ರಾಜ್ಯದ ಮುಂಗಾರು ಅಧಿವೇಶನಕ್ಕೆ ಸರ್ಕಾರ ದಿನಾಂಕ ನಿಗದಿಪಡಿಸಿದ್ದು, ಆಗಸ್ಟ್ 6ರಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಆರಂಭವಾಗಲಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.ಸೋಮವಾರ ಬೆಂಗಳೂರಿನ ಸಿಎಂ ಗೃಹ ಕಚೇರಿ ‘ಕೃಷ್ಣಾ’ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಧಿವೇಶನ ಹಾಗೂ ತಮ್ಮ ದೆಹಲಿ ಭೇಟಿಯ ಕುರಿತು ಮಾಹಿತಿ ನೀಡಿದರು. “ಆಗಸ್ಟ್ 6ರಿಂದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಒಂದು ದಿನದ ಕೆಲಸದ ನಿಮಿತ್ತ ನಾನು ದೆಹಲಿಗೆ ತೆರಳಲಿದ್ದೇನೆ. ಬಳಿಕ ಪಕ್ಷದ ಹಿರಿಯ ನಾಯಕರು ಸಭೆಯ ದಿನಾಂಕ ನಿಗದಿಪಡಿಸಲಿದ್ದು, ನಂತರ ಮತ್ತೊಮ್ಮೆ ದೆಹಲಿಗೆ ಭೇಟಿ ನೀಡುತ್ತೇನೆ” ಎಂದು ಹೇಳಿದರು.
ಈ ವೇಳೆ ಕಾಂಗ್ರೆಸ್ನ ಹಿರಿಯ ನಾಯಕ ಹಾಗೂ ಮಾಜಿ ರಾಜ್ಯಸಭಾ ಸದಸ್ಯ ಹೆಚ್. ಹನುಮಂತಪ್ಪ ಅವರ ನಿಧನಕ್ಕೆ ಸಂತಾಪ ಸೂಚಿಸಿದ ಸಿಎಂ, “ಹೆಚ್. ಹನುಮಂತಪ್ಪ ಅವರು ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದ್ಧಿ ನಾಯಕರಾಗಿದ್ದರು. ಮೂರು ಬಾರಿ ರಾಜ್ಯಸಭೆ ಸದಸ್ಯರಾಗಿ, ರೈಲ್ವೆ ಆಯೋಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸುಮಾರು 45 ವರ್ಷಗಳಿಂದ ಅವರು ನನಗೆ ಆತ್ಮೀಯರಾಗಿದ್ದರು. ಪಕ್ಷದ ಉಪಾಧ್ಯಕ್ಷರು ಹಾಗೂ ಸಂಸದೀಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದ್ದರು. ನಾನು, ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಹಾಗೂ ಸಚಿವ ಕೆ.ಎಚ್. ಮುನಿಯಪ್ಪ ಅವರು ಅಂತಿಮ ನಮನ ಸಲ್ಲಿಸಿದ್ದೇವೆ. ರಾಜ್ಯ ಹಾಗೂ ರಾಷ್ಟ್ರದ ಹಲವು ಪ್ರಮುಖ ವಿಷಯಗಳಲ್ಲಿ ಮಾರ್ಗದರ್ಶನ ನೀಡಿದ ಹಿರಿಯ ನಾಯಕರಾಗಿದ್ದ ಅವರಿಗೆ ಗೌರವ ಸಲ್ಲಿಸುವುದು ನಮ್ಮ ಕರ್ತವ್ಯ” ಎಂದು ಸ್ಮರಿಸಿದರು.
ಮಂಡ್ಯ ಜಿಲ್ಲೆಯ ಶಾಸಕರು ಕಾವೇರಿ ನೀರು ಬಿಡುಗಡೆ ಮಾಡುವಂತೆ ಮನವಿ ಸಲ್ಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, “ಮಂಡ್ಯ, ಶ್ರೀರಂಗಪಟ್ಟಣದ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ಈ ಕುರಿತು ಸಭೆಯಲ್ಲಿ ಚರ್ಚಿಸಿ ನಂತರ ಸೂಕ್ತ ನಿರ್ಧಾರವನ್ನು ಪ್ರಕಟಿಸಲಾಗುವುದು” ಎಂದು ತಿಳಿಸಿದರು.ಕೆಪಿಎಸ್ಸಿ ಅಧ್ಯಕ್ಷರ ಅಮಾನತು ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ, “ರಾಜ್ಯಪಾಲರು ಈ ಆದೇಶ ಹೊರಡಿಸಿದ್ದಾರೆ. ಅವರ ನಂತರ ಹಿರಿಯರಾಗಿರುವ ಸದಸ್ಯರಿಗೆ ಜವಾಬ್ದಾರಿ ನೀಡುವಂತೆ ಈಗಾಗಲೇ ಸೂಚನೆ ನೀಡಿದ್ದೇನೆ” ಎಂದು ಹೇಳಿದರು.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.







