Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ವೈದ್ಯರ ದಿನಾಚರಣೆ ವಿಶೇಷ : ಮೀನು ತಿಂದ ತಕ್ಷಣ ಹಾಲು ಕುಡಿದರೆ ಬಿಳಿ ತೊನ್ನು ಬರುತ್ತಾ? ವೈದ್ಯರು ಹೇಳುವ ನಿಜ ಸಂಗತಿಗಳಿವು!

---Advertisement---

ಚರ್ಮದ ಮೇಲೆ ಬಿಳಿ ಕಲೆಗಳು ಕಾಣಿಸಿಕೊಂಡು, ಕ್ರಮೇಣ ದೇಹದ ಇತರ ಭಾಗಗಳಿಗೆ ಹರಡುವ ಸ್ಥಿತಿಯನ್ನು ತೊನ್ನು ಎಂದು ಕರೆಯಲಾಗುತ್ತದೆ. ಇದು ಮುಖ್ಯವಾಗಿ ಮುಖ, ಕಣ್ಣುಗಳ ಸುತ್ತ, ತುಟಿಗಳ ಅಂಚು, ಕೈಗಳು, ಬೆರಳುಗಳು, ಮೊಣಕೈ, ಮೊಣಕಾಲು, ಪಾದಗಳು ಮತ್ತು ಜನನಾಂಗಗಳ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

ವಿಶ್ವದಾದ್ಯಂತ ಸುಮಾರು ಶೇಕಡಾ 0.5 ರಿಂದ 2 ರಷ್ಟು ಜನರು ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಅಂದಾಜಿಸಲಾಗಿದೆ. ಪುರುಷರಿಗಿಂತ ಮಹಿಳೆಯರಲ್ಲಿ ಈ ಸಮಸ್ಯೆ ಕೊಂಚ ಹೆಚ್ಚು ಎನ್ನಲಾಗುತ್ತಿದ್ದು, ಇದು ಯಾವುದೇ ವಯಸ್ಸಿನವರಲ್ಲಿಯೂ ಕಾಣಿಸಿಕೊಳ್ಳಬಹುದು. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾರಿಗಾದರೂ ಇದು ಬಾಧಿಸಬಹುದು. ಆದರೆ, ಈ ಕಾಯಿಲೆಗೆ ನಿಖರವಾದ ಒಂದೇ ಒಂದು ಕಾರಣ ಏನೆಂಬುದು ಇದುವರೆಗೆ ಸಾಬೀತಾಗಿಲ್ಲ. ಹಲವು ಜೈವಿಕ, ತಳಿಶಾಸ್ತ್ರ ಹಾಗೂ ಪರಿಸರದ ಅಂಶಗಳು ಒಟ್ಟಾಗಿ ಇದಕ್ಕೆ ಕಾರಣವಾಗುತ್ತವೆ ಎಂದು ನಂಬಲಾಗಿದೆ. ಜಗತ್ಪ್ರಸಿದ್ಧ ಪಾಪ್ ಗಾಯಕ ಮೈಕೆಲ್ ಜಾಕ್ಸನ್ ಕೂಡ ಇದೇ ವಿಟಿಲಿಗೋ ಕಾಯಿಲೆಯಿಂದ ಬಳಲುತ್ತಿದ್ದರು. ಈ ಕಲೆಗಳನ್ನು ಮರೆಮಾಚಲು ಅವರು ಯಾವಾಗಲೂ ಅತಿಯಾದ ಮೇಕಪ್ ಬಳಸುತ್ತಿದ್ದರು.
ಈ ಕಾಯಿಲೆ ಬರಲು ಪ್ರಮುಖ ಕಾರಣಗಳು
ನಮ್ಮ ದೇಹದ ರೋಗನಿರೋಧಕ ವ್ಯವಸ್ಥೆಯು ತಪ್ಪಾಗಿ ಚರ್ಮಕ್ಕೆ ಬಣ್ಣ ನೀಡುವ ಮೆಲನೋಸೈಟ್ಸ್ ಕಣಗಳನ್ನು ಶತ್ರುಗಳೆಂದು ಭಾವಿಸಿ ನಾಶಪಡಿಸುವುದರಿಂದ ವಿಟಿಲಿಗೋ ಬರುವ ಸಾಧ್ಯತೆ ಇರುತ್ತದೆ. ಇದನ್ನು ಆಟೋ ಇಮ್ಯೂನ್ ಸಮಸ್ಯೆ ಎನ್ನಲಾಗುತ್ತದೆ. ಹಾಗೆಯೇ ಕುಟುಂಬದಲ್ಲಿ ಯಾರಿಗಾದರೂ ಈ ಸಮಸ್ಯೆ ಇದ್ದರೆ, ಇತರ ಸದಸ್ಯರಿಗೂ ಬರುವ ಸಾಧ್ಯತೆ ಸ್ವಲ್ಪ ಹೆಚ್ಚಾಗಿರುತ್ತದೆ. ಇದರೊಂದಿಗೆ ಅತಿಯಾದ ಮಾನಸಿಕ ಒತ್ತಡ, ಆತಂಕ ಮತ್ತು ಭಾವನಾತ್ಮಕ ಏರುಪೇರುಗಳು ಕೆಲವರಲ್ಲಿ ಈ ಕಾಯಿಲೆ ಆರಂಭವಾಗಲು ಅಥವಾ ವೇಗವಾಗಿ ಹರಡಲು ಕಾರಣವಾಗಬಹುದು. ಕೆಲವು ನರ ರಾಸಾಯನಿಕಗಳು ಮೆಲನೋಸೈಟ್ಸ್ ಕಣಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಸಂಶೋಧನೆಗಳು ಹೇಳುತ್ತವೆ. ದೇಹದಲ್ಲಿ ಫ್ರೀ ರಾಡಿಕಲ್ಸ್ ಅತಿಯಾಗಿ ಉತ್ಪತ್ತಿಯಾಗುವ ಆಕ್ಸಿಡೇಟಿವ್ ಒತ್ತಡದಿಂದಲೂ ಚರ್ಮದ ಬಣ್ಣ ನಷ್ಟವಾಗಬಹುದು. ಇವುಗಳಲ್ಲದೆ ಚರ್ಮದ ಗಾಯಗಳು, ಸುಟ್ಟ ಗಾಯಗಳು, ರಾಸಾಯನಿಕಗಳ ಪ್ರಭಾವ, ಅತಿಯಾದ ಸೂರ್ಯನ ಬಿಸಿಲು ಹಾಗೂ ಥೈರಾಯ್ಡ್, ಟೈಪ್-1 ಮಧುಮೇಹ, ರುಮಟಾಯ್ಡ್ ಸಂಧಿವಾತದಂತಹ ಇತರ ಆಟೋ ಇಮ್ಯೂನ್ ಕಾಯಿಲೆಗಳೂ ಇದಕ್ಕೆ ಪೂರಕವಾಗಬಹುದು.

ಸಾಮಾಜಿಕವಾಗಿರುವ ಮೂಢನಂಬಿಕೆಗಳು ಮತ್ತು ನಿಜಾಂಶಗಳು
ಈ ಕಾಯಿಲೆಯ ಬಗ್ಗೆ ಸಮಾಜದಲ್ಲಿ ಹಲವು ತಪ್ಪು ಕಲ್ಪನೆಗಳಿವೆ. ಅದರಲ್ಲಿ ಮೊದಲನೆಯದಾಗಿ, ಇದು ಸಾಂಕ್ರಾಮಿಕ ರೋಗವಲ್ಲ. ಒಬ್ಬರನ್ನು ಮುಟ್ಟುವುದರಿಂದ, ಜೊತೆಯಾಗಿ ಊಟ ಮಾಡುವುದರಿಂದ, ಬಟ್ಟೆಗಳನ್ನು ಹಂಚಿಕೊಳ್ಳುವುದರಿಂದ ಅಥವಾ ರಕ್ತದ ಮೂಲಕ ಇದು ಮತ್ತೊಬ್ಬರಿಗೆ ಹರಡುವುದಿಲ್ಲ.
ಎರಡನೆಯದಾಗಿ, ಇದು ಯಾವುದೇ ಪೂರ್ವಜನ್ಮದ ಕರ್ಮದ ಫಲ ಅಥವಾ ಶಾಪವಲ್ಲ, ಇದೊಂದು ಕೇವಲ ವೈದ್ಯಕೀಯ ಚರ್ಮದ ಸಮಸ್ಯೆಯಾಗಿದೆ. ಮೂರನೆಯದಾಗಿ, ಮೀನು ತಿಂದ ತಕ್ಷಣ ಹಾಲು ಕುಡಿದರೆ ಈ ಕಾಯಿಲೆ ಬರುತ್ತದೆ ಎಂಬ ನಂಬಿಕೆಗೆ ಯಾವುದೇ ವೈಜ್ಞಾನಿಕ ಆಧಾರಗಳಿಲ್ಲ. ಇವೆರಡನ್ನೂ ಒಟ್ಟಿಗೆ ಸೇವಿಸುವುದರಿಂದ ವಿಟಿಲಿಗೋ ಬರುತ್ತದೆ ಎಂದು ಯಾವುದೇ ಸಂಶೋಧನೆಗಳು ನಿರೂಪಿಸಿಲ್ಲ. ಕೊನೆಯದಾಗಿ, ಇದು ಕ್ಯಾನ್ಸರ್ ನಂತಹ ಪ್ರಾಣಾಂತಿಕ ಕಾಯಿಲೆಯಲ್ಲ ಮತ್ತು ದೇಹದ ಇತರ ಒಳಗಿನ ಅಂಗಾಗಗಳಿಗೆ ಯಾವುದೇ ನೇರ ಹಾನಿ ಉಂಟುಮಾಡುವುದಿಲ್ಲ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಲಭ್ಯವಿರುವ ಔಷಧಗಳು ಮತ್ತು ಫೋಟೋಥೆರಪಿಯಂತಹ ಚಿಕಿತ್ಸೆಗಳ ಮೂಲಕ ಇದನ್ನು ಯಶಸ್ವಿಯಾಗಿ ನಿಯಂತ್ರಿಸಬಹುದು. ಆದ್ದರಿಂದ, ರೋಗಿಗಳು ಸಾಮಾಜಿಕ ತಾರತಮ್ಯ ಹಾಗೂ ಒತ್ತಡಕ್ಕೆ ಒಳಗಾಗದೆ, ಸೂಕ್ತ ವೈದ್ಯಕೀಯ ಸಲಹೆ ಮತ್ತು ಕುಟುಂಬದ ಬೆಂಬಲದೊಂದಿಗೆ ಸಾಮಾನ್ಯ ಜೀವನವನ್ನು ನಡೆಸಬಹುದು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now