋಲು
ನಗರದ ಸೌಂದರ್ಯ ಹಾಗೂ ನೈರ್ಮಲ್ಯಕ್ಕೆ ಧಕ್ಕೆ ತರುವ ರೀತಿಯಲ್ಲಿ ಎಲ್ಲೆಂದರಲ್ಲಿ ಘನತ್ಯಾಜ್ಯ ಸುರಿಯುವ ವಾಹನಗಳನ್ನು ಮುಲಾಜಿಲ್ಲದೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ಸಿಟಿವಿ ಕಣ್ಗಾವಲು ಇದ್ದರೂ ಕೆಲವರು ಜಾಗ ಜಾಗಗಳಲ್ಲಿ ಕಸ ಹಾಕುತ್ತಿರುವುದು ಕಂಡುಬಂದಿದ್ದು, ಇಂತಹ ಅಸಭ್ಯ ವರ್ತನೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಅನಿವಾರ್ಯವಾಗಿದೆ ಎಂದು ಡಿಸಿಎಂ ಹೇಳಿದರು.
ಸಂಘ-ಸಂಸ್ಥೆಗಳು, ಎನ್‌ಜಿಒಗಳಿಗೆ ಆಹ್ವಾನ
ನಗರವನ್ನು ಸ್ವಚ್ಛವಾಗಿಡಲು ಕೇವಲ ಸರ್ಕಾರ ಮಾತ್ರವಲ್ಲದೆ ಸಾರ್ವಜನಿಕರು ಮತ್ತು ಸ್ವಯಂಸೇವಾ ಸಂಸ್ಥೆಗಳ ಸಹಕಾರವೂ ಅಗತ್ಯ. ಆಸಕ್ತ ಎನ್‌ಜಿಒಗಳು ಹಾಗೂ ಸಂಘ-ಸಂಸ್ಥೆಗಳು ನಾಲ್ಕೈದು ರಸ್ತೆಗಳ ಜವಾಬ್ದಾರಿಯನ್ನು ವಹಿಸಿಕೊಂಡು ಸ್ವಚ್ಛತೆ ಕಾಪಾಡಲು ಮುಂಚೂಣಿಗೆ ಬರಬೇಕು ಎಂದು ಅವರು ಕರೆ ನೀಡಿದರು.
ಕಾವೇರಿ ನೀರು ನಿರ್ವಹಣೆ ಮತ್ತು ರಾಜಕೀಯ
ಇದೇ ವೇಳೆ ಕಾವೇರಿ ನೀರು ಹಂಚಿಕೆ ವಿಚಾರವಾಗಿ ವಿಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿದ ಅವರು, ಪ್ರಸ್ತುತ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಲ್ಲಿ ನೀರು ಭರ್ತಿಯಾಗುತ್ತಿದ್ದು, ಅಣೆಕಟ್ಟು ತುಂಬಿದ ಮೇಲೆ ನೀರನ್ನು ಹಿಡಿದಿಡಲು ಸಾಧ್ಯವಿಲ್ಲ. ಸುಪ್ರೀಂ ಕೋರ್ಟ್ ಮತ್ತು ಕಾವೇರಿ ಪ್ರಾಧಿಕಾರದ ಮಾರ್ಗದರ್ಶನ ಹಾಗೂ ರಾಜ್ಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ವಿಪಕ್ಷಗಳು ಮತ್ತು ಕಾನೂನು ತಜ್ಞರೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ವಿವರಿಸಿದರು.











