ದೆಹಲಿ.ಜುಲೈ.12: ಸ್ಪ್ಯಾಮ್ ಕರೆಗಳು ಮತ್ತು ಸಂದೇಶಗಳ ವ್ಯಾಖ್ಯಾನಕ್ಕೆ ಸಂಬಂಧಿಸಿದಂತೆ ಸ್ವೀಡನ್ ಮೂಲದ ಟ್ರೂಕಾಲರ್ ಮತ್ತು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ನಡುವಿನ ಜಟಾಪಟಿ ತಾರಕಕ್ಕೇರಿದೆ.
ಅಧಿಕೃತವಾಗಿ ನಿಯೋಜಿಸಲಾದ ವಾಣಿಜ್ಯ ಸಂಖ್ಯೆಗಳ ಸರಣಿಯಿಂದ ಬರುವ ಕರೆಗಳನ್ನು ಫಿಲ್ಟರ್ ಮಾಡದಂತೆ ಅಥವಾ ‘ಸ್ಪ್ಯಾಮ್’ ಎಂದು ಟ್ಯಾಗ್ ಮಾಡದಂತೆ ಟ್ರೂಕಾಲರ್ ಆಪ್ ಅನ್ನು ತಡೆಯಲು ಟ್ರಾಯ್ ಯತ್ನಿಸುತ್ತಿದೆ. ಇದಕ್ಕಾಗಿ ಕರೆ ನಿರ್ವಹಣಾ ಆಪ್ಗಳ ವಿರುದ್ಧ ಕ್ರಮ ಕೈಗೊಳ್ಳಲು ಐಟಿ ಸಚಿವಾಲಯದಿಂದ ಟ್ರಾಯ್ ಈಗಾಗಲೇ ಅನುಮತಿಯನ್ನು ಕೋರಿದ್ದು, ಇದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ.
ಗೊಂದಲ ಮೂಡಿಸಿದ ವಿಶೇಷ ಸಂಖ್ಯೆಗಳು
ಗ್ರಾಹಕರು ಅಸಲಿ ಉದ್ಯಮ ಕರೆಗಳನ್ನು ಸುಲಭವಾಗಿ ಗುರುತಿಸಲು ಸಹಾಯವಾಗಲೆಂದು ಟ್ರಾಯ್ ಕೆಲವು ವರ್ಷಗಳ ಹಿಂದೆ ವಿಶೇಷ ಫೋನ್ ಸಂಖ್ಯೆಗಳ ಸರಣಿಯನ್ನು ಪರಿಚಯಿಸಿತ್ತು. ಆದರೆ ಈ ವ್ಯವಸ್ಥೆಯು ಗೊಂದಲಕ್ಕೆ ಕಾರಣವಾಗಿದೆ ಎಂದು ಟ್ರೂಕಾಲರ್ ತನ್ನ ಇತ್ತೀಚಿನ ವರದಿಯಲ್ಲಿ ತಿಳಿಸಿದೆ. ಈ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ಪ್ಯಾಮ್ ಎಂದು ಭಾವಿಸಿ ಮಿಲಿಯನ್ಗಟ್ಟಲೆ ಜನರು ಈಗ ಬ್ಯಾಂಕ್ ಮತ್ತು ಕಂಪನಿಗಳ ಅಸಲಿ ಕರೆಗಳನ್ನೂ ನಿರ್ಲಕ್ಷಿಸುತ್ತಿದ್ದಾರೆ ಎಂದು ಅದು ಹೇಳಿದೆ. ಆದರೆ, ಟ್ರಾಯ್ ಈ ಬಗ್ಗೆ ಭಿನ್ನ ನಿಲುವನ್ನು ಹೊಂದಿದ್ದು, ಟ್ರೂಕಾಲರ್ನಂತಹ ಆಪ್ಗಳೇ ಗ್ರಾಹಕರು ಇಂತಹ ಕರೆಗಳನ್ನು ಸ್ವೀಕರಿಸದಂತೆ ಮಾಡುವ ಮೂಲಕ ಸಮಸ್ಯೆಯನ್ನು ಇನ್ನಷ್ಟು ಬಿಗಡಾಯಿಸುತ್ತಿವೆ ಎಂದು ಆರೋಪಿಸಿದೆ.
ವಾಯ್ಸ್ ಕರೆಗಳ ಮೇಲಿನ ನಂಬಿಕೆ ಕ್ಷೀಣ
ಭಾರತದಲ್ಲಿ ಗ್ರಾಹಕರ ಸಂವಹನ ವಾಹಿನಿಯಾಗಿ ಧ್ವನಿ ಕರೆಗಳ (Voice calls) ಪಾತ್ರದ ಕುರಿತು ಜಾಗತಿಕ ಸಂವಹನ ವೇದಿಕೆಯು ‘ದಿ ಸ್ಟೇಟ್ ಆಫ್ ಬಿಸಿನೆಸ್ ಕಾಲಿಂಗ್ 2026’ ವರದಿಯನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಘರ್ಷಣೆ ಆರಂಭವಾಗಿದೆ. ಈ ವರದಿಯು ಒಂದು ವಿಚಿತ್ರ ವಿರೋಧಾಭಾಸವನ್ನು ಎತ್ತಿ ತೋರಿಸಿದೆ:
76% ಗ್ರಾಹಕರು ಡಿಜಿಟಲ್ ಪರ್ಯಾಯಗಳಿಗಿಂತ ಕರೆಗಳ ಮೂಲಕ ಸಂವಹನ ನಡೆಸಲು ಬಯಸುತ್ತಾರೆ.
ಆದರೆ, 79% ಉದ್ಯಮಗಳ ಪ್ರಕಾರ ಗ್ರಾಹಕರು ಅಪರಿಚಿತ ಸಂಖ್ಯೆಗಳಿಂದ ಬರುವ ಕರೆಗಳನ್ನು ಸ್ವೀಕರಿಸಲು ಹಿಂಜರಿಯುತ್ತಾರೆ.
ಇಮೇಲ್, ಎಸ್ಎಂಎಸ್ ಮತ್ತು ಚಾಟ್ಗಳಿಗೆ ಹೋಲಿಸಿದರೆ ವಾಯ್ಸ್ ಕರೆಗಳು ಅತ್ಯಂತ ವಿಶ್ವಾಸಾರ್ಹ ಮಾಧ್ಯಮವಾಗಿದ್ದರೂ, ಪ್ರಸ್ತುತ ಅದಕ್ಕೆ ಇರುವ ನಂಬಿಕೆ ನಿಧಾನವಾಗಿ ಕುಸಿಯುತ್ತಿದೆ. ಸ್ಪ್ಯಾಮ್, ಸಂದರ್ಭದ ಕೊರತೆ, ಅಸ್ಥಿರ ಕರೆ ಗುರುತು ಮತ್ತು ಸರಿಯಾದ ಸಮಯಕ್ಕೆ ಕರೆ ಮಾಡದಿರುವುದು ಗ್ರಾಹಕರಲ್ಲಿ ಕರೆಗಳ ಬಗ್ಗೆ ಒಟ್ಟಾರೆ ಹಿಂಜರಿಕೆಯನ್ನು ಉಂಟುಮಾಡಿದೆ. ಇದು ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುವ ವ್ಯವಹಾರಗಳ ಮೇಲೂ ಪರಿಣಾಮ ಬೀರುತ್ತಿದೆ.
‘ಆಪ್ಗಳು ಕಾನೂನು ಪಾಲಿಸಲೇಬೇಕು’: ಟ್ರಾಯ್
ಈ ಕುರಿತು ಫೈನಾನ್ಷಿಯಲ್ ಎಕ್ಸ್ಪ್ರೆಸ್ನೊಂದಿಗೆ ಮಾತನಾಡಿದ ಟ್ರಾಯ್ ಅಧ್ಯಕ್ಷ ಎ. ಕೆ. ಲಹೋಟಿ ಅವರು ಅಧಿಕೃತ ನಿಲುವನ್ನು ಪುನರುಚ್ಚರಿಸಿದ್ದಾರೆ. ಆಪ್ಗಳು ದೇಶದ ಕಾನೂನನ್ನು ಪಾಲಿಸಲು ಬದ್ಧರಾಗಿದ್ದು, ನಿಯಂತ್ರಕ ನಿಯಮಗಳೊಂದಿಗೆ ಚೆಲ್ಲಾಟವಾಡಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
“1600 ಸರಣಿಯು ಬ್ಯಾಂಕಿಂಗ್ ಗ್ರಾಹಕರ ವಹಿವಾಟುಗಳಿಗಾಗಿ ಮೀಸಲಾಗಿರುವ ಅಧಿಕೃತ ಸರಣಿಯಾಗಿದೆ. ಒಂದು ವೇಳೆ ಆಪ್ ಈ ಸರಣಿಯನ್ನು ಸ್ಪ್ಯಾಮ್ ಎಂದು ಫ್ಲ್ಯಾಗ್ ಮಾಡಿದರೆ, ಬ್ಯಾಂಕಿಂಗ್ ಸೇವೆಗೆ ಅಡ್ಡಿಯಾಗುತ್ತದೆ. ಗ್ರಾಹಕರಿಗೆ ಬ್ಯಾಂಕ್ಗಳಿಂದ ಸೇವಾ ಕರೆಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಇದು ಸಂವಹನದ ಉಲ್ಲಂಘನೆಯಾಗಿದೆ,” ಎಂದು ಲಹೋಟಿ ಹೇಳಿದ್ದಾರೆ.
ಈ 1600 ಸರಣಿಯನ್ನು ಬ್ಯಾಂಕುಗಳು, ಬಿಎಫ್ಎಸ್ಐ (BFSI) ವಲಯದ ನಿಯಂತ್ರಿತ ಸಂಸ್ಥೆಗಳು ಮತ್ತು ಸರ್ಕಾರಿ ಸಂಸ್ಥೆಗಳು ನಾಗರಿಕರೊಂದಿಗೆ ಸಂವಹನ ನಡೆಸಲು ಪ್ರತ್ಯೇಕವಾಗಿ ನಿಗದಿಪಡಿಸಲಾಗಿದೆ. ದೊಡ್ಡ ಮೊತ್ತದ ವಹಿವಾಟುಗಳ ಪರಿಶೀಲನೆ ಅಥವಾ ಗ್ರಾಹಕರ ಪ್ರಶ್ನೆಗಳಿಗೆ ಉತ್ತರಿಸಲು ಇವುಗಳನ್ನು ಬಳಸಲಾಗುವುದರಿಂದ, ಇವು ಸಂಪೂರ್ಣವಾಗಿ ಅಸಲಿ ಕರೆಗಳಾಗಿರುತ್ತವೆ ಎಂದು ಅವರು ವಿವರಿಸಿದ್ದಾರೆ.
‘ಇದು ಗ್ರಾಹಕ ಪರವೂ ಅಲ್ಲ, ಸ್ಪ್ಯಾಮ್ ವಿರೋಧಿಯೂ ಅಲ್ಲ’: ಟ್ರೂಕಾಲರ್
ಮತ್ತೊಂದೆಡೆ, ಜನರು ಇಂತಹ ಸಂಖ್ಯೆಗಳನ್ನು ಹಸ್ತಚಾಲಿತವಾಗಿ (Manually) ಬ್ಲಾಕ್ ಮಾಡುತ್ತಿರುವುದರಿಂದ ಗ್ರಾಹಕರು ಮತ್ತು ಕಾನೂನುಬದ್ಧ ಉದ್ಯಮಗಳು ಇಬ್ಬರೂ ನಷ್ಟ ಅನುಭವಿಸುತ್ತಿದ್ದಾರೆ ಎಂದು ಟ್ರೂಕಾಲರ್ ವಾದಿಸಿದೆ. ವರದಿಗಳ ಪ್ರಕಾರ, ಟ್ರೂಕಾಲರ್ ಬಳಕೆದಾರರು ಪ್ರತಿದಿನ 140 ಸರಣಿಯಿಂದ ಸುಮಾರು 4 ಲಕ್ಷ ಕರೆಗಳನ್ನು ಮತ್ತು 1600 ಸರಣಿಯಿಂದ 1.25 ಲಕ್ಷ ಕರೆಗಳನ್ನು ಬ್ಲಾಕ್ ಮಾಡುತ್ತಿದ್ದಾರೆ.
ಫೈನಾನ್ಷಿಯಲ್ ಎಕ್ಸ್ಪ್ರೆಸ್ಗೆ ನೀಡಿದ ಸಂದರ್ಶನದಲ್ಲಿ ಟ್ರೂಕಾಲರ್ ಸಿಇಒ ರಿಷಿತ್ ಝುಂಜುನ್ವಾಲಾ ಮಾತನಾಡಿ, “ವಿಶೇಷ ಸಂಖ್ಯೆಗಳ ಸರಣಿಯ (140/1600) ಉದ್ದೇಶ ನಂಬಿಕೆಯನ್ನು ಮೂಡಿಸುವುದಾಗಿತ್ತು, ಆದರೆ ಈಗ ಅದು ಅಪನಂಬಿಕೆಯ ಚಾನೆಲ್ ಆಗಿ ಮಾರ್ಪಟ್ಟಿದೆ,” ಎಂದಿದ್ದಾರೆ.
140 ಮತ್ತು 1600 ಸರಣಿಯ ಎಲ್ಲಾ ಸಂಖ್ಯೆಗಳನ್ನು ವೈಟ್ಲಿಸ್ಟ್ (ಸ್ವೀಕೃತ ಪಟ್ಟಿ) ಮಾಡಲು ಟ್ರಾಯ್ ಆದೇಶಿಸಿದಾಗಿನಿಂದ ಸ್ಪ್ಯಾಮರ್ಗಳು ಯಾವುದೇ ಅಂಜಿಕೆಯಿಲ್ಲದೆ ಕರೆ ಮಾಡುತ್ತಿದ್ದಾರೆ. ಟ್ರಾಯ್ನ ಈ ನಿಯಮದಿಂದ ಸ್ಪ್ಯಾಮ್ ಯಾವುದೇ ರೀತಿಯಲ್ಲಿ ಕಡಿಮೆಯಾಗುತ್ತಿಲ್ಲ, ಬದಲಿಗೆ ಗ್ರಾಹಕರಲ್ಲಿನ ನಂಬಿಕೆ ಇಲ್ಲದಂತಾಗುತ್ತಿದೆ ಎಂದು ತಾವು ಈಗಾಗಲೇ ಟ್ರಾಯ್ಗೆ ಎಚ್ಚರಿಸಿದ್ದಾಗಿ ಅವರು ತಿಳಿಸಿದ್ದಾರೆ. “ಇದು ಹೇಗೆ ಗ್ರಾಹಕ ಪರ ಅಥವಾ ಸ್ಪ್ಯಾಮ್ ವಿರೋಧಿ ನಿಯಮವಾಗುತ್ತದೆ ಎಂದು ನನಗೆ ತಿಳಿಯುತ್ತಿಲ್ಲ. ಗ್ರಾಹಕರು ಸ್ಪ್ಯಾಮ್ಗಳಿಂದ ತೊಂದರೆ ಅನುಭವಿಸುತ್ತಿದ್ದಾರೆ ಮತ್ತು ಸ್ಪ್ಯಾಮರ್ಗಳು ಟ್ರೂಕಾಲರ್ನಲ್ಲಿ ವೈಟ್ಲಿಸ್ಟ್ ಆಗಿರುವುದಕ್ಕೆ ಸಂತೋಷಪಡುತ್ತಿದ್ದಾರೆ,” ಎಂದು ಅವರು ಲೇವಡಿ ಮಾಡಿದ್ದಾರೆ.








