ಬೀದರ್.ಜುಲೈ.18: ತುತ್ತು ಅನ್ನಕ್ಕಾಗಿ ಜೀವಮಾನವಿಡೀ ಭೂಮಿತಾಯಿಯನ್ನೇ ನಂಬಿದ ಆ ವೃದ್ಧ ದಂಪತಿಗೆ ಇಂದು ಕೂರಿಗೆ ಎಳೆಯಲು ಎತ್ತುಗಳೂ ಇಲ್ಲ, ಟ್ರ್ಯಾಕ್ಟರ್ ಬಾಡಿಗೆಗೆ ಪಡೆಯಲು ಜೇಬಿನಲ್ಲಿ ಕಾಸೂ ಇಲ್ಲ. ಕೊನೆಗೆ ವಿಧಿಯಿಲ್ಲದೆ ತಾವೇ ನೇಗಿಲ ನೊಗಕ್ಕೆ ಹೆಗಲು ಕೊಟ್ಟು, ಹಸನು ಮಾಡಿದ ಮಣ್ಣಿನಲ್ಲಿ ಬೀಜ ಬಿತ್ತಿದ ಹೃದಯಸ್ಪರ್ಶಿ ಘಟನೆಯೊಂದು ಜಿಲ್ಲೆಯ ಹುಮನಾಬಾದ್ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಆರ್ಥಿಕ ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿಯೇ ಈ ಕಾಯಕ ಯೋಗಿಗಳು. ವಯೋಸಹಜ ಆಯಾಸವಿದ್ದರೂ, ಹೊಟ್ಟೆಪಾಡಿಗಾಗಿ ಬೆವರು ಸುರಿಸುತ್ತಾ ಇವರಿಬ್ಬರೂ ಕೂರಿಗೆ ಎಳೆಯುತ್ತಿರುವ ದೃಶ್ಯ ಪ್ರತಿಯೊಬ್ಬರ ಕಣ್ಣಾಲಿಗಳನ್ನು ಒದ್ದೆಯಾಗಿಸುವಂತಿದೆ.
ಸ್ವಂತ ಮನೆ ಇಲ್ಲದೆ, ಕೈಯಲ್ಲಿದ್ದ ಅಲ್ಪಸ್ವಲ್ಪ ಜಮೀನನ್ನೇ ನಂಬಿ ಈ ದಂಪತಿ ಬದುಕು ಸಾಗಿಸುತ್ತಿದ್ದಾರೆ. ಈ ಹಿಂದೆ ಮಳೆ ಕೊರತೆಯಿಂದಾಗಿ ಇವರು ಬಿತ್ತಿದ್ದ ಉದ್ದು ಸಂಪೂರ್ಣ ವಿಫಲವಾಗಿತ್ತು. ಕೈಗೆ ಬಂದ ತುತ್ತು ಬಾಯಿಗೆ ಬರದಂತಾದಾಗ ಧೃತಿಗೆಡದ ದಂಪತಿ, ಅದೇ ಜಮೀನಿನಲ್ಲಿ ಮತ್ತೆ ತೊಗರಿ ಬಿತ್ತನೆ ಮಾಡಲು ಮುಂದಾಗಿದ್ದಾರೆ. ಆದರೆ, ಎತ್ತುಗಳನ್ನು ಬಾಡಿಗೆಗೆ ತರಲು ಹಣವಿಲ್ಲದ ಕಾರಣ ತಾವೇ ಎತ್ತುಗಳ ಸ್ಥಾನದಲ್ಲಿ ನಿಂತು ಕೂರಿಗೆ ಎಳೆದಿದ್ದಾರೆ.









