ಚಿತ್ರದುರ್ಗ. ಜುಲೈ. 17: ಸರ್ಕಾರಿ ಶಾಲೆಗಳ ಶೌಚಾಲಯ ಹಾಗೂ ಕಟ್ಟಡಗಳ ಸಮರ್ಪಕ ನಿರ್ವಹಣೆ ಮಾಡದಿದ್ದರೆ ಕಠಿಣ ಕ್ರಮಕೈಕೊಳ್ಳಲಾಗುವುದು ಎಂದು ಸಂಸದ ಗೋವಿಂದ ಎಂ ಕಾರಜೋಳ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಶಾಲೆಗಳಲ್ಲಿನ ಶೌಚಾಲಯಗಳ ನಿರ್ಮಾಣ, ದುರಸ್ತಿ ಹಾಗೂ ನಿರ್ವಹಣೆ ಕೆಲಸವನ್ನು ಆಣೆಕಟ್ಟು ನಿರ್ಮಿಸುವಷ್ಟೇ ವಿಳಂಬವಾಗಿ ಮಾಡುತ್ತಿರುವುದು ಸರಿಯಲ್ಲ. ಕೇವಲ ಶೌಚಾಲಯ ಸರಿಪಡಿಸಲು ವರ್ಷಗಟ್ಟಲೆ ಕಾಯಬೇಕೇ ಎಂದು ಸಂಸದರು ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯ ವಿವಿಧ ಶಾಲೆಗಳು, ವಿವಿಧ ಸ್ಥಳಗಳಲ್ಲಿ ಒಟ್ಟು 3,866 ಶೌಚಾಲಯಗಳಿದ್ದು, ಅವುಗಳ ಪೈಕಿ ಬರೋಬ್ಬರಿ 1,140 ಶೌಚಾಲಯಗಳು ಬಂದ್ ಆಗಿವೆ. ಶೌಚಾಲಯಗಳ ದುರಸ್ತಿಗೆ ಹಣ ಬಿಡುಗಡೆಯಾಗಿದ್ದರೂ ಇಷ್ಟು ವರ್ಷಗಳ ಕಾಲ ವಿಳಂಬ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ತಾಂತ್ರಿಕ ಕಾರಣಗಳ ಮುಂದಿಟ್ಟುಕೊಂಡು ಮಕ್ಕಳ ಮೂಲ ಸೌಕರ್ಯಗಳನ್ನು ನಿರ್ಲಕ್ಷಿಸಬೇಡಿ. ಕೂಡಲೇ ಈ ಎಲ್ಲಾ 1,140 ಶೌಚಾಲಯಗಳನ್ನು ಸರಿಪಡಿಸಿ ಬಳಕೆಗೆ ಯೋಗ್ಯವಾಗಿಸಬೇಕು ಎಂದು ತಾಕೀತು ಮಾಡಿದರು ಎಂದು ತಾಕೀತು ಮಾಡಿದರು.

ಶಾಲಾಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿ ಸಮಿತಿಗಳು (ಎಸ್ಡಿಎಂಸಿ) ಕೇವಲ ಅಧಿಕಾರ ತೋರಿಸಲು ಇರುವುದಲ್ಲ. ಶಾಲೆಯ ನಿರ್ವಹಣೆಗೆ ಕೈಜೋಡಿಸಬೇಕು. ಅವರು ಶಾಲೆಯ ನಿರ್ವಹಣೆಗೆ ಸಹಾಯ ಮಾಡಲು ಮುಂದಾಗಬೇಕು. ಶಾಲೆಗಳ ಶೈಕ್ಷಣಿಕ ವಾತಾವರಣ ಮತ್ತು ಮೂಲ ಸೌಕರ್ಯ ಸರಿಯಾಗಿರುವುದಂತೆ ನೋಡಿಕೊಳ್ಳುವುದು ಅವರ ಕರ್ತವ್ಯ ಎಂದರು.
ಶಾಲಾ ಶೌಚಾಲಯಗಳ ಸ್ವಚ್ಛತೆ ಹಾಗೂ ನಿರ್ವಹಣೆಗೆ ಪ್ರತಿ ಶಾಲೆ ವರ್ಷಕ್ಕೆ ರೂ.10 ಸಾವಿರ ಶಾಲಾನುದಾನ ನಿರ್ವಹಣೆಗೆ ನೀಡಲಾಗುತ್ತಿದೆ. ಆದರೆ ಈ ಹಣವನ್ನು ಎಷ್ಟು ಶಾಲೆಗಳ ಮುಖ್ಯ ಶಿಕ್ಷಕರು ಸರಿಯಾಗಿ ಬಳಕೆ ಮಾಡಿದ್ದಾರೆ ಎಂಬುದುದ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲೆಗಳ ಸಂಪೂರ್ಣ ಮಾಹಿತಿ ಪಡೆದು ಪರಿಶೀಲಿಸಬೇಕು ಎಂದು ಸೂಚನೆ ನೀಡಿದರು.
ಕುಡಿಯುವ ನೀರಿನ ಸಮಸ್ಯೆ ನಿರ್ಲಕ್ಷಿಸಿದರೆ ಶಿಸ್ತು ಕ್ರಮ: ಕೇವಲ ಹವಾನಿಯಂತ್ರಿತ ಚೇಂಬರ್ಗಳಲ್ಲಿ ಕುಳಿತುಕೊಂಡರೆ ಜನರ ಸಮಸ್ಯೆಗಳು ಬಗೆಹರಿಯುವುದಿಲ್ಲ. ಅಧಿಕಾರಿಗಳು ಕಡ್ಡಾಯವಾಗಿ ವಾರ್ಡ್ಗಳು ಮತ್ತು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಕುಡಿಯುವ ನೀರಿನ ಮತ್ತು ನೈರ್ಮಲ್ಯದ ಕಷ್ಟಗಳನ್ನು ಖುದ್ದಾಗಿ ಆಲಿಸಬೇಕು ಸಂಸದರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಚಿತ್ರದುರ್ಗ ನಗರದಲ್ಲಿ ನೀರಿನ ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ನೀವು ಕೊನೆಯದಾಗಿ 3ನೇ ವಾರ್ಡ್ಗೆ ಯಾವಾಗ ಭೇಟಿ ನೀಡಿದ್ದೀರಿ? ದಿನನಿತ್ಯ ಬೆಳಿಗ್ಗೆ ಬೇಗ ಎದ್ದು ವಾರ್ಡ್ಗಳಿಗೆ ಭೇಟಿ ನೀಡಿ ಕಸ ವಿಲೇವಾರಿ, ನೀರು ಸರಬರಾಜು ಮತ್ತು ನೈರ್ಮಲ್ಯದ ಸ್ಥಿತಿಗತಿಗಳ ಪರಿಶೀಲಿಸಬೇಕು ಎಂದು ನಗರಸಭೆ ಆಯುಕ್ತರನ್ನು ತರಾಟೆಗೆ ತೆಗೆದುಕೊಂಡರು.
ಹೊಳಲ್ಕೆರೆ ತಾಲ್ಲೂಕಿನ ದುಮ್ಮಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಮಹಿಳೆಯರು ನಡೆಸಿದ ‘ಖಾಲಿ ಕೊಡ ಪ್ರದರ್ಶನ’ ಪ್ರತಿಭಟನೆ ಪ್ರಸ್ತಾಪಿಸಿದ ಸಂಸದರು, ‘ಮಹಿಳೆಯರು ಕುಡಿಯುವ ನೀರಿಗಾಗಿ ಬೀದಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದರೂ ಯಾವೊಬ್ಬ ಅಧಿಕಾರಿಯೂ ಪರ್ಯಾಯ ವ್ಯವಸ್ಥೆ ಮಾಡಿಲ್ಲ. ಇಂತಹ ಬೇಜವಾಬ್ದಾರಿತನ ಸಹಿಸಲು ಸಾಧ್ಯವಿಲ್ಲ ಎಂದರು.

ದುಮ್ಮಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅಂತರ್ಜಲ ಮಟ್ಟ ಕುಸಿದಿದ್ದು, ಬೋರ್ವೆಲ್ಗಳಲ್ಲಿ ನೀರಿನ ಇಳುವರಿ ಕಡಿಮೆಯಾಗಿದೆ. ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆಗೆ ಪಡೆದು ನೀರು ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಬರಗಾಲದ ಹಿನ್ನೆಲೆಯಲ್ಲಿ ಜಿಲ್ಲೆಯ ಯಾವುದೇ ಭಾಗದಲ್ಲಿ ನೀರಿನ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ತಾಲ್ಲೂಕು ಮಟ್ಟದಲ್ಲಿ ಅಧಿಕಾರಿಗಳ ಟಾಸ್ಕ್ ಫೋರ್ಸ್ ಸಭೆಗಳನ್ನು ನಡೆಸಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ತಿಳಿಸಿದ ಅವರು, ಯಾವುದೇ ಕಾರಣಕ್ಖೂ ಹಳ್ಳಿಗಳಲ್ಲಿ ಕುಡಿಯುವ ನೀರಿಗೆ ತೊಂದರೆಯಾಗಬಾರದು. ದುರಸ್ತಿಯಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ತಕ್ಷಣವೇ ಸರಿಪಡಿಸಬೇಕು ಎಂದು ತಾಕೀತು ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ಎಸ್.ಆಕಾಶ್ ಮಾತನಾಡಿ, ಜಿಲ್ಲೆಯ ಒಟ್ಟು 92 ಗ್ರಾಮ ಪಂಚಾಯತಿಗಳ ವ್ಯಾಪ್ತಿಯ 216 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಬಹುದು ಎಂದು ಅಂದಾಜಿಸಿ, ನಿರಂತರ ನಿಗಾ ಇಡಲಾಗಿತ್ತು. ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ತಾ.ಪಂ ಇಒ, ಆರ್ಡಬ್ಲ್ಯೂಎಸ್ ಎಇಇ ಹಾಗೂ ನೀರು ಸರಬರಾಜು ವಿಭಾಗದ ತಾಂತ್ರಿಕ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ತೀವ್ರ ಸಮಸ್ಯೆ ಎದುರಾದ 49 ಜನವಸತಿ ಪ್ರದೇಶಗಳಲ್ಲಿ ಈಗಾಗಲೇ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ. ಈ ಪೈಕಿ 12 ಜನವಸತಿಗಳಿಗೆ ಟ್ಯಾಂಕರ್ ಮೂಲಕ ಹಾಗೂ 37 ಜನವಸತಿ ಪ್ರದೇಶಗಳಿಗೆ ಖಾಸಗಿ ಬೋರ್ವೆಲ್ಗಳನ್ನು ಗುರುತಿಸಿ ನೀರು ಸರಬರಾಜು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಳೆದ ಕೆಲವು ವಾರಗಳಿಂದ ಮಳೆ ಕೊರತೆಯಾಗಿದ್ದರೂ, ಸಂಸದರ ಮಧ್ಯಸ್ಥಿಕೆಯಿಂದ ಕಳೆದ ಎರಡು ತಿಂಗಳಿನಿಂದ ಸ್ಥಗಿತಗೊಂಡಿದ್ದ ತುಂಗಭದ್ರಾ ನದಿ ನೀರು ಈಗ ಹರಿಯಲು ಆರಂಭಿಸಿದೆ. ಚಳ್ಳಕೆರೆ, ಮೊಳಕಾಲ್ಮೂರು ಮತ್ತು ಪಾವಗಡ ಭಾಗಗಳಿಗೆ ನೀರು ತಲುಪುತ್ತಿದ್ದು, ಸದ್ಯ ಅಲ್ಲಿ ಪರಿಸ್ಥಿತಿ ಸುಧಾರಿಸಿದೆ. ಚಿತ್ರದುರ್ಗ ತಾಲ್ಲೂಕಿನ ಕೆಲವು ಭಾಗ ಹಾಗೂ ಹಿರಿಯೂರು ಮತ್ತು ಹೊಳಲ್ಕೆರೆ ತಾಲ್ಲೂಕುಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಇದ್ದು, ಅದನ್ನು ಬಗೆಹರಿಸಲು ಪರ್ಯಾಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಆಗಸ್ಟ್ 15ಕ್ಕೆ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ: ಜಿಲ್ಲೆಯ ಹೊಸ ಅಂಗನವಾಡಿ ಕೇಂದ್ರಗಳ ಕಟ್ಟಡಗಳ ನಿರ್ಮಾಣಕ್ಕೆ ಮುಂಬರುವ ಆಗಸ್ಟ್ 15ರಂದು ಸ್ವಾತಂತ್ರ್ಯದ ದಿನಾಚರಣೆಯಂದು ಭೂಮಿ ಪೂಜೆ ಕಾರ್ಯಕ್ರಮ ನೆರವೇರಿಸಲು ಅಗತ್ಯ ಕ್ರಮವಹಿಸಬೇಕು ಎಂದು ಸಂಸದರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ತಿಳಿಸಿದರು.
ಕೆಎಂಇಆರ್ಸಿಯ ಸಿಇಪಿಎಂಐಜಡ್ ಯೋಜನೆಯಡಿ ಜಿಲ್ಲೆಯ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಹಾಗೂ ಮೊಳಕಾಲ್ಮುರು ತಾಲ್ಲೂಕುಗಳಿಗೆ ಹೊಸ ಅಂಗನವಾಡಿ ಕಟ್ಟಡ ನಿರ್ಮಾಣಕ್ಕೆ 144 ಅಂಗನವಾಡಿ ಕೇಂದ್ರಗಳು ಮಂಜೂರಾಗಿದ್ದು, ಮಾದರಿ ಅಂಗನವಾಡಿ ಕಟ್ಟಡಗಳು-03, ಉನ್ನತೀಕರಣಕ್ಕೆ ಮಂಜೂರಾದ ಕೇಂದ್ರಗಳು 150 ಇದ್ದು, ಆಡಳಿತಾತ್ಮಕ ಮಂಜೂರಾದ ಈ ಕಾಮಗಾರಿಗಳಿಗೆ ಶೀಘ್ರವೇ ಟೆಂಡರ್ ಪ್ರಕ್ರಿಯೆ ನಡೆಸಿ, ಭೂಮಿ ಪೂಜೆ ನೆರವೇರಿಸಲು ಕ್ರಮವಹಿಸಬೇಕು ಎಂದು ತಿಳಿಸಿದರು.
ಚಿತ್ರದುರ್ಗ ತಾಲ್ಲೂಕು ಮಠದ ಕುರುಬರಹಟ್ಟಿ ಗ್ರಾಮದ ಕರಡಿಗುಡ್ಡದ ಪ್ರದೇಶದ ವ್ಯಾಪ್ತಿಯಲ್ಲಿ 04 ಕಲ್ಲು ಗಣಿ ಗುತ್ತಿಗೆಗಳಿದ್ದು, ಇವು ಅವೈಜ್ಞಾನಿಕವಾಗಿರುವುದರಿಂದ ಕೂಡಲೇ ಕಲ್ಲು ಗಣಿಗಾರಿಕೆ ನಿಲ್ಲಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.
ವಿಬಿ-ಜಿ ರಾಮ್ ಜಿ: ರಾಜ್ಯದ ಸರಾಸರಿಗಿಂತ ಜಿಲ್ಲೆ ಮುಂಚೂಣಿ: ಜುಲೈ 1ರಿಂದ ವಿಬಿ-ಜಿ ರಾಮ್ ಜಿ ಜಾರಿಗೆ ಬಂದಿದ್ದು, ಜಿಲ್ಲೆಯಲ್ಲಿ ಹೊಸ ವ್ಯವಸ್ಥೆಯನ್ವಯವೇ ಪ್ರಗತಿ ಸಾಧಿಸಲಾಗುತ್ತಿದೆ. ಜಿಲ್ಲೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 8,60,063 ಮಾನವ ದಿನಗಳ ಸೃಜನೆಯ ಗುರಿ ಹೊಂದಲಾಗಿದ್ದು, ಈ ಪೈಕಿ ಇದುವರೆಗೆ 3,87,000 ಮಾನವ ದಿನಗಳನ್ನು ಸೃಜಿಸಲಾಗಿದೆ. ರಾಜ್ಯದ ಸರಾಸರಿ ಪ್ರಗತಿ ಶೇ. 40 ರಷ್ಟಿದ್ದರೆ, ಚಿತ್ರದುರ್ಗ ಜಿಲ್ಲೆಯು ಶೇ. 45 ರಷ್ಟು ಪ್ರಗತಿ ಸಾಧಿಸುವ ಮೂಲಕ ರಾಜ್ಯ ಸರಾಸರಿಗಿಂತ ಉತ್ತಮ ಸಾಧನೆ ಮಾಡಿದೆ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಎಂ. ಬಾಬು ತಿಳಿಸಿದರು.
ಈ ಯೋಜನೆಯಡಿ ಜಿಲ್ಲೆಗೆ ಒಟ್ಟು ರೂ. 49.59 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಅದರಲ್ಲಿ ರೂ. 32 ಕೋಟಿ ವೆಚ್ಚ ಮಾಡಲಾಗಿದೆ. ಇಇಪಿ ಕೊನೆಯ ಹಂತದಲ್ಲಿ ರೂ.5.30 ಕೋಟಿ ಸೇರಿದಂತೆ ಒಟ್ಟು ರೂ.43 ಕೋಟಿ ವೆಚ್ಚದ ಸಲ್ಲಿಕೆಗೆ ಸಿದ್ಧಪಡಿಸಲಾಗಿದೆ. ತಾಂತ್ರಿಕ ಕಾರಣಗಳಿಂದ ಸುಮಾರು ರೂ. 5 ಕೋಟಿ ಅನುದಾನ ತಿರಸ್ಕøತಗೊಂಡಿದ್ದು ಇವುಗಳನ್ನು ಮತ್ತೊಮ್ಮೆ ಬಿಲ್ ಜನರೇಟ್ ಮಾಡುವ ಮೂಲಕ ತಾಂತ್ರಿಕ ಪ್ರಕ್ರಿಯೆ ಮುಗಿಸಿ ಖಜಾನೆಗೆ ಸಲ್ಲಿಕೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬೆಳೆವಿಮೆಗೆ ಹೆಚ್ಚಿನ ರೈತರ ನೋಂದಣಿಗೆ ಕ್ರಮವಹಿಸಿ: ಮಳೆಯ ಅಭಾವದ ಹಿನ್ನೆಲೆಯಲ್ಲಿ ರೈತರ ನೆರವಿಗಾಗಿ ಬೆಳೆ ವಿಮೆ ಯೋಜನೆಗೆ ಕೊನೆಯ ದಿನಾಂಕ ಜುಲೈ 31 ರೊಳಗೆ ಹೆಚ್ಚಿನ ಪ್ರಮಾಣದಲ್ಲಿ ರೈತರನ್ನು ನೋಂದಾಯಿಸುವ ಅಗತ್ಯ ಕ್ರಮವಹಿಸಬೇಕು ಎಂದು ಸಂಸದ ಗೋವಿಂದ ಎಂ ಕಾರಜೋಳ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೃಷಿ ಇಲಾಖೆ ಜಂಟಿ ನಿರ್ದೇಶಕ ಮಂಜುನಾಥ್ ಮಾತನಾಡಿ, ಜಿಲ್ಲೆಯಲ್ಲಿ 24,072 ರೈತರು ಬೆಳೆ ವಿಮೆ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಕೃಷಿ ಇಲಾಖೆಯ ಅಧಿಕಾರಿಗಳು ಹಾಗೂ ಡಿಸಿಸಿ ಬ್ಯಾಂಕ್ ಅಧಿಕಾರಿಗಳೊಂದಿಗೆ ನಿರಂತರವಾಗಿ ಸಮನ್ವಯ ಸಾಧಿಸಿ ಕಾರ್ಯನಿರ್ವಹಿಸುತ್ತಿದ್ದು, ಬಿತ್ತನೆಯಾದ ಗರಿಷ್ಠ ಬೆಳೆಗಳಿಗೆ ವಿಮೆ ರಕ್ಷಣೆ ಕಲ್ಪಿಸಲು ಶ್ರಮಿಸಲಾಗುತ್ತಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಅಡಿಯಲ್ಲಿ ಸುಮಾರು 1 ಲಕ್ಷಕ್ಕೂ ಅಧಿಕ ರೈತರನ್ನು ನೋಂದಾಯಿಸುವ ಗುರಿ ಹೊಂದಲಾಗಿದೆ ಎಂದು ಅವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಮೇ ಕೊನೆಯ ವಾರ ಹಾಗೂ ಜೂನ್ ಮೊದಲ ವಾರದಲ್ಲಿ ಉತ್ತಮ ಮಳೆಯಾಗಿದ್ದರೂ, ತದನಂತರ ಸುಮಾರು 30 ರಿಂದ 35 ದಿನಗಳ ಕಾಲ ಒಣ ಹವೆ ಮುಂದುವರಿದಿದ್ದರಿಂದ ಜಿಲ್ಲೆಯ ಕೃಷಿ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಜಿಲ್ಲೆಯಾದ್ಯಂತ ಪ್ರಸಕ್ತ ಸಾಲಿನಲ್ಲಿ ಒಟ್ಟು 181.8 ಮಿ.ಮೀ ಮಳೆಯಾಗಬೇಕಿತ್ತು. ಆದರೆ ಕೇವಲ 154 ಮಿ.ಮೀ ಮಳೆಯಾಗಿದ್ದು, ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ. -15 ರಷ್ಟು ಮಳೆ ಕೊರತೆಯಾಗಿದೆ. ಜಿಲ್ಲೆಯ ಒಟ್ಟು 22 ಹೋಬಳಿಗಳ ಪೈಕಿ 10 ಹೋಬಳಿಗಳಲ್ಲಿ ಮಳೆ ಕೊರತೆ ಎದ್ದು ಕಾಣುತ್ತಿದೆ.
ಮಳೆ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಬಿತ್ತನೆ ಕಾರ್ಯವು ತೀವ್ರ ಹಿನ್ನಡೆ ಅನುಭವಿಸಿದೆ. ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿಗೆ ಒಟ್ಟು 3,17,025 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡುವ ಗುರಿ ಹೊಂದಲಾಗಿತ್ತು. ಆದರೆ ಮಳೆಯ ಕೊರತೆಯಿಂದಾಗಿ ಇದುವರೆಗೆ ಕೇವಲ 59,555 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿದ್ದು, ನಿರೀಕ್ಷಿತ ಗುರಿ ತಲುಪಲು ಸಾಧ್ಯವಾಗಿಲ್ಲ ಎಂದರು.
ರಸಗೊಬ್ಬರ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸುಲಭ ಮತ್ತು ಪಾರದರ್ಶಕವಾಗಿಸಲು ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳನ್ನು ಪ್ರಾಯೋಗಿಕವಾಗಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ನೂತನ ‘ಫರ್ಟಿಲೈಸರ್ ಸೇಲ್ ಆಪ್’ ಮೂಲಕ ರಸಗೊಬ್ಬರ ವಿತರಣೆ ಮಾಡಲಾಗುತ್ತಿದೆ. ಜೂನ್ 25 ರಂದು ಜಿಲ್ಲೆಯಲ್ಲಿ ಜಾರಿಗೆ ಬಂದ ಈ ಆಪ್ ಮೂಲಕ ಇದುವರೆಗೆ ಸುಮಾರು 43,000 ಕ್ಕೂ ಹೆಚ್ಚು ರೈತರಿಗೆ ಒಟ್ಟು 8,000 ಮೆಟ್ರಿಕ್ ಟನ್ ಗೊಬ್ಬರವನ್ನು ವಿತರಿಸಲಾಗಿದೆ. ಈ ಹೊಸ ವ್ಯವಸ್ಥೆಯಿಂದಾಗಿ ಗೊಬ್ಬರದ ಕಾಳಸಂತೆ ತಡೆಗಟ್ಟಲು, ಅಕ್ರಮ ದಾಸ್ತಾನು ಹಾಗೂ ಗೊಬ್ಬರದ ಅತಿಯಾದ ಬಳಕೆ ನಿಯಂತ್ರಿಸಲು ಸಹಕಾರಿಯಾಗಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎಸ್.ಆಕಾಶ್, ಕೇಂದ್ರ ಪುರಸ್ಕøತ ಯೋಜನೆಗಳ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ ನಾಮನಿರ್ದೇಶಿತ ಸದಸ್ಯರಾದ ಸಂತೋಷ್ ಗುಡಿಮಠ, ರಾಜಶೇಖರ್, ಲಕ್ಷ್ಮಣ, ವೆಂಕಟಲಕ್ಷ್ಮಿ, ಗೋವಿಂದಪ್ಪ, ಭರತ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














