ದೆಹಲಿ.ಜುಲೈ.06: ಪ್ರಾಣಿಗಳನ್ನು ಸಾಕುವುದು, ಅವುಗಳೊಂದಿಗೆ ಸಮಯ ಕಳೆಯುವುದು ಎಲ್ಲರಿಗೂ ಇಷ್ಟ. ಆದರೆ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಮಾರಕ ಕಾಯಿಲೆಗಳ ಬಗ್ಗೆ ನಿಮಗೆ ಗೊತ್ತೇ? ಹೌದು, ಪ್ರಾಣಿಗಳಿಂದ ಹರಡುವ ಇಂತಹ ಕಾಯಿಲೆಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪ್ರತಿ ವರ್ಷ ಜುಲೈ 6 ರಂದು ವಿಶ್ವಾದ್ಯಂತ ‘ವಿಶ್ವ ಪ್ರಾಣಿ ರೋಗಗಳ ದಿನ’ (World Zoonoses Day) ಆಚರಿಸಲಾಗುತ್ತದೆ.
ಏನಿದರ ಇತಿಹಾಸ?
ಫ್ರೆಂಚ್ ವಿಜ್ಞಾನಿ ಲೂಯಿಸ್ ಪಾಶ್ಚರ್ ಅವರು ಜುಲೈ 6, 1885 ರಂದು ನಾಯಿಗಳಿಂದ ಹರಡುವ ಮಾರಕ ರೇಬೀಸ್ ಕಾಯಿಲೆಗೆ ಮೊದಲ ಲಸಿಕೆಯನ್ನು ಯಶಸ್ವಿಯಾಗಿ ಕಂಡುಹಿಡಿದರು. ಅವರ ಈ ಮಹತ್ತರ ಸಾಧನೆಯ ನೆನಪಿಗಾಗಿ ಪ್ರತಿ ವರ್ಷ ಈ ದಿನವನ್ನು ‘ಝೂನೋಸಿಸ್ ದಿನ’ವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇಂದಿಗೂ ಜಗತ್ತಿನ ಬಹುದೊಡ್ಡ ಜನಸಂಖ್ಯೆಗೆ ಪ್ರಾಣಿಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸರಿಯಾದ ಮಾಹಿತಿಯಿಲ್ಲದಿರುವುದು ಕಳವಳಕಾರಿ ಸಂಗತಿಯಾಗಿದೆ.
‘ಝೂನೋಟಿಕ್ ರೋಗಗಳು’ ಎಂದರೇನು?
ಪ್ರಾಣಿಗಳಿಂದ ಮನುಷ್ಯರಿಗೆ ಅಥವಾ ಮನುಷ್ಯರಿಂದ ಪ್ರಾಣಿಗಳಿಗೆ ಹರಡುವ ಬ್ಯಾಕ್ಟೀರಿಯಾ, ವೈರಸ್, ಪ್ಯಾರಾಸೈಟ್ (ಪರಾವಲಂಬಿ ಜೀವಿಗಳು) ಮತ್ತು ಶಿಲೀಂಧ್ರಗಳಿಂದ (ಫಂಗಸ್) ಬರುವ ಸೋಂಕನ್ನು ಝೂನೋಟಿಕ್ ರೋಗ ಎನ್ನಲಾಗುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮನುಷ್ಯರಿಗೆ ಹರಡುವ ಒಟ್ಟು ಸಾಂಕ್ರಾಮಿಕ ರೋಗಗಳಲ್ಲಿ ಸುಮಾರು 61% ರೋಗಗಳು ಝೂನೋಟಿಕ್ ಆಗಿವೆ. ಅಂದರೆ, ಪ್ರತಿ 10 ಸಾಂಕ್ರಾಮಿಕ ರೋಗಗಳಲ್ಲಿ 6 ಕ್ಕೂ ಹೆಚ್ಚು ರೋಗಗಳು ಪ್ರಾಣಿಗಳಿಂದಲೇ ಹರಡುತ್ತವೆ. ಕೆಲವು ಬಾರಿ ಮೇಲ್ನೋಟಕ್ಕೆ ಆರೋಗ್ಯವಾಗಿ ಕಾಣುವ ಪ್ರಾಣಿಗಳಲ್ಲೂ ಈ ವೈರಸ್ಗಳು ಇರಬಹುದು.
ಪ್ರಮುಖ ಝೂನೋಟಿಕ್ ರೋಗಗಳು ಮತ್ತು ಲಕ್ಷಣಗಳು:
ರೇಬೀಸ್ (Rabies): ಇದು ಅತ್ಯಂತ ವೇಗವಾಗಿ ಹರಡುವ ಮಾರಕ ಕಾಯಿಲೆಯಾಗಿದೆ. ಸೋಂಕಿತ ಪ್ರಾಣಿಗಳ (ನಾಯಿ, ನರಿ, ಬಾವಲಿ ಇತ್ಯಾದಿ) ಲಾಲಾರಸ, ಕಡಿತ ಅಥವಾ ಅವುಗಳ ಮಲ-ಮೂತ್ರದ ಸಂಪರ್ಕದಿಂದ ಇದು ಹರಡುತ್ತದೆ. ಜ್ವರ, ತಲೆನೋವು, ಸ್ನಾಯು ದೌರ್ಬಲ್ಯ ಮತ್ತು ಪಾರ್ಶ್ವವಾಯು ಇದರ ಲಕ್ಷಣಗಳು. ಸಕಾಲದಲ್ಲಿ ಚಿಕಿತ್ಸೆ ಸಿಗದಿದ್ದರೆ ಇದು ಪ್ರಾಣಾಂತಿಕವಾಗಬಹುದು.
ಲೈಮ್ ಕಾಯಿಲೆ (Lyme Disease): ಇದು ‘ಬೊರೆಲಿಯಾ ಬರ್ಗ್ಡೋರ್ಫೆರಿ’ ಎಂಬ ಬ್ಯಾಕ್ಟೀರಿಯಾದಿಂದ ಬರುತ್ತದೆ. ಸೋಂಕಿತ ಉಣ್ಣಿ (Ticks) ಕಡಿಯುವುದರಿಂದ ಇದು ಹರಡುತ್ತದೆ. ಜ್ವರ, ಸುಸ್ತು, ಕೀಲು ನೋವು ಇದರ ಪ್ರಮುಖ ಲಕ್ಷಣಗಳು. ನಿರ್ಲಕ್ಷಿಸಿದರೆ ಇದು ಗಂಟುನೋವು ಮತ್ತು ಮೆದುಳಿನ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ.
ಬ್ರೂಸೆಲೋಸಿಸ್ (Brucellosis): ‘ಬ್ರೂಸೆಲ್ಲಾ ಅಬೋರ್ಟಸ್’ ಬ್ಯಾಕ್ಟೀರಿಯಾದಿಂದ ಬರುವ ಈ ರೋಗವು ಸೋಂಕಿತ ಪ್ರಾಣಿಗಳ ತ್ಯಾಜ್ಯದ ಸಂಪರ್ಕದಿಂದ ಹರಡುತ್ತದೆ. ಮನುಷ್ಯರಲ್ಲಿ ಜ್ವರ, ತಲೆನೋವು ಮತ್ತು ಕೀಲು ನೋವು ಕಾಣಿಸಿಕೊಳ್ಳುತ್ತದೆ. ಇದು ಪ್ರಾಣಿಗಳಲ್ಲಿ ಸಂತಾನೋತ್ಪತ್ತಿ ಸಮಸ್ಯೆಯನ್ನು ಉಂಟುಮಾಡುತ್ತದೆ.
ಟೊಕ್ಸೊಪ್ಲಾಸ್ಮೋಸಿಸ್ (Toxoplasmosis): ಇದು ಬೆಕ್ಕುಗಳು ಮತ್ತು ಅವುಗಳ ಮಲದ ಸಂಪರ್ಕದಿಂದ ಹರಡುವ ಕಾಯಿಲೆಯಾಗಿದೆ. ಜ್ವರ, ಸ್ನಾಯು ನೋವು ಮತ್ತು ಗ್ರಂಥಿಗಳ ಬಾವು ಇದರ ಲಕ್ಷಣಗಳಾಗಿದ್ದು, ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಅಂಧತ್ವ ಅಥವಾ ಮೆದುಳಿನ ಕಾಯಿಲೆಗೆ ಕಾರಣವಾಗಬಹುದು.
ಹಂಟಾವೈರಸ್ (Hantavirus): ಇಲಿ ಹಾಗೂ ಹೆಗ್ಗಣಗಳ ಸಂಪರ್ಕದಿಂದ ಈ ವೈರಸ್ ಹರಡುತ್ತದೆ. ಜ್ವರ, ಚಳಿ, ವಾಂತಿ ಮತ್ತು ಹೊಟ್ಟೆನೋವು ಇದರ ಲಕ್ಷಣಗಳಾಗಿದ್ದು, ಇದು ಉಸಿರಾಟದ ತೊಂದರೆಯನ್ನು ಉಂಟುಮಾಡಿ ಜೀವಕ್ಕೆ ಕಂಟಕವಾಗಬಹುದು.
ರೋಗಗಳಿಂದ ಬಚಾವಾಗಲು CDC ನೀಡಿದ ಪ್ರಮುಖ ಸಲಹೆಗಳು:
ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ಈ ರೋಗಗಳಿಂದ ದೂರವಿರಲು ಕೆಲವು ಮುನ್ನೆಚ್ಚರಿಕೆಗಳನ್ನು ವಹಿಸಲು ಸೂಚಿಸಿದೆ:
ಸಾಕುಪ್ರಾಣಿಗಳನ್ನು ಮುಟ್ಟಿದ ನಂತರ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಳ್ಳಿ ಅಥವಾ ಸ್ಯಾನಿಟೈಸರ್ ಬಳಸಿ.
ಬೀದಿಯ ಹಾಗೂ ಅಪರಿಚಿತ ಪ್ರಾಣಿಗಳಿಂದ ಸೂಕ್ತ ಅಂತರ ಕಾಯ್ದುಕೊಳ್ಳಿ ಮತ್ತು ನೇರ ಸಂಪರ್ಕವನ್ನು ತಪ್ಪಿಸಿ.
ಸೊಳ್ಳೆ, ನೊಣ ಹಾಗೂ ಇತರ ಕೀಟಗಳಿಂದ ಪ್ರಾಣಿಗಳನ್ನು ಮತ್ತು ನಿಮ್ಮನ್ನು ರಕ್ಷಿಸಿಕೊಳ್ಳಿ.
ಆಹಾರ ಮತ್ತು ಕುಡಿಯುವ ನೀರಿನ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ.
ಪ್ರಾಣಿಗಳಿಂದ ಬರುವ ಕಾಯಿಲೆಗಳ ಬಗ್ಗೆ ಸದಾ ಜಾಗೃತರಾಗಿರಿ.





















