ಬೀದರ್.ಜುಲೈ.05 : ಬೀದರ್ ಜಿಲ್ಲೆಯಲ್ಲಿ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (SIR) ಕಾರ್ಯದಲ್ಲಿ ನಿರತರಾಗಿದ್ದ ಅಧಿಕಾರಿಯೊಬ್ಬರು ಕರ್ತವ್ಯದ ಅವಧಿಯಲ್ಲೇ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ತಾಲ್ಲೂಕಿನ ಅಮಲಾಪುರ ಗ್ರಾಮದ 33ನೇ ಬೂತ್ ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭಾಲ್ಕಿ ಮೂಲದ ಬಿಎಲ್ ಒ (BLO) ಸುನೀಲ್ (45) ಮೃತಪಟ್ಟ ದುರ್ದೈವಿ. ಕಳೆದ ಕೆಲವು ದಿನಗಳಿಂದ ಸತತವಾಗಿ ಸರ್ವೆ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಸುನೀಲ್ ಅವರಿಗೆ ಕೆಲಸದ ವೇಳೆಯೇ ಹಠಾತ್ ತೀವ್ರ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದಾರೆ.
ಕೂಡಲೇ ಅಲ್ಲಿದ್ದ ಸ್ಥಳೀಯರು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ್ದರು. ದುರದೃಷ್ಟವಶಾತ್, ಆಸ್ಪತ್ರೆಯಲ್ಲಿ ವೈದ್ಯರು ಸ್ಟಂಟ್ ಅಳವಡಿಸುವ ತುರ್ತು ಚಿಕಿತ್ಸೆ ನೀಡುತ್ತಿದ್ದ ಸಮಯದಲ್ಲೇ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

















