ಬೆಂಗಳೂರು.ಜುಲೈ.05: ಬೆಳಗಾವಿ ಜಿಲ್ಲೆಯ ಪ್ರಭಾವಿ ನಾಯಕ ಸದಾಶಿವ ದೇಶಿಂಗೆ ಅವರು ಕಾಂಗ್ರೆಸ್ ತೊರೆದು ಅಧಿಕೃತವಾಗಿ ಬಿಜೆಪಿ ಸೇರಿದ್ದಾರೆ. ಕೆಎಂಎಫ್ ಮಾಜಿ ನಿರ್ದೇಶಕರಾಗಿರುವ ದೇಶಿಂಗೆ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರಲ್ಲದೆ, ಕುರುಬ ಸಮುದಾಯದ ಪ್ರಮುಖ ಮುಖಂಡರಾಗಿದ್ದಾರೆ. ಇವರ ಈ ನಡೆ ಗಡಿ ಜಿಲ್ಲೆಯ ರಾಜಕೀಯ ಸಮೀಕರಣಗಳಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಆಯೋಜನೆಗೊಂಡಿದ್ದ ವಿಶೇಷ ಕಾರ್ಯಕ್ರಮದಲ್ಲಿ ಸದಾಶಿವ ದೇಶಿಂಗೆ ಅವರಿಗೆ ಪಕ್ಷದ ಸಾಂಪ್ರದಾಯಿಕ ಬಾವುಟ ನೀಡಿ, ಹೆಗಲಿಗೆ ಕಂಬಳಿ ಹೊದೆಸುವ ಮೂಲಕ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆತ್ಮೀಯವಾಗಿ ಬರಮಾಡಿಕೊಂಡರು.
ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಖ್ಯಾತ ಉದ್ಯಮಿಗಳು ಹಾಗೂ ಹಾಲುಮತ ಸಮಾಜದ ಯುವ ಮುಖಂಡರಾದ ಶ್ರೀ ಸದಾಶೀವ ದೇಸಿಂಗೆ ಅವರು ಇಂದು ಬೆಂಗಳೂರಿನ ರಾಜ್ಯ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರ್ಪಡೆಗೊಂಡರು.
ರಾಜ್ಯ ಬಿಜೆಪಿ ಅಧ್ಯಕ್ಷರಾದ ಶ್ರೀ ವಿಜಯೇಂದ್ರ ಯಡಿಯೂರಪ್ಪನವರು ಸೇರಿದಂತೆ… pic.twitter.com/YKMb6DbHbR
— P Rajeev (@PRajeevBJP) July 5, 2026
ಈ ಮಹತ್ವದ ರಾಜಕೀಯ ಬೆಳವಣಿಗೆಯ ಸಂದರ್ಭದಲ್ಲಿ ಶಾಸಕರಾದ ಬೈರತಿ ಬಸವರಾಜು, ದುರ್ಯೋಧನ ಐಹೊಳೆ, ಬಸವರಾಜ ಮತ್ತಿಮಾಡು ಹಾಗೂ ಪಕ್ಷದ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್ ಸೇರಿದಂತೆ ಬಿಜೆಪಿಯ ಹಲವು ಹಿರಿಯ ಮುಖಂಡರು ಉಪಸ್ಥಿತರಿದ್ದು ಹೊಸ ನಾಯಕನನ್ನು ಸ್ವಾಗತಿಸಿದರು. ದೇಶಿಂಗೆ ಅವರ ಸೇರ್ಪಡೆಯು ಬೆಳಗಾವಿ ಭಾಗದಲ್ಲಿ ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂಬ ವಿಶ್ವಾಸವನ್ನು ಬಿಜೆಪಿ ನಾಯಕರು ವ್ಯಕ್ತಪಡಿಸಿದ್ದಾರೆ.


















