ಕೊಲಂಬೊ.ಜುಲೈ.06: ಶ್ರೀಲಂಕಾದ ನೆಗೊಂಬೊ ಕರಾವಳಿ ಪಟ್ಟಣದಲ್ಲಿರುವ ಕಾರಾಗೃಹದಲ್ಲಿ ಎರಡು ಗುಂಪುಗಳ ನಡುವೆ ನಡೆದ ಭೀಕರ ಘರ್ಷಣೆಯಲ್ಲಿ ಕನಿಷ್ಠ 25 ಜನರು ಸಾವನ್ನಪ್ಪಿದ್ದು, ಸುಮಾರು 100 ಕ್ಕೂ ಹೆಚ್ಚು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ಪರಿಸ್ಥಿತಿಯನ್ನು ಹತೋಟಿಗೆ ತರಲು ಶ್ರೀಲಂಕಾ ಸರ್ಕಾರವು ಮಿಲಿಟರಿ ನೆರವನ್ನು ಕೋರಿದೆ.
ವಾಣಿಜ್ಯ ರಾಜಧಾನಿ ಕೊಲಂಬೊದಿಂದ ಉತ್ತರಕ್ಕೆ ಸುಮಾರು 35 ಕಿಲೋಮೀಟರ್ ದೂರದಲ್ಲಿರುವ, ಸಾಮರ್ಥ್ಯಕ್ಕಿಂತ ಹೆಚ್ವು ಕೈದಿಗಳನ್ನು ಹೊಂದಿರುವ ಈ ಜೈಲಿನಲ್ಲಿ ಭಾನುವಾರ ಶಿಕ್ಷೆಗೊಳಗಾದ ಕೈದಿಗಳು ಮತ್ತು ವಿಚಾರಣಾ ಧೀನ ಕೈದಿಗಳ ನಡುವೆ ಜಗಳ ಆರಂಭವಾಗಿದೆ. ಸೋಮವಾರದ ವೇಳೆಗೆ ಈ ಘರ್ಷಣೆ ವಿಕೋಪಕ್ಕೆ ತಿರುಗಿದ್ದು, ಗಲಭೆಕೋರ ಕೈದಿಗಳು ಜೈಲಿನಲ್ಲಿದ್ದ ಬಂದೂಕುಗಳನ್ನು ಕಸಿದುಕೊಂಡು ಗುಂಡಿನ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಸ್ಥಳೀಯ ದೂರದರ್ಶನ ವಾಹಿನಿಯ ವರದಿಯ ಪ್ರಕಾರ, ಮೃತರ ಮತ್ತು ಗಾಯಾಳುಗಳ ಪಟ್ಟಿಯಲ್ಲಿ ಕೈದಿಗಳು ಮಾತ್ರವಲ್ಲದೆ ಜೈಲಿನ ಅಧಿಕಾರಿಗಳು ಸೇರಿದ್ದಾರೆ. ಪ್ರಸ್ತುತ ಪೊಲೀಸರು ಮತ್ತು ಭದ್ರತಾ ಸಿಬ್ಬಂದಿ ಜೈಲಿನ ಆವರಣವನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದು, ಮೃತರು ಹಾಗೂ ಗಾಯಾಳುಗಳ ನಿಖರ ಸಂಖ್ಯೆಯನ್ನು ಸಂಗ್ರಹಿಸುತ್ತಿದ್ದಾರೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಗಲಭೆಗೆ ನಿಖರವಾದ ಕಾರಣ ಏನೆಂಬುದು ಇನ್ನು ಪತ್ತೆಯಾಗಿಲ್ಲ.

















