ಸುದ್ದಿಒನ್, ಚಿತ್ರದುರ್ಗ, ಜೂನ್. 25 : ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಲಕ್ಕಿಹಳ್ಳಿ ಗ್ರಾಮದಲ್ಲಿ ಎಂಟು ವರ್ಷಗಳ ಹಿಂದೆ ದೇವಸ್ಥಾನದ ವಿಚಾರವಾಗಿ ನಡೆದಿದ್ದ ಎರಡು ಗುಂಪುಗಳ ನಡುವಿನ ದೊಂಬಿ ಮತ್ತು ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಒಟ್ಟು 68 ಆರೋಪಿಗಳಿಗೆ ಚಿತ್ರದುರ್ಗದ ನ್ಯಾಯಾಲಯವು ದಂಡ ಹಾಗೂ ಜೈಲು ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ.
2018 ರಲ್ಲಿ ಲಕ್ಕಿಹಳ್ಳಿ ಗ್ರಾಮದ ದೇವಸ್ಥಾನದ ದೇವರನ್ನು ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಕೊಂಡೊಯ್ಯುವ ವಿಚಾರದಲ್ಲಿ ಎರಡು ಪಂಗಡಗಳ ನಡುವೆ ತೀವ್ರ ಘರ್ಷಣೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಹೊಸದುರ್ಗ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ದೂರು-ಪ್ರತಿದೂರುಗಳು (ಮೊಕದ್ದಮೆ ಸಂಖ್ಯೆ: 471/2018 ಮತ್ತು 472/2018) ದಾಖಲಾಗಿದ್ದವು. ಅಂದಿನ ಹಿರಿಯೂರು ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರಾಗಿದ್ದ ಸೈಯದ್ ರೋಷನ್ ಜಮೀರ್ ಅವರು ಪ್ರಕರಣದ ತನಿಖೆ ನಡೆಸಿ, ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.


ಚಿತ್ರದುರ್ಗದ ಮಾನ್ಯ 2ನೇ ಜಿಲ್ಲಾ ಸತ್ರ ನ್ಯಾಯಾಲಯದಲ್ಲಿ ಈ ಪ್ರಕರಣಗಳ ಸುದೀರ್ಘ ವಿಚಾರಣೆ ನಡೆಯಿತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ನಾಗವೇಣಿ ಮತ್ತು ಶಂಷೀರ್ ಆಲಿಖಾನ್ ಅವರು ಬಲವಾದ ವಾದ ಮಂಡಿಸಿದ್ದರು. ಉಭಯ ಪೀಠಗಳ ವಾದ-ವಿವಾದ ಆಲಿಸಿದ ಮಾನ್ಯ ನ್ಯಾಯಾಧೀಶರಾದ ಗಂಗಾಧರ ಚನ್ನಬಸಪ್ಪ ಹಡಪದ ಅವರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೂನ್ 24, 2026 ರಂದು ಕಟ್ಟುನಿಟ್ಟಿನ ಆದೇಶ ಪ್ರಕಟಿಸಿದ್ದಾರೆ.
ಪ್ರಕರಣ (ಮೊ.ನಂ: 471/2018)ದಲ್ಲಿ ಈ ಮೊಕದ್ದಮೆಯಲ್ಲಿನ 31 ಜನ ಆರೋಪಿಗಳಿಗೆ ತಲಾ 5,000 ರೂಪಾಯಿ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ತಪ್ಪಿದಲ್ಲಿ 2 ವರ್ಷಗಳ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.
ಪ್ರಕರಣ (ಮೊ.ನಂ: 472/2018)ದಲ್ಲಿ ಈ ಪ್ರತಿಯಾಗಿ ದಾಖಲಾಗಿದ್ದ ಮೊಕದ್ದಮೆಯ 37 ಜನ ಆರೋಪಿಗಳಿಗೆ ತಲಾ 4,000 ರೂಪಾಯಿ ದಂಡ ವಿಧಿಸಲಾಗಿದ್ದು, ದಂಡ ಕಟ್ಟದಿದ್ದರೆ 2 ವರ್ಷಗಳ ಕಾರಾಗೃಹ ವಾಸದ ಶಿಕ್ಷೆ ಪ್ರಕಟಿಸಲಾಗಿದೆ.
ಪ್ರಕರಣದ ತನಿಖೆಯನ್ನು ಅತ್ಯಂತ ನಿಷ್ಠೆಯಿಂದ ನಡೆಸಿ, ಆರೋಪಿಗಳಿಗೆ ಶಿಕ್ಷೆಯಾಗುವಂತೆ ಶ್ರಮಿಸಿದ ಅಂದಿನ ತನಿಖಾಧಿಕಾರಿ ಸೈಯದ್ ರೋಷನ್ ಜಮೀರ್, ಅವರ ತನಿಖಾ ಸಹಾಯಕ ಸಿಬ್ಬಂದಿ, ಕೋರ್ಟ್ ಸಿಬ್ಬಂದಿ ಹಾಗೂ ಕೋರ್ಟ್ ಮಾನಿಟರಿಂಗ್ ಸೆಲ್ ವಿಭಾಗದ ಕಾರ್ಯಕ್ಷಮತೆಯನ್ನು ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು (ಐ.ಪಿ.ಎಸ್) ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಡಾ. ಶಿವಕುಮಾರ್.ಆರ್ (ಕೆ.ಎಸ್.ಪಿ.ಎಸ್) ಅವರು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.











