ದೆಹಲಿ.ಜುಲೈ.18: ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವುದರಿಂದ ಯಾವುದೇ ವ್ಯಕ್ತಿಯ ಪೌರತ್ವ ರದ್ದಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟನೆ ನೀಡಿದೆ.
ಮತದಾರರ ಪಟ್ಟಿಯಿಂದ ಹೆಸರು ಬಿಟ್ಟುಹೋದವರ ಕಾನೂನುಬದ್ಧ ಪೌರತ್ವದ ಸ್ಥಿತಿಗತಿಯನ್ನು ಪರಿಶೀಲಿಸಲು ಮತ್ತು ತೀರ್ಮಾನಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದು ಭಾರತೀಯ ಚುನಾವಣಾ ಆಯೋಗದ (ECI) ಜವಾಬ್ದಾರಿಯಾಗಿದೆ ಎಂದು ಕೋರ್ಟ್ ಪುನರುಚ್ಚರಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ಭಾರತದ ಮುಖ್ಯ ನ್ಯಾಯಮೂರ್ತಿ (CJI) ಸೂರ್ಯ ಕಾಂತ್ ನೇತೃತ್ವದ ಪೀಠವು, “ಚುನಾವಣಾ ಆಯೋಗಕ್ಕೆ ಮತದಾರರ ಪಟ್ಟಿಯ ಮೇಲೆ ಸಂಪೂರ್ಣ ನಿಯಂತ್ರಣವಿದೆ ಎಂಬುದು ನಿಜ. ಆದರೆ ಆ ಪಟ್ಟಿಯಿಂದ ಹೆಸರು ಡಿಲೀಟ್ ಆಯಿತು ಎಂದಮಾತ್ರಕ್ಕೆ ಪೌರತ್ವವೇ ಇಲ್ಲದಂತಾಗುವುದಿಲ್ಲ. ಅಂತಹ ವ್ಯಕ್ತಿಗಳ ಪೌರತ್ವದ ಸ್ಥಿತಿಗತಿಯನ್ನು ಅಂತಿಮವಾಗಿ ನಿರ್ಧರಿಸಲು ಕೇಂದ್ರ ಸರ್ಕಾರದ ಸಂಬಂಧಪಟ್ಟ ಸಚಿವಾಲಯಕ್ಕೆ ಪ್ರಕರಣವನ್ನು ವರ್ಗಾಯಿಸುವ ತಾರ್ಕಿಕ ಕರ್ತವ್ಯ ಕೂಡ ಚುನಾವಣಾ ಆಯೋಗದ ಮೇಲಿದೆ” ಎಂದು ಹೇಳಿತು.

ಪಡಿತರ, ಸವಲತ್ತು ವಂಚಿತರಾದ 34 ಲಕ್ಷ ಮತದಾರರು!
ಪಶ್ಚಿಮ ಬಂಗಾಳದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲಾದ ಕಾರಣಕ್ಕೆ ಲಕ್ಷಾಂತರ ಜನರು ಸರ್ಕಾರದ ಸಬ್ಸಿಡಿ ಪಡಿತರ, ನಗದು ನೆರವು ಮತ್ತು ಇತರ ಕಲ್ಯಾಣ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಮತದಾರರು ಸಲ್ಲಿಸಿರುವ 30 ಲಕ್ಷಕ್ಕೂ ಹೆಚ್ಚು ಮೇಲ್ಮನವಿಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಲು ಸೂಕ್ತ ವ್ಯವಸ್ಥೆ ರೂಪಿಸುವಂತೆ ಕೋರಿ ಪಶ್ಚಿಮ ಬಂಗಾಳ ಪ್ರದೇಶ ಕಾಂಗ್ರೆಸ್ ಸಮಿತಿಯ ಪ್ರಸೆಂಜಿತ್ ಬೋಸ್ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಈ ಅವಲೋಕನ ಮಾಡಿದೆ.
ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣನ್, “ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಿರುವ ನೆಪದಲ್ಲಿ ಪಶ್ಚಿಮ ಬಂಗಾಳ ಸರ್ಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆ (PDS) ಮತ್ತು ಅನ್ನಪೂರ್ಣ ನಗದು ವರ್ಗಾವಣೆ ಯೋಜನೆಯಡಿ ಸಿಗುವ ಸವಲತ್ತುಗಳನ್ನು ರದ್ದುಗೊಳಿಸಿ ಕನಿಷ್ಠ ಮೂರು ಆದೇಶಗಳನ್ನು ಹೊರಡಿಸಿದೆ. ಇದು ತಪ್ಪು,” ಎಂದು ನ್ಯಾಯಾಲಯದ ಗಮನಕ್ಕೆ ತಂದರು.
42 ನ್ಯಾಯಾಧೀಕರಣಗಳಿಗೆ ಬೇಡಿಕೆ
ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿಯಲ್ಲಿ ಹೊರಗಿಡಲಾದ ಮತದಾರರು ಸಲ್ಲಿಸಿರುವ ಸುಮಾರು 34 ಲಕ್ಷ ಮೇಲ್ಮನವಿಗಳನ್ನು ಇತ್ಯರ್ಥಪಡಿಸಲು ಸುಪ್ರೀಂ ಕೋರ್ಟ್ ಈ ಹಿಂದೆ 19 ನ್ಯಾಯಾಧೀಕರಣಗಳನ್ನು (Tribunals) ಸ್ಥಾಪಿಸಿತ್ತು. ಆದರೆ, ಇದುವರೆಗೆ ಎಷ್ಟು ಮೇಲ್ಮನವಿಗಳು ಇತ್ಯರ್ಥವಾಗಿವೆ ಎಂಬ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇದೇ ಡಿಸೆಂಬರ್ನಲ್ಲಿ ಪಶ್ಚಿಮ ಬಂಗಾಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಪ್ರಾರಂಭವಾಗುವ ಸಾಧ್ಯತೆಯಿರುವುದರಿಂದ, ಈ ನ್ಯಾಯಾಧೀಕರಣಗಳ ಸಂಖ್ಯೆಯನ್ನು 19 ರಿಂದ ಕನಿಷ್ಠ 42 ಕ್ಕೆ ಹೆಚ್ಚಿಸಬೇಕು ಮತ್ತು ಕಾಲಮಿತಿಯೊಳಗೆ ನಿರ್ಧಾರ ಕೈಗೊಳ್ಳಬೇಕು ಎಂದು ಅರ್ಜಿಯಲ್ಲಿ ವಿನಂತಿಸಲಾಗಿದೆ.

ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೋಹನಾ ಅವರನ್ನೊಳಗೊಂಡ ಪೀಠವು, ಈ ಪ್ರಕರಣವನ್ನು ಮುಂದಿನ ತಿಂಗಳು ನಡೆಯಲಿರುವ ಪಶ್ಚಿಮ ಬಂಗಾಳದ ಎಸ್ಐಆರ್ (SIR) ಗೆ ಸಂಬಂಧಿಸಿದ ಇತರ ಬಾಕಿ ಇರುವ ಅರ್ಜಿಗಳೊಂದಿಗೆ ಸೇರಿಸಿ ವಿಚಾರಣೆ ನಡೆಸಲು ಸಮ್ಮತಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







