ಚಿತ್ರದುರ್ಗ: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ಮಾಜಿ ರಾಜ್ಯಸಭಾ ಸದಸ್ಯರು ಹಾಗೂ ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಹೆಚ್. ಹನುಮಂತಪ್ಪ ಅವರ ಅಂತ್ಯಸಂಸ್ಕಾರದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಭಾಗವಹಿಸಿ, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು ಗೌರವ ನಮನ ಸಲ್ಲಿಸಿದರು.
ಹೆಚ್. ಹನುಮಂತಪ್ಪ ಅವರು ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದರು. ಅವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳು, “ರಾಜಕೀಯವನ್ನು ಅಧಿಕಾರದ ಸಾಧನವಾಗಿ ಅಲ್ಲದೆ, ಜನಸೇವೆಯ ಮಾರ್ಗವಾಗಿ ಕಂಡಿದ್ದ ಹೆಚ್. ಹನುಮಂತಪ್ಪ ಅವರಂತಹ ಹಿರಿಯ ಮುತ್ಸದ್ದಿಯ ಅಗಲಿಕೆ ರಾಜ್ಯಕ್ಕೆ ತುಂಬಲಾರದ ನಷ್ಟವಾಗಿದೆ” ಎಂದು ಕಂಬನಿ ಮಿಡಿದರು.
ಕಾಂಗ್ರೆಸ್ ಹಿರಿಯ ಚೇತನರಿಗೆ ಭಾವಪೂರ್ಣ ನಮನ
ಇದನ್ನು ಓದಿಭಾರತದಲ್ಲಿ ಇವಿ ಕ್ಷೇತ್ರದಿಂದ 2030ರ ವೇಳೆಗೆ 4 ಕೋಟಿ ಉದ್ಯೋಗ ಸೃಷ್ಟಿ: ಶೇ. 45ರಷ್ಟು ಹೆಚ್ಚಿನ ವೇತನ ನೀಡುವ ನಿರೀಕ್ಷೆಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರು, ರಾಜ್ಯಸಭೆ ಮಾಜಿ ಸದಸ್ಯರು, ಕೇಂದ್ರ ರೇಷ್ಮೆ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಎಸ್. ನಿಜಲಿಂಗಪ್ಪ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾಗಿದ್ದ ಹೆಚ್. ಹನುಮಂತಪ್ಪ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ಅಂತ್ಯಸಂಸ್ಕಾರದಲ್ಲಿ ಭಾಗವಹಿಸಿ ಗೌರವ ನಮನ… pic.twitter.com/qNg9CIGKRN
— DK Shivakumar (@DKShivakumar) July 13, 2026
ಹೆಚ್. ಹನುಮಂತಪ್ಪ ಅವರು 1982ರಿಂದ 2000ರವರೆಗೆ ಸತತವಾಗಿ ಮೂರು ಬಾರಿ ರಾಜ್ಯಸಭಾ ಸದಸ್ಯರಾಗಿ ಆಯ್ಕೆಯಾಗುವ ಮೂಲಕ ರಾಜ್ಯ ಹಾಗೂ ರಾಷ್ಟ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದ್ದರು. ಕೇಂದ್ರ ರೇಷ್ಮೆ ಮಂಡಳಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ರೇಷ್ಮೆ ಕ್ಷೇತ್ರದ ಅಭಿವೃದ್ಧಿಗೆ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಿ, ರೈತರ ಹಾಗೂ ರೇಷ್ಮೆ ಬೆಳೆಗಾರರ ಹಿತಾಸಕ್ತಿಗಾಗಿ ಶ್ರಮಿಸಿದ್ದರು ಎಂಬುದನ್ನು ಸಿಎಂ ಸ್ಮರಿಸಿದರು. ಅವರ ಆದರ್ಶಗಳು, ಸಮಾಜಮುಖಿ ಚಿಂತನೆಗಳು ಹಾಗೂ ಜನಪರ ಸೇವೆಗಳು ಸದಾ ಸ್ಮರಣೀಯವಾಗಿರಲಿವೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.











