ದೆಹಲಿ: ಆಟೋ ಮತ್ತು ಈ-ರಿಕ್ಷಾ ಚಾಲಕರಿಗೆ ತಲೆನೋವಾಗಿದ್ದ ಮೂರು ಮೊಬೈಲ್ ಆ್ಯಪ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ಸೇರಿದಂತೆ ವಿವಿಧ ಆ್ಯಪ್ ಸ್ಟೋರ್ಗಳಿಂದ ತಕ್ಷಣವೇ ತೆಗೆದುಹಾಕಲು ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಬ್ಯಾಟರಿ ಚಾಲಿತ ಈ-ರಿಕ್ಷಾಗಳನ್ನು ಬ್ಲೂಟೂತ್ ಮೂಲಕ ರಿಮೋಟ್ ಆಗಿ ನಿಯಂತ್ರಿಸಿ, ಅವುಗಳು ಚಲಿಸದಂತೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಕೇಂದ್ರ ಮಾಹಿತಿ ತಂತ್ರಜ್ಞಾನ (IT) ಸಚಿವಾಲಯ ಈ ಕಠಿಣ ಕ್ರಮ ಕೈಗೊಂಡಿದೆ.
ಅಕ್ರಮ ಚಟುವಟಿಕೆಗಳಿಗೆ ಬಳಕೆಯಾಗುತ್ತಿದ್ದ ಆರೋಪ ಎದುರಿಸುತ್ತಿರುವ BAT-BMS, Lossigy ಮತ್ತು Epoch-i-ion ಎಂಬ ಮೂರು ಸ್ಮಾರ್ಟ್ಫೋನ್ ಆ್ಯಪ್ ಗಳನ್ನು ನಿಷೇಧಿಸಲಾಗಿದೆ. ದೆಹಲಿಯಲ್ಲಿ ಶುಕ್ರವಾರ ನಡೆದ ಸಿಐಐ (CII) ಸೈಬರ್ ಸೆಕ್ಯುರಿಟಿ ಶೃಂಗಸಭೆಯಲ್ಲಿ ಮಾತನಾಡಿದ ಕೇಂದ್ರ ಐಟಿ ಕಾರ್ಯದರ್ಶಿ ಎಸ್. ಕೃಷ್ಣನ್ ಅವರು, “ಈ ಗಂಭೀರ ವಿಷಯ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ ಎರಡು ಆ್ಯಪ್ಗಳನ್ನು ಆ್ಯಪ್ ಸ್ಟೋರ್ಗಳಿಂದ ತೆಗೆದುಹಾಕಲಾಗಿದೆ” ಎಂದು ತಿಳಿಸಿದರು. ತದನಂತರ ಒಟ್ಟು ಮೂರೂ ಆ್ಯಪ್ಗಳನ್ನು ಸಂಪೂರ್ಣವಾಗಿ ನಿಷೇಧಿಸಲು ಆದೇಶ ಜಾರಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
To also block other apps being misused: Govt sources after crackdown on three apps used to remotely disable e-rickshaws. pic.twitter.com/PjT4wmBfO4
— Press Trust of India (@PTI_News) July 3, 2026
ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವು ವಿಡಿಯೋಗಳು ತೀವ್ರ ವೈರಲ್ ಆಗಿದ್ದವು. ಅದರಲ್ಲಿ ಕೆಲವು ಕಿಡಿಗೇಡಿಗಳು ಬ್ಲೂಟೂತ್ ಮೂಲಕ ರಸ್ತೆಯಲ್ಲಿ ಹೋಗುತ್ತಿದ್ದ ಈ-ರಿಕ್ಷಾಗಳ ಬ್ಯಾಟರಿ ಮ್ಯಾನೇಜ್ಮೆಂಟ್ ಸಿಸ್ಟಮ್ (BMS) ಗೆ ಕನೆಕ್ಟ್ ಆಗಿ, ವಾಹನಗಳನ್ನು ರಿಮೋಟ್ ಆಗಿ ಆಫ್ ಮಾಡುತ್ತಿರುವುದು ಕಂಡುಬಂದಿತ್ತು. ಇದು ಇಂಟರ್ನೆಟ್ ಅಥವಾ ವೈರ್ಲೆಸ್ ತಂತ್ರಜ್ಞಾನ ಹೊಂದಿರುವ ಇವಿ (EV) ವಾಹನಗಳ ಸೈಬರ್ ಭದ್ರತೆಯ ಬಗ್ಗೆ ತೀವ್ರ ಆತಂಕ ಮೂಡಿಸಿತ್ತು.
ಈ ಘಟನೆಗಳ ಬೆನ್ನಲ್ಲೇ ಎಚ್ಚೆತ್ತಿರುವ ಕೇಂದ್ರ ಸರ್ಕಾರ, ಆ್ಯಪ್ ಸ್ಟೋರ್ಗಳು ಯಾವುದೇ ಆ್ಯಪ್ಗಳಿಗೆ ಅನುಮತಿ ನೀಡುವ ಮುನ್ನ ಕಟ್ಟುನಿಟ್ಟಿನ ಭದ್ರತಾ ತಪಾಸಣೆ ನಡೆಸಬೇಕು ಮತ್ತು ಸಾರ್ವಜನಿಕರಿಗೆ ಹಾನಿ ಮಾಡುವ ಆ್ಯಪ್ಗಳು ಲಭ್ಯವಿರದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದೆ.






















