ಚಿತ್ರದುರ್ಗ. ಜು. 25: ರಾಜ್ಯದ ವಿವಿಧ ಇಲಾಖೆಗಳಲ್ಲಿನ ಸುಮಾರು 72 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು, ಸ್ಪರ್ಧಾತ್ಮಕ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆಯಂತಹ ಯಾವುದೇ ಪ್ರಕರಣಕ್ಕೆ ಆಸ್ಪದ ನೀಡಬಾರದು. ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲೆಡೆ ಸಿ.ಸಿ. ಕ್ಯಾಮೆರಾ ಅಳವಡಿಕೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ಚಿತ್ರದುರ್ಗದ ಮುರುಘಾಮಠದ ಆವರಣದಲ್ಲಿನ ಅನುಭವ ಮಂಟಪದಲ್ಲಿ ಶನಿವಾರ ಏರ್ಪಡಿಸಲಾದ ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳನ್ನು ಒಳಗೊಂಡ ಬೆಂಗಳೂರು ವಿಭಾಗ ಮಟ್ಟದ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಮ್ಮ ಸರ್ಕಾರ ಬಂದ ಕೂಡಲೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 72 ಸಾವಿರ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದ್ದೇವೆ. ಎಲ್ಲ ನೇಮಕಾತಿ ಪ್ರಕ್ರಿಯೆ ಪಾರದರ್ಶಕವಾಗಿರಬೇಕು, ಅಭ್ಯರ್ಥಿಗಳಿಗೆ ಏರ್ಪಡಿಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಗಳು ಮಾರ್ಗಸೂಚಿಯಂತೆ ಕಟ್ಟುನಿಟ್ಟಾಗಿ ನಡೆಯಬೇಕು. ಪ್ರಶ್ನೆಪತ್ರಿಕೆ ಸೋರಿಕೆಯಂತಹ ಯಾವುದೇ ಪ್ರಕರಣ ಜರುಗದಂತೆ ಅತ್ಯಂತ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಪರೀಕ್ಷಾ ಕೇಂದ್ರಗಳಲ್ಲಿನ ಪ್ರತಿಯೊಂದು ಪ್ರಕ್ರಿಯೆಗಳ ಚಿತ್ರೀಕರಣವಾಗುವ ರೀತಿ ಎಲ್ಲೆಡೆ ಸಿ.ಸಿ. ಕ್ಯಾಮೆರಾಗಳನ್ನು ಅಳವಡಿಸಲು ಸೂಕ್ತ ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದರು.
ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು :
ರಾಜ್ಯದಲ್ಲಿ ಚುನಾವಣಾ ಆಯೋಗದಿಂದ ವಿಶೇಷ ಸಮಗ್ರ ಮತದಾರರ ಪರಿಷ್ಕರಣೆ ಕಾರ್ಯ ನಡೆಯುತ್ತಿದ್ದು, ಆಗಸ್ಟ್ 08 ರವರೆಗೂ ಜರುಗಲಿದೆ. ಯಾರೂ ಕೂಡ ಮತದಾನದ ಹಕ್ಕು ಕಳೆದುಕೊಳ್ಳುವಂತಾಗಬಾರದು. ಮತದಾನದ ಹಕ್ಕು ಇಲ್ಲದವರಿಗೆ ಸರ್ಕಾರದ ಸೌಲಭ್ಯ ಪಡೆದುಕೊಳ್ಳುವಲ್ಲಿ ತೊಂದರೆ ಆಗುತ್ತದೆ. ಹೀಗಾಗಿ ಅಧಿಕಾರಿಗಳು, ಮತದಾರರ ಪರಿಷ್ಕರಣೆ ಕಾರ್ಯ ಸಮರ್ಪಕವಾಗಿ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ನೀಡಿ ವರದಿ ತಯಾರಿಸಿ :ಕೇವಲ ಕಿವಿಯಿಂದ ಕೇಳುವ ವರದಿಯ ಮೇಲೆ ನನಗೆ ನಂಬಿಕೆ ಇಲ್ಲ. ಹೀಗಾಗಿ ರಾಜ್ಯಾದ್ಯಂತ ಖುದ್ದು ಪ್ರವಾಸ ಕೈಗೊಂಡು, ರಾಜ್ಯದಲ್ಲಿನ ಬರ ಪರಿಸ್ಥಿತಿಯ ಬಗ್ಗೆ ಪರಿಶೀಲಿಸುತ್ತೇನೆ. ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಬರ ಪರಿಸ್ಥಿತಿ ತಲೆದೋರಿದೆ. ಈಗಾಗಲೆ ಬರ ಘೋಷಣೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದು, ಕೇವಲ ಪಿಡಿಒ ಗಳು ನೀಡುವ ಮಾಹಿತಿ ಆಧರಿಸಿ ವರದಿಯನ್ನು ಸಿದ್ಧಪಡಿಸದೇ, ಅಧಿಕಾರಿಗಳು ಖುದ್ದಾಗಿ ಗ್ರಾಮಗಳಿಗೆ ಭೇಟಿ ನೀಡಿ, ಮಳೆ, ಬಿತ್ತನೆ, ಕುಡಿಯುವ ನೀರು ಪೂರೈಕೆ, ಅಂತರ್ಜಲ ಪ್ರಮಾಣ, ಮುಂತಾದ ಅಂಶಗಳನ್ನು ಪರಿಶೀಲಿಸಿ, ಸಮರ್ಪಕವಾದ ಮಾಹಿತಿಯೊಂದಿಗೆ ವರದಿ ಸಿದ್ಧಪಡಿಸಬೇಕು. ಬರ ಅಧ್ಯಯನಕ್ಕಾಗಿ ಕೇಂದ್ರದ ತಂಡ ಬಂದಂತಹ ಸಂದರ್ಭದಲ್ಲಿ ತಪ್ಪು ತಪ್ಪು ಮಾಹಿತಿ ನೀಡಿ, ಸರ್ಕಾರಕ್ಕೆ ಅವಮಾನ ಆಗುವ ರೀತಿಯಲ್ಲಿ ನಡೆದುಕೊಳ್ಳಬೇಡಿ. ಎಲ್ಲ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರುವಂತೆ ಈಗಾಗಲೆ ಸೂಚನೆ ನೀಡಲಾಗಿದ್ದು, ಆಯಾ ಶಾಸಕರುಗಳಿಗೆ ಅಧಿಕಾರಿಗಳು ಮಾಹಿತಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಮಾಡಿದರು.
ಬೋರ್‍ವೆಲ್ ಅಕ್ರಮ ತಡೆಗೆ ಸೂಚನೆ :
ಬರ ಪರಿಸ್ಥಿತಿಯ ಸಂದರ್ಭದಲ್ಲಿ ರಾಜ್ಯದ ಅಗತ್ಯ ಇರುವ ಕಡೆಗಳಲ್ಲಿ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯಿಸಬೇಕು. ಈ ವಿಚಾರದಲ್ಲಿ ಸಾಕಷ್ಟು ದುರ್ಬಳಕೆ ಆಗುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿಬರುತ್ತಿವೆ. ಹೀಗಾಗಿ ಸಂಬಂಧಪಟ್ಟ ಇಲಾಖೆಗಳು ಹೊಸ ಬೊರ್ ವೆಲ್ ಕೊರೆಯಿಸುವ ಸಂದರ್ಭದಲ್ಲಿ ಆಯಾ ಶಾಸಕರುಗಳ ಗಮನಕ್ಕೆ ತರಬೇಕು. ಬೋರ್ ವೆಲ್ ಕೊರೆಯಿಸುವ ಸಂದರ್ಭದ ವಿಡಿಯೋ, ಫೋಟೋ ಚಿತ್ರೀಕರಣ ಆಗಬೇಕು. ಸ್ಥಳದ ಜಿ.ಪಿ.ಎಸ್. ಕೋಆರ್ಡಿನೇಟ್ಸ್‍ಗಳೊಂದಿಗೆ ಸ್ಥಳೀಯ ಮುಖಂಡರಿಂದ ಮಹಜರು ಮಾಡಿಸಬೇಕು ಎಂದು ಮುಖ್ಯಮಂತ್ರಿಗಳು ಸೂಚನೆ ನೀಡಿದರು.
ವಿ.ಬಿ.ಜಿ. ರಾಮ್ ಜಿ ಯೋಜನೆ ಸದ್ಬಳಕೆಗೆ ಶಾಸಕರು ಮುಂದಾಗಬೇಕು : ರಾಜ್ಯದಲ್ಲಿ ಬರ ಪರಿಸ್ಥಿತಿ ಇದ್ದು, ಮನರೇಗಾ ಯೋಜನೆಯನ್ನು ವಿ.ಬಿ.ಜಿ. ರಾಮ್ ಜಿ ಯೋಜನೆಯಾಗಿ ಪರಿಷ್ಕರಿಸಿದ್ದು, ಕೇಂದ್ರ ಸರ್ಕಾರ ಶೇ. 60 ರಷ್ಟು ಹಾಗೂ ರಾಜ್ಯ ಸರ್ಕಾರ ಶೇ. 40 ರಷ್ಟು ಪಾಲು ನೀಡಬೇಕು. ಹೀಗಾಗಿ ರಾಜ್ಯ ಸರ್ಕಾರ ಕೂಡ ಹೆಚ್ಚಿನಮೊತ್ತದ ಅನುದಾನ ನೀಡಬೇಕಿದೆ. ಬಡವರಿಗೆ ಕೂಲಿ ಕೆಲಸಕ್ಕಾಗಿ ನೀಡಲು ಯಾವುದೇ ಹಣದ ಕೊರತೆಯಿಲ್ಲ. ಬರ ಪರಿಸ್ಥಿತಿ ಇರುವುದರಿಂದ ಜನರು ಗುಳೇ ಹೋಗುವುದನ್ನು ತಡೆಯಲು, ಗ್ರಾಮಗಳಲ್ಲಿ ಈ ಯೋಜನೆಯಡಿ ವೈಯಕ್ತಿಕ ಹಾಗೂ ಸಮುದಾಯ ಕಾಮಗಾರಿಗಳನ್ನು ಹೆಚ್ಚು ಹೆಚ್ಚು ಕೈಗೊಂಡು, ಸ್ಥಳೀಯವಾಗಿಯೇ ಹೆಚ್ಚಿನ ಕೂಲಿ ಕೆಲಸ ನೀಡಬೇಕು. ಈ ಮೂಲಕ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶಾಸಕರುಗಳು ಈ ಬಗ್ಗೆ ಹೆಚ್ಚಿನ ಆದ್ಯತೆ ನೀಡಬೇಕು. ಗ್ರಾಮೀಣಾಭಿವೃದ್ಧಿ ಇಲಾಖೆಯು ಈ ಕುರಿತು ಕರಪತ್ರಗಳನ್ನು ಗ್ರಾಮಗಳಲ್ಲಿ ವಿತರಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದು ಮುಖ್ಯಮಂತ್ರಿ ಗಳು ಸೂಚನೆ ನೀಡಿದರು.
ಪ್ರಜಾ ಸೇವಾ ಇಲಾಖೆ ಮೂಲಕ ಸಾರ್ವಜನಿಕರ ಸಮಸ್ಯೆಗೆ ಸ್ಪಂದನೆ :
ರಾಜ್ಯದಲ್ಲಿ ಸ್ಥಳೀಯ ಮಟ್ಟದಲ್ಲಿಯೇ ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸುವಂತೆ ಮಾಡಲು ಹೊಸದಾಗಿ ಪ್ರಜಾ ಸೇವಾ ಇಲಾಖೆಯನ್ನು ಪ್ರಾರಂಭಿಸಿದ್ದು, ಈ ಇಲಾಖೆಗಾಗಿಯೇ ಪ್ರತ್ಯೇಕವಾಗಿ ಸಚಿವರು ಹಾಗೂ ಉನ್ನತ ಮಟ್ಟದ ಅಧಿಕಾರಿಗಳನ್ನು ನೇಮಿಸಿ, ಇನ್ನಷ್ಟು ಬಲಪಡಿಸಲಾಗುವುದು. ಈ ಮೂಲಕ ಸಲ್ಲಿಕೆಯಾಗುವ ಸಾರ್ವಜನಿಕರ ಮನವಿಗಳನ್ನು ಕಾಲಮಿತಿಯೊಳಗೆ ಇತ್ಯರ್ಥಪಡಿಸಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗುವುದು. ಎಐ ಆಧಾರಿತ ಏಕೀಕೃತ ದೂರು ಪರಿಹಾರ ವ್ಯವಸ್ಥೆಯನ್ನು ಒದಗಿಸಿ, ಪ್ರತಿ ಹಂತದಲ್ಲಿಯೂ ಸ್ಪಷ್ಟವಾಗಿ ಜವಾಬ್ದಾರಿಯನ್ನು ನಿಗದಿಪಡಿಸಲಾಗುವುದು. ಮನವಿ ಸಲ್ಲಿಸಿದ ಅರ್ಜಿದಾರರಿಗೆ ಸಮರ್ಪಕ ಮಾಹಿತಿ ದೊರೆಯುವಂತೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಯೋಜನೆ ಅರ್ಹರೆಲ್ಲರಿಗೂ ತಲುಪಿಸಿ :
ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಸರ್ಕಾರಿ ಬಸ್‍ಗಳಲ್ಲಿ ಪ್ರಯಾಣಿಸಲು ಅನುಕೂಲವಾಗುವಂತೆ, ಅವರಿಗೆ ಉಚಿತ ಬಸ್ ಪಾಸ್ ನೀಡುವ ಯೋಜನೆಯನ್ನು ಈಗಾಗಲೆ ಜಾರಿಗೊಳಿಸಲಾಗಿದೆ. ರಾಜ್ಯದ ಎಲ್ಲೆಡೆ ಈ ಯೋಜನೆ ಪರಿಣಾಮಕಾಗಿಯಾಗಿ ಜಾರಿಯಾಗಬೇಕು. ಆಯಾ ಶಾಸಕರುಗಳು ತಮ್ಮ ತಮ್ಮ ಕ್ಷೇತ್ರದಲ್ಲಿ ಕಾಲೇಜುಗಳಿಗೆ, ಸರ್ಕಾರಿ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳೊಂದಿಗೆ ಮಾತನಾಡಿ, ಯೋಜನೆ ಸಿಗುತ್ತಿದೆಯೋ ಇಲ್ಲವೋ ಎಂಬುದರ ಬಗ್ಗೆ ಮಾಹಿತಿ ಪಡೆಯಬೇಕು. ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ ಮಾಡುವಂತಹ ಕಾರ್ಯಕ್ರಮಗಳನ್ನು ಆಯೋಜಿಸಿ, ಮಾಧ್ಯಮಗಳಲ್ಲಿ ಪ್ರಚಾರ ನೀಡುವಂತೆ ಮುಖ್ಯಮಂತ್ರಿಗಳು ಶಾಸಕರುಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ, ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ, ರಾಜ್ಯ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ. ಜಯಚಂದ್ರ, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೇರಿದಂತೆ ವಿವಿಧ ಇಲಾಖೆ, ಪ್ರಜಾಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹರ್ಷ ಗುಪ್ತ, ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ತುಷಾರ್ ಗಿರಿನಾಥ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಆರ್ಥಿಕ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲನ್ ಆದಿತ್ಯ ಬಿಸ್ವಾಸ್ ಸೇರಿದಂತೆ, ಚಿತ್ರದುರ್ಗ, ಬೆಂಗಳೂರು ದಕ್ಷಿಣ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ, ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳ ವ್ಯಾಪ್ತಿಯ ಸಂಸದರು, ಶಾಸಕರುಗಳು, ವಿಧಾನಪರಿಷತ್ ಸದಸ್ಯರು, ಜಿಲ್ಲಾಧಿಕಾರಿಗಳು, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭಾಗವಹಿಸಿದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.















