ಸುದ್ದಿಒನ್, ಬೆಂಗಳೂರು, ಜುಲೈ. 01 : “ವೈದ್ಯೋ ನಾರಾಯಣ ಹರಿ” ಎಂದರೆ ವೈದ್ಯರು ದೇವರೊಂದಿಗೆ ಸಮಾನರು ಎಂದರ್ಥ. ಇದು ನೂರಕ್ಕೆ ನೂರು ಸತ್ಯವಾದ ಮಾತು. ಪ್ರತಿಯೊಬ್ಬರಿಗೂ ಆರೋಗ್ಯವೇ ಮಹಾಭಾಗ್ಯ. ಅನಾರೋಗ್ಯಕ್ಕೆ ಒಳಗಾದವರನ್ನು ಮರಳಿ ಆರೋಗ್ಯವಂತರನ್ನಾಗಿ ಮಾಡುವುದು ವೈದ್ಯರ ಪರಮ ಕರ್ತವ್ಯ. ಎಂತಹ ಭೀಕರ ಕಾಯಿಲೆಗಳಿಂದಲೂ ಜನರನ್ನು ಹೊರತಂದು ಪ್ರಾಣ ಉಳಿಸುವ, ಸಾವಿನ ಅಂಚಿಗೆ ಸರಿದವರನ್ನು ಮರಳಿ ಬದುಕಿಸುವ ವೈದ್ಯರು ನಿಜಕ್ಕೂ ಭೂಮಿಯ ಮೇಲಿನ ನಡೆದಾಡುವ ದೇವರೆಂದರೆ ತಪ್ಪಾಗಲಾರದು. ಜುಲೈ 1 ರಂದು ಆಚರಿಸಲಾಗುವ ‘ರಾಷ್ಟ್ರೀಯ ವೈದ್ಯರ ದಿನ’ದ (National Doctors’ Day) ಹಿನ್ನೆಲೆಯಲ್ಲಿ ಕೆಲವು ಪ್ರಮುಖ ವಿಷಯಗಳನ್ನು ಇಲ್ಲಿ ತಿಳಿಯೋಣ.
ವೈದ್ಯರು ನಮಗೆ ಮರುಜನ್ಮ ನೀಡುವ ರಕ್ಷಕರು
ತಾಯಿ ನಮಗೆ ಜನ್ಮ ನೀಡಿದರೆ, ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾದಾಗ ನಮ್ಮನ್ನು ಕಾಪಾಡಿ ವೈದ್ಯರು ಮರುಜನ್ಮ ನೀಡುತ್ತಾರೆ. ಅದಕ್ಕಾಗಿಯೇ ನಮ್ಮ ಜೀವನದಲ್ಲಿ ವೈದ್ಯರ ಪಾತ್ರ ಅತ್ಯಂತ ಪ್ರಮುಖವಾಗಿದೆ. ಸಣ್ಣ ಜ್ವರದಿಂದ ಹಿಡಿದು ಅಪಘಾತ, ತುರ್ತು ಪರಿಸ್ಥಿತಿಗಳವರೆಗೆ ಯಾವುದೇ ಆರೋಗ್ಯ ಸಮಸ್ಯೆ ಎದುರಾದರೂ ನಾವು ಮೊದಲು ಓಡುವುದು ವೈದ್ಯರ ಬಳಿಗೇ. ಸಮಾಜದಲ್ಲಿ ಅವರಿಗೆ ಅತ್ಯುನ್ನತ ಗೌರವ ಇರುವುದಕ್ಕೆ ಅವರ ನಿಸ್ವಾರ್ಥ ಸೇವೆಯೇ ಕಾರಣ.
ಕೊರೊನಾದಂತಹ ಜಾಗತಿಕ ಸಾಂಕ್ರಾಮಿಕ ರೋಗದ ಕಠಿಣ ಪರಿಸ್ಥಿತಿಯಲ್ಲಿ ವೈದ್ಯರ ಸೇವೆ ಮರೆಯಲಾಗದ್ದು. ತಮ್ಮ ಪ್ರಾಣವನ್ನೂ ಲೆಕ್ಕಿಸದೆ ಹಗಲಿರುಳು ಶ್ರಮಿಸಿ ಲಕ್ಷಾಂತರ ರೋಗಿಗಳ ಪ್ರಾಣ ಉಳಿಸಿದರು. ಸಾಮಾನ್ಯವಾಗಿ ರೋಗ ವಾಸಿಯಾಗಲು ಔಷಧಗಳು ಬೇಕು, ಆದರೆ ಆ ಕಾಯಿಲೆಯಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ವೈದ್ಯರ ಸಹಕಾರ ಮತ್ತು ಅವರು ನೀಡುವ ಧೈರ್ಯ ಅತಿ ಮುಖ್ಯ. ವೈದ್ಯರ ಆ ಪ್ರೀತಿಯ ಮಾತುಗಳೇ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಿ ಬೇಗ ಗುಣಮುಖರಾಗುವಂತೆ ಮಾಡುತ್ತದೆ.
ವೈದ್ಯರ ಬಳಿ ಸುಳ್ಳು ಹೇಳಬೇಡಿ!
ನಾವು ಅನಾರೋಗ್ಯದಿಂದ ಬಳಲುತ್ತಿರುವಾಗ ಮಾನಸಿಕವಾಗಿಯೂ ಕುಗ್ಗಿಹೋಗುತ್ತೇವೆ. ಅಂತಹ ಸಮಯದಲ್ಲಿ ವೈದ್ಯರು ನಮಗೆ ಧೈರ್ಯ ತುಂಬಿ ಆ ಸಮಸ್ಯೆಯಿಂದ ಹೊರಬರುವಂತೆ ಮಾಡುತ್ತಾರೆ. ಇದಕ್ಕಾಗಿ ನಾವು ಮೊದಲು ಮಾಡಬೇಕಾದ ಕೆಲಸವೆಂದರೆ, ನಮ್ಮ ಸಮಸ್ಯೆ ಏನೆಂಬುದನ್ನು ವೈದ್ಯರಿಗೆ ಸಂಪೂರ್ಣವಾಗಿ ವಿವರಿಸಬೇಕು. ಮುಖ್ಯವಾಗಿ, ವೈದ್ಯರ ಬಳಿ ಎಂದಿಗೂ ಯಾವುದೇ ಆರೋಗ್ಯ ವಿಷಯವನ್ನು ಮುಚ್ಚಿಡಬಾರದು ಅಥವಾ ಸುಳ್ಳು ಹೇಳಬಾರದು. ಹಾಗೆ ಮಾಡಿದರೆ ನಮ್ಮ ಅನಾರೋಗ್ಯವನ್ನು ನಾವೇ ಇನ್ನಷ್ಟು ದೊಡ್ಡದು ಮಾಡಿಕೊಂಡಂತಾಗುತ್ತದೆ. ನಮ್ಮ ದೇಹದ ಸ್ಥಿತಿಯನ್ನು ಸರಿಯಾಗಿ ಹೇಳಿದಾಗ ಮಾತ್ರ ಅವರು ಸೂಕ್ತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
ಇನ್ನು ಇಂದಿನ ದಿನಗಳಲ್ಲೂ ಎಷ್ಟೋ ವೈದ್ಯರು ಉನ್ನತ ಶಿಕ್ಷಣ ಪಡೆದಿದ್ದರೂ, ಹಣದ ಆಸೆ ಇಲ್ಲದೆ ಬಡವರಿಗೆ ಉಚಿತವಾಗಿ ವೈದ್ಯಕೀಯ ಸೇವೆ ನೀಡುತ್ತಿದ್ದಾರೆ. ಇಂತಹ ವೈದ್ಯರೆಲ್ಲರೂ ಮಾನವ ರೂಪದಲ್ಲಿರುವ ದೇವರೆ ಸರಿ.
ವೈದ್ಯರ ದಿನವನ್ನು ಏಕೆ ಆಚರಿಸಲಾಗುತ್ತದೆ?
ಭಾರತದಲ್ಲಿ ಪ್ರತಿ ವರ್ಷ ಜುಲೈ 1 ರಂದು ‘ರಾಷ್ಟ್ರೀಯ ವೈದ್ಯರ ದಿನ’ವನ್ನು ಆಚರಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ 1991 ರಲ್ಲಿ ಪ್ರಾರಂಭಿಸಲಾಯಿತು. ಅಂದಿನಿಂದ ಪ್ರತಿ ವರ್ಷ ಈ ವಿಶೇಷ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ಇದರ ಹಿನ್ನೆಲೆಯನ್ನು ನೋಡುವುದಾದರೆ, ಪಶ್ಚಿಮ ಬಂಗಾಳದ ಎರಡನೇ ಮುಖ್ಯಮಂತ್ರಿಯಾಗಿದ್ದ ಪ್ರಸಿದ್ಧ ವೈದ್ಯ ಡಾ. ಬಿಧನ್ ಚಂದ್ರ ರಾಯ್ (Dr. Bidhan Chandra Roy) ಅವರ ಗೌರವಾನ್ವಿತ ನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇವರು 1882 ರ ಜುಲೈ 1 ರಂದು ಜನಿಸಿ, ಭಗವಂತನ ಪವಾಡ ಎಂಬಂತೆ 1962 ರ ಜುಲೈ 1 ರಂದೇ ನಿಧನರಾದರು.
ಡಾ. ಬಿಧನ್ ಚಂದ್ರ ರಾಯ್ ಅವರು ತಮ್ಮ ವೈದ್ಯಕೀಯ ಸೇವೆಯ ಅವಧಿಯಲ್ಲಿ ಅಸಂಖ್ಯಾತ ಬಡವರಿಗೆ ಉಚಿತವಾಗಿ ಚಿಕಿತ್ಸೆ ನೀಡಿದ್ದರು. ವೈದ್ಯಕೀಯ ಕ್ಷೇತ್ರ ಮತ್ತು ಸಮಾಜಕ್ಕೆ ಅವರು ನೀಡಿದ ನಿಸ್ವಾರ್ಥ ಕೊಡುಗೆಯನ್ನು ಪರಿಗಣಿಸಿ ಅವರಿಗೆ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಭಾರತ ರತ್ನ’ ನೀಡಿ ಗೌರವಿಸಲಾಗಿದೆ. ಅವರ ಜನ್ಮದಿನ ಮತ್ತು ಪುಣ್ಯತಿಥಿಯ ಸವಿನೆನಪಿನಲ್ಲಿಯೇ ಭಾರತದಲ್ಲಿ ಜುಲೈ 1 ರಂದು ವೈದ್ಯರ ದಿನವನ್ನು ಆಚರಿಸಿ, ಸಮಾಜದ ಎಲ್ಲಾ ವೈದ್ಯರಿಗೆ ಕೃತಜ್ಞತೆ ಸಲ್ಲಿಸಲಾಗುತ್ತದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












