Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ದೃಷ್ಟಿ ಇಲ್ಲದಿದ್ದರೂ ಸ್ವರವೇ ಬದುಕಿನ ಆಧಾರ : ಸರ್ಕಾರ, ದಾನಿಗಳ ನೆರವಿಗಾಗಿ ಕಾಯುತ್ತಿರುವ ಚಿತ್ರದುರ್ಗದ ಹನುಮಂತಪ್ಪ..!

---Advertisement---

ಸುದ್ದಿಒನ್, ಚಿತ್ರದುರ್ಗ, ಜುಲೈ. 23 : ಅವರ ಕಣ್ಣುಗಳಲ್ಲಿ ದೃಷ್ಟಿಯ ಬೆಳಕಿಲ್ಲ, ಆದರೆ ಕಂಠದಲ್ಲಿ ಸರಸ್ವತಿಯ ಅನುಗ್ರಹವಿದೆ. ಹುಟ್ಟಿನಿಂದಲೇ ಜಗತ್ತನ್ನು ನೋಡಲಾಗದ ಅಂಧ ಯುವಕರೊಬ್ಬರು ತಮ್ಮ ಸ್ವರ ಮಾಧುರ್ಯದ ಮೂಲಕವೇ ಬದುಕಿನ ಬಂಡಿ ಸಾಗಿಸುತ್ತಿರುವ ಹೃದಯಸ್ಪರ್ಶಿ ಕಥೆಯಿದು. ಅವರೇ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ನೆಹರು ಕಾಲೋನಿ ಮೂಲದ, ಪ್ರಸ್ತುತ ಚಿತ್ರದುರ್ಗ ನಗರದಲ್ಲಿ ನೆಲೆಸಿರುವ ಹನುಮಂತಪ್ಪ. (ಮೊಬೈಲ್ ಸಂಖ್ಯೆ : 9611707398 ಮತ್ತು 9902382916 )

ಸಿದ್ದಗಂಗಾ ಮಠದಲ್ಲಿ ಅರಳಿದ ಸಂಗೀತ ಪ್ರತಿಭೆ
ಭೀಮಪ್ಪ ಮತ್ತು ಪುಟ್ಟಮ್ಮ ದಂಪತಿಯ ಮಗನಾಗಿ ಜನಿಸಿದ ಹನುಮಂತಪ್ಪ ಅವರಿಗೆ ಹುಟ್ಟಿನಿಂದಲೇ ಕಣ್ಣುಗಳು ಕಾಣುತ್ತಿರಲಿಲ್ಲ. ಹೆತ್ತವರು ಎಲ್ಲಾ ಕಡೆ ಚಿಕಿತ್ಸೆ ಕೊಡಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ. ಬದುಕು ಕತ್ತಲೆಯಾದಾಗ ಇವರಿಗೆ ಆಸರೆಯಾಗಿದ್ದು ತುಮಕೂರಿನ ಪರಮಪೂಜ್ಯ ಡಾ. ಶ್ರೀ ಶಿವಕುಮಾರ್ ಸ್ವಾಮೀಜಿಗಳ ಸಿದ್ದಗಂಗಾ ಮಠ.

ಅಂಗನವಾಡಿ ಓದುವ ವಯಸ್ಸಿನಲ್ಲೇ ಮಠ ಸೇರಿದ ಹನುಮಂತಪ್ಪ ಅಲ್ಲಿ ಸುಮಾರು 16 ವರ್ಷಗಳ ಕಾಲ ಆಶ್ರಯ ಪಡೆದರು. ಮಠದಲ್ಲೇ ಇವರಿಗೆ ಸಂಗೀತದ ಅಭ್ಯಾಸವಾಯಿತು. ಇವರಂತೆ ಅಂಧರಾಗಿದ್ದ ಸಂಗೀತ ಗುರುಗಳಾದ ಡಿ.ವಿ. ರುದ್ರಪ್ಪ ಅವರಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತವನ್ನು ಅತ್ಯಂತ ಶ್ರದ್ಧೆಯಿಂದ ಕಲಿತರು. ಭಜನೆ ಪದಗಳು, ದೇವರ ಹಾಡುಗಳು ಹಾಗೂ ಜನಪದ ಗೀತೆಗಳನ್ನು ಹಾಡುವುದರಲ್ಲಿ ಹನುಮಂತಪ್ಪ ಸೈ ಎನಿಸಿಕೊಂಡಿದ್ದಾರೆ. ಸಂಗೀತ ಕ್ಷೇತ್ರದಲ್ಲಿ ಇವರಿಗೀಗ ಭರ್ತಿ 20 ವರ್ಷಗಳ ಸುದೀರ್ಘ ಅನುಭವವಿದೆ.

ಭಕ್ತರ ಕಾಣಿಕೆಯೇ ಜೀವನದ ಆಧಾರ
ಸಂಗೀತ ಕಲಿತ ಬಳಿಕ ಚಿತ್ರದುರ್ಗಕ್ಕೆ ಮರಳಿದ ಹನುಮಂತಪ್ಪ ಅವರಿಗೆ ತಂದೆ-ತಾಯಿ ಇಬ್ಬರೂ ಇಲ್ಲ. ಸದ್ಯ ದೊಡ್ಡಮ್ಮ ಮತ್ತು ಅಕ್ಕನ ಮನೆಯಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ 10 ವರ್ಷಗಳಿಂದ ಚಿತ್ರದುರ್ಗದ ಹೊಳಲ್ಕೆರೆ ರಸ್ತೆಯ ರೆವೆನ್ಯೂ ಸ್ಕೂಲ್ ಹಿಂಭಾಗದ ಕುಂಬಾರ ಬೀದಿಯಲ್ಲಿ 4,000 ರೂ. ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದಾರೆ.

ವಾರದ ಕೆಲವು ದಿನಗಳನ್ನು ದೇವಸ್ಥಾನಗಳಲ್ಲೇ ಕಳೆಯುವ ಇವರು ತಮಗಿರುವ ಕಲೆಯ ಮೂಲಕವೇ ಜೀವನ ನಡೆಸುತ್ತಿದ್ದಾರೆ.

ಸೋಮವಾರ: ಚಿತ್ರದುರ್ಗ ನಗರದ ಶ್ರೀ ನೀಲಕಂಠೇಶ್ವರ ದೇವಸ್ಥಾನದಲ್ಲಿ ಗಾಯನ.

ಗುರುವಾರ: ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ (ರಾಯರ ಮಠ) ಭಜನೆ.

ಶನಿವಾರ: ತಮಟಕಲ್ಲು ದೇವಸ್ಥಾನದಲ್ಲಿ ಗೀತೆಗಳ ಗಾಯನ.

ಈ ದೇವಸ್ಥಾನಗಳಿಗೆ ಬರುವ ಭಕ್ತಾದಿಗಳು ಪ್ರೀತಿಯಿಂದ ಕೊಡುವ ಕಾಣಿಕೆ ಅಥವಾ ದಕ್ಷಿಣೆಯೇ ಇವರ ಬದುಕಿಗೆ ಆಧಾರ. ಇದರ ಹೊರತಾಗಿ ಗೃಹಪ್ರವೇಶ, ಆರ್ಕೆಸ್ಟ್ರಾ ಹಾಗೂ ಪುಣ್ಯಸ್ಮರಣೆ (ತೀರಿಹೋದ ವೇಳೆ) ಕಾರ್ಯಕ್ರಮಗಳಿಗೆ ಭಜನೆ ಮಾಡಲು ಜನ ಇವರನ್ನು ಕರೆದುಕೊಂಡು ಹೋಗುತ್ತಾರೆ.

ಪ್ರಶಸ್ತಿ-ಸನ್ಮಾನಗಳು: ಇವರ ಅದ್ಭುತ ಗಾಯನಕ್ಕೆ ಬೆಂಗಳೂರಿನ ರಾಮಕೃಷ್ಣ ಆಶ್ರಮ ಹಾಗೂ ಚಿತ್ರದುರ್ಗದ ತರಾಸು ರಂಗಮಂದಿರದಲ್ಲಿ ಸನ್ಮಾನಿಸಿ ಗೌರವಿಸಲಾಗಿದೆ.

ಕಲೆಯಲ್ಲಿ ಸಾಧನೆ ಮಾಡಿದ್ದರೂ ಹನುಮಂತಪ್ಪ ಅವರ ವೈಯಕ್ತಿಕ ಬದುಕು ಮಾತ್ರ ಇಂದಿಗೂ ಕತ್ತಲೆಯಲ್ಲೇ ಇದೆ. ಸ್ವಂತ ಊರಾದ ಹೊಳಲ್ಕೆರೆಯಲ್ಲಿದ್ದ ಹಳೇ ಮನೆ ಬಿದ್ದು ಹೋಗಿ ಹಲವು ವರ್ಷಗಳಾಗಿವೆ. ಚಿತ್ರದುರ್ಗದಲ್ಲಿ ಸದ್ಯ ನೆಲೆಸಲು ಸ್ವಂತ ಮನೆಯೂ ಇಲ್ಲ, ಹಕ್ಕುಪತ್ರವೂ ಇಲ್ಲ.
ನಮಗೆ ಒಂದು ಸ್ವಂತ ಮನೆ ಬೇಕು ಎಂದು ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಹನುಮಂತಪ್ಪ ಹಾಗೂ ಅವರ ದೊಡ್ಡಮ್ಮ ಹನುಮ್ಮಕ್ಕ ಅಳಲು ತೋಡಿಕೊಂಡಿದ್ದಾರೆ.

ಸಹಾಯಕ್ಕಾಗಿ ಅಂಧ ಗಾಯಕನ ಮನವಿ
ನಾವು ಇರೋದು ಅಕ್ಕ ಮತ್ತು ನಾನು ಇಬ್ಬರೇ. ಹೆತ್ತವರು ಯಾರೂ ಇಲ್ಲ. ಹುಟ್ಟಿನಿಂದಲೇ ಕಣ್ಣಿಲ್ಲದ ನಮಗೆ ಈಗ ಬಾಡಿಗೆ ಕಟ್ಟುವುದೇ ಕಷ್ಟವಾಗಿದೆ. ಸರ್ಕಾರ ದಯವಿಟ್ಟು ನಮಗೊಂದು ಮನೆ ಸವಲತ್ತು ಮಾಡಿಕೊಡಬೇಕು. ಹಾಗೆಯೇ ಭಕ್ತಾದಿಗಳು ಹಾಗೂ ಸಾರ್ವಜನಿಕರು ನಿಮ್ಮ ಮನೆಗಳ ಯಾವುದೇ ಶುಭ ಕಾರ್ಯಕ್ರಮಗಳಿದ್ದರೂ ನಮಗೆ ಹಾಡಲು ಅವಕಾಶ ಕೊಟ್ಟು, ಸಹಕಾರ ನೀಡಬೇಕು ಎಂದು ಹನುಮಂತಪ್ಪ ವಿನಂತಿಸಿಕೊಂಡಿದ್ದಾರೆ.

ಕಣ್ಣಿಲ್ಲದಿದ್ದರೂ ಸ್ವಾಭಿಮಾನದಿಂದ ಬದುಕಲು ಹೆಣಗಾಡುತ್ತಿರುವ ಈ ಅಂಧ ಕಲಾಪ್ರತಿಭೆಗೆ ಸರ್ಕಾರದ ಆಶ್ರಯ ಯೋಜನೆ ಹಾಗೂ ಕಲಾಭಿಮಾನಿಗಳ ಪ್ರೋತ್ಸಾಹ ತುರ್ತಾಗಿ ಸಿಗಬೇಕಿದೆ.

ಕಿರುತೆರೆ ವಾಹಿನಿಯ ವೇದಿಕೆಗಾಗಿ ಎದುರು ನೋಡುತ್ತಿರುವ ಗಾಯನ ಕೋಗಿಲೆ
ತಮ್ಮ ಸ್ವರ ಮಾಧುರ್ಯದ ಮೂಲಕವೇ ಬದುಕಿನ ಬಂಡಿ ಸಾಗಿಸುತ್ತಿರುವ ಹನುಮಂತಪ್ಪ ಅವರಿಗೆ ಈಗ ತಕ್ಕದಾದ ದೊಡ್ಡ ವೇದಿಕೆಯ ಅಗತ್ಯವಿದೆ. ಕನ್ನಡದ ಜನಪ್ರಿಯ ರಿಯಾಲಿಟಿ ಶೋಗಳು ಅಥವಾ ಪ್ರಮುಖ ಕಿರುತೆರೆ (TV) ವಾಹಿನಿಗಳಲ್ಲಿ ಹಾಡಲು ಒಂದು ಅವಕಾಶ ಸಿಕ್ಕರೆ, ತಮ್ಮ ಅದ್ಭುತ ಗಾಯನ ಪ್ರತಿಭೆಯನ್ನು ಇಡೀ ರಾಜ್ಯಕ್ಕೇ ಪರಿಚಯಿಸುವ ಕನಸು ಇವರದ್ದಾಗಿದೆ.
ವಿಧಿಯಾಟಕ್ಕೆ ಸೋಲದೆ ಸಂಗೀತವನ್ನೇ ಬದುಕಾಗಿಸಿಕೊಂಡಿರುವ ಈ ದೃಷ್ಟಿಚೇತನ ಗಾಯಕನಿಗೆ ಸೂಕ್ತ ವಾಹಿನಿ ಹಾಗೂ ದಾಸೋಹಿಗಳ ಬೆಂಬಲ ಸಿಗಲಿ, ಇವರ ಗಾಯನ ಪ್ರತಿಯೊಬ್ಬ ಕನ್ನಡಿಗನ ಮನೆ-ಮನಗಳನ್ನು ತಲುಪಲಿ ಎನ್ನುವುದೇ ಎಲ್ಲರ ಹಾರೈಕೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now