ಬೆಂಗಳೂರು.ಜುಲೈ.29: ರಾಜ್ಯದ ಪ್ರತಿಯೊಂದು ಶಾಲೆಯಲ್ಲೂ ಹಸಿರು ವಾತಾವರಣ ನಿರ್ಮಿಸುವ ಹಾಗೂ ಬೆಳೆಯುವ ಮಕ್ಕಳಲ್ಲಿ ಬಾಲ್ಯದಲ್ಲೇ ಪರಿಸರ ಪ್ರೇಮವನ್ನು ಬಿತ್ತುವ ಉದ್ದೇಶದಿಂದ ಸಮಗ್ರ ಶಿಕ್ಷಣ ಕರ್ನಾಟಕ ಇಲಾಖೆಯು ಹೊಸ ಅಭಿಯಾನವೊಂದಕ್ಕೆ ಚಾಲನೆ ನೀಡಿದೆ.
ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಕಡ್ಡಾಯವಾಗಿ ಇಕೋ ಕ್ಲಬ್ ಸ್ಥಾಪನೆ ಮಾಡಬೇಕು ಹಾಗೂ ‘ತಾಯಿಯ ಹೆಸರಿನಲ್ಲಿ ಒಂದು ಸಸಿ’ ನೆಡುವ ವಿಶೇಷ ಚಟುವಟಿಕೆಯನ್ನು ಹಮ್ಮಿಕೊಳ್ಳಬೇಕು ಎಂದು ಸುತ್ತೋಲೆ ಹೊರಡಿಸಲಾಗಿದೆ.
ಈ ಕಾರ್ಯಕ್ರಮದ ಯಶಸ್ವಿ ಅನುಷ್ಠಾನಕ್ಕಾಗಿ ಶಾಲೆ, ಕ್ಲಸ್ಟರ್, ತಾಲೂಕು ಬ್ಲಾಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ಈಗಾಗಲೇ ನೇಮಕ ಮಾಡಲಾಗಿದೆ. ಪ್ರಸ್ತುತ ಸಾಲಿನ ಜುಲೈ 31ರ ಒಳಗಾಗಿ ನಿಗದಿಪಡಿಸಿದ ಸಸಿ ನೆಡುವ ಗುರಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.
ಸಸಿ ನೆಡುವ ಚಟುವಟಿಕೆಗಳು ಮುಗಿದ ತಕ್ಷಣ, ಇಕೋ ಕ್ಲಬ್ ನಡೆಸಿದ ಕಾರ್ಯಕ್ರಮಗಳ ವಿವರ ಹಾಗೂ ಜಿಯೋ ಟ್ಯಾಗ್ ಹೊಂದಿರುವ ಫೋಟೋಗಳನ್ನು ನಿಗದಿಪಡಿಸಿದ ಅಧಿಕೃತ ಪೋರ್ಟಲ್ನಲ್ಲಿ ([https://ecoclubs.education.gov.in](https://ecoclubs.education.gov.in)) ಶೇಕಡಾ 100ರಷ್ಟು ನಮೂದಿಸಬೇಕಾಗಿದೆ. ಈ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯ ವಿಳಂಬ ಅಥವಾ ನಿರ್ಲಕ್ಷ್ಯ ತೋರಿದರೆ ಸಂಬಂಧಪಟ್ಟ ನೋಡಲ್ ಅಧಿಕಾರಿಗಳನ್ನೇ ನೇರ ಹೊಣೆಗಾರರನ್ನಾಗಿ ಮಾಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ರಾಜ್ಯ ಯೋಜನಾ ನಿರ್ದೇಶಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.









