ಬೆಂಗಳೂರು.ಜುಲೈ.12: ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ತಮ್ಮ ಸುಮಧುರ ಧ್ವನಿಯ ಮೂಲಕ ಸುವರ್ಣ ಅಧ್ಯಾಯ ಬರೆದವರು ಗಾನ ಕೋಗಿಲೆ ಎಸ್. ಜಾನಕಿ. ಇತ್ತೀಚೆಗೆ ಖಾಸಗಿ ಟಿವಿ ವಾಹಿನಿಯೊಂದರಲ್ಲಿ ಮಾತನಾಡಿದ ಪ್ರಖ್ಯಾತ ಸಂಗೀತ ನಿರ್ದೇಶಕ ಆರ್ಪಿ ಪಟ್ನಾಯಕ್, ಜಾನಕಮ್ಮ ಅವರೊಂದಿಗಿನ ತಮ್ಮ ಒಡನಾಟ ಹಾಗೂ ಅವರು ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲೊಂದಾದ ‘ಪದ್ಮಭೂಷಣ’ವನ್ನು ತಿರಸ್ಕರಿಸಲು ಇದ್ದ ನಿಜವಾದ ಕಾರಣವನ್ನು ಹಂಚಿಕೊಂಡಿದ್ದಾರೆ.
ಎಸ್. ಜಾನಕಿ ಅವರು ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿದ್ದಾರೆ. 12 ನಂದಿ ಪ್ರಶಸ್ತಿಗಳು ಹಾಗೂ 4 ರಾಷ್ಟ್ರ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಅವರು ಕೇವಲ ಗಾಯಕಿಯಲ್ಲ, ಬದಲಿಗೆ ಒಂದು ಸಂಗೀತ ಶಾಲೆ ಎಂದು ಪಟ್ನಾಯಕ್ ಬಣ್ಣಿಸಿದ್ದಾರೆ.
ಜಾನಕಮ್ಮ ಅವರಿಗೆ ಪದ್ಮಭೂಷಣ ಪ್ರಶಸ್ತಿ ತಡವಾಗಿ ಘೋಷಣೆಯಾದಾಗ ಅವರು ಅದನ್ನು ನಯವಾಗಿಯೇ ತಿರಸ್ಕರಿಸಿದ್ದರು. ಈ ಬಗ್ಗೆ ಮಾತನಾಡಿದ ಪಟ್ನಾಯಕ್, ಪ್ರಶಸ್ತಿಗಳಿಗೆ ಜಾನಕಮ್ಮ ಅವರ ಹೆಸರು ಸೇರಿದರೆ ಆ ಪ್ರಶಸ್ತಿಯ ಗೌರವ ಹೆಚ್ಚುತ್ತದೆಯೇ ಹೊರತು, ಪ್ರಶಸ್ತಿಗಳಿಂದ ಅವರಿಗೆ ಬರುವ ಗೌರವವೇನೂ ಇಲ್ಲ. ಅವರು ಈ ಎಲ್ಲಾ ಪ್ರಶಸ್ತಿಗಳಿಗಿಂತ ತೀರಾ ಎತ್ತರದಲ್ಲಿದ್ದಾರೆ. ಅವರಿಗೆ ಈ ಗೌರವ ಎಂದೋ ಸಿಗಬೇಕಿತ್ತು. ತುಂಬಾ ತಡವಾಗಿ ನೀಡಿದ್ದರಿಂದಲೇ ಅವರು ಅದನ್ನು ತಿರಸ್ಕರಿಸಿದರು ಎಂದು ಸ್ಪಷ್ಟಪಡಿಸಿದ್ದಾರೆ.
ಇಳಯರಾಜಾ ಅವರ ಸಂಗೀತ, ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಧ್ವನಿಯ ಜೊತೆಗೆ ಜಾನಕಮ್ಮ ಅವರ ಗಾಯನವೇ ತಾವು ಸಂಗೀತ ಲೋಕಕ್ಕೆ ಬರಲು ಮುಖ್ಯ ಪ್ರೇರಣೆ ಎಂದು ಆರ್ಪಿ ಪಟ್ನಾಯಕ್ ಹೇಳಿದ್ದಾರೆ. “ನಾವು ಎಸ್ಪಿಬಿ ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಿದ್ದೇವೆಯೋ, ಅಷ್ಟೇ ಮಟ್ಟದಲ್ಲಿ ಜಾನಕಮ್ಮ ಅವರನ್ನೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಎಸ್ಪಿಬಿ ಮತ್ತು ಜಾನಕಿ ಅವರ ಕಾಂಬಿನೇಷನ್ ಒಂದು ಅದ್ಭುತ ಮ್ಯಾಜಿಕ್,” ಎಂದು ಅವರು ನೆನೆದಿದ್ದಾರೆ.
ಜಾನಕಮ್ಮ ಅವರ ಗಾಯನದ ಶೈಲಿಯನ್ನು ಹೊಗಳಿದ ಪಟ್ನಾಯಕ್, “ಅವರು ಹಾಡುವಾಗ ಧ್ವನಿಯಲ್ಲಿ ನೂರಾರು ಭಾವನೆಗಳನ್ನು (ಎಕ್ಸ್ ಪ್ರೆಷನ್) ತರುತ್ತಿದ್ದರು. ಆದರೆ ಮುಖದಲ್ಲಿ ಮಾತ್ರ ಯಾವುದೇ ಬದಲಾವಣೆ ಇರುತ್ತಿರಲಿಲ್ಲ. ಸ್ವತಃ ಎಸ್ಪಿ ಬಾಲಸುಬ್ರಹ್ಮಣ್ಯಂ ಅವರೇ ಈ ಬಗ್ಗೆ ಆಶ್ಚರ್ಯ ವ್ಯಕ್ತಪಡಿಸುತ್ತಾ, ‘ಆ ಮಹಾತಾಯಿ ಮುಖದಲ್ಲಿ ಒಂದೇ ಭಾವನೆ ಇಟ್ಟುಕೊಂಡು ಧ್ವನಿಯಲ್ಲಿ ಇಷ್ಟೊಂದು ಮ್ಯಾಜಿಕ್ ಹೇಗೆ ಮಾಡುತ್ತಾಳೋ, ಆಕೆ ಹಾಡಿನ ರಾಕ್ಷಸಿ’ ಎಂದು ಹೊಗಳುತ್ತಿದ್ದರು,” ಎಂಬ ನೆನಪನ್ನು ಹಂಚಿಕೊಂಡಿದ್ದಾರೆ.
ತಮ್ಮ ವೈಯಕ್ತಿಕ ಒಡನಾಟವನ್ನು ನೆನಪಿಸಿಕೊಂಡ ಪಟ್ನಾಯಕ್, ಮಾರ್ಚ್ 21 ರಂದು ವೈಜಾಗ್ನಲ್ಲಿ ಜಾನಕಮ್ಮ ಅವರನ್ನು ಕೊನೆಯದಾಗಿ ಭೇಟಿಯಾಗಿದ್ದನ್ನು ನೆನೆದರು. 87 ವರ್ಷ ವಯಸ್ಸಾಗಿದ್ದರೂ ಅವರು ಎಷ್ಟೋ ಸಕ್ರಿಯರಾಗಿದ್ದಾರೆ ಮತ್ತು ಸಕಾರಾತ್ಮಕ ಶಕ್ತಿಯಾಗಿದ್ದಾರೆ. ನಮ್ಮ ಮನೆಗೆ ಬಂದಾಗ ನನ್ನ ತಂದೆ ಮತ್ತು ಕುಟುಂಬದವರ ಜೊತೆ ಸ್ವಂತ ಮಗಳಂತೆ ಬೆರೆತು ಹೋದರು. ಅವರೊಂದಿಗಿನ ಜರ್ನಿ ನಮಗೆ ಯಾವಾಗಲೂ ಸ್ಫೂರ್ತಿದಾಯಕ ಎಂದು ಆರ್ಪಿ ಪಟ್ನಾಯಕ್ ಭಾವೋದ್ವೇಗದಿಂದ ನುಡಿದಿದ್ದಾರೆ.








