ದೆಹಲಿ.ಜೂನ್.23: ನೀಟ್ ಮರುಪರೀಕ್ಷೆಯ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಧಿಸಿದ್ದ ತಾತ್ಕಾಲಿಕ ನಿಷೇಧದ ಅವಧಿ ಮುಕ್ತಾಯಗೊಂಡಿದ್ದರೂ, ಭಾರತದಾದ್ಯಂತ ಹಲವು ಬಳಕೆದಾರರು ಇಂದಿಗೂ ಟೆಲಿಗ್ರಾಂ ಆ್ಯಪ್ ಬಳಸಲು ತೊಂದರೆ ಅನುಭವಿಸುತ್ತಿದ್ದಾರೆ. ಲಾಗಿನ್ ಆಗಲು ಮತ್ತು ಮೆಸೇಜ್ಗಳನ್ನು ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅನೇಕರು ದೂರಿದ್ದಾರೆ.
ಪರೀಕ್ಷಾ ಭದ್ರತೆಯ ಮುನ್ನೆಚ್ಚರಿಕಾ ಕ್ರಮವಾಗಿ ಮಾಹಿತಿ ತಂತ್ರಜ್ಞಾನ (IT) ಕಾಯ್ದೆ 2000 ರ ಸೆಕ್ಷನ್ 69A ಅಡಿಯಲ್ಲಿ ಟೆಲಿಗ್ರಾಂ ಅನ್ನು ದೇಶಾದ್ಯಂತ ನಿಷೇಧಿಸಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಈ ನಿರ್ಬಂಧದ ಅವಧಿಯು ಜೂನ್ 22 ಕ್ಕೆ ಅಧಿಕೃತವಾಗಿ ಕೊನೆಗೊಂಡಿದ್ದರೂ, ಆ್ಯಪ್ ಇನ್ನೂ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವರದಿಯಾಗಿದೆ.
ಟೆಲಿಗ್ರಾಂ ನಿಷೇಧಕ್ಕೆ ಕಾರಣವೇನು?
ಮೇ 3 ರಂದು ನಡೆದಿದ್ದ ಮೂಲ NEET-UG ಪರೀಕ್ಷೆಯಲ್ಲಿ ಅಕ್ರಮಗಳು ಮತ್ತು ಪ್ರಶ್ನೆಪತ್ರಿಕೆ ಸೋರಿಕೆ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಜೂನ್ 21 ರಂದು ಮರುಪರೀಕ್ಷೆ ನಡೆಸಲು ತೀರ್ಮಾನಿಸಲಾಗಿತ್ತು. ಈ ಮರುಪರೀಕ್ಷೆಯ ಸಂದರ್ಭದಲ್ಲಿ ಯಾವುದೇ ಅಕ್ರಮಗಳು ನಡೆಯದಂತೆ ತಡೆಯಲು ಜೂನ್ 16 ರಿಂದ ಜೂನ್ 22 ರವರೆಗೆ ಟೆಲಿಗ್ರಾಂ ಮತ್ತು ಅದಕ್ಕೆ ಸಂಬಂಧಿಸಿದ ಯುಆರ್ಎಲ್ಗಳನ್ನು (URLs) ಬ್ಲಾಕ್ ಮಾಡಲು ಸರ್ಕಾರ ಮಧ್ಯಂತರ ಆದೇಶ ಹೊರಡಿಸಿತ್ತು.
ಜೂನ್ 22 ರವರೆಗೆ ಆ್ಯಪ್ ಬಳಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು.ಲೀಕ್ ಆದ ವಿಷಯಗಳ ಪುರಾವೆಗಳನ್ನು ಬಳಕೆದಾರರು ಬದಲಾಯಿಸದಂತೆ ಅಥವಾ ಅಳಿಸದಂತೆ ತಡೆಯಲು, ಜೂನ್ 30 ರವರೆಗೆ ಮೆಸೇಜ್ ಎಡಿಟ್ ಮಾಡುವ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲು ಸರ್ಕಾರ ಟೆಲಿಗ್ರಾಂಗೆ ಸೂಚಿಸಿದೆ.
ಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ, ಕೆಲವು ಟೆಲಿಗ್ರಾಂ ಚಾನೆಲ್ಗಳು ನಕಲಿ ಪ್ರಶ್ನೆಪತ್ರಿಕೆಗಳನ್ನು ಬರೋಬ್ಬರಿ 10 ಲಕ್ಷ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದರು. ಜೂನ್ 19 ರಂದು ದೆಹಲಿ ಹೈಕೋರ್ಟ್ ಕೂಡ ಸರ್ಕಾರದ ಈ ಕ್ರಮವನ್ನು ಎತ್ತಿಹಿಡಿದು, ಲಕ್ಷಾಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಈ ನಿರ್ಬಂಧ ಅಗತ್ಯವಾಗಿತ್ತು ಎಂದು ಅಭಿಪ್ರಾಯಪಟ್ಟಿತ್ತು.
ಅಧಿಕೃತ ನಿಷೇಧದ ಅವಧಿ ಮುಗಿದಿದ್ದರೂ ಬಳಕೆದಾರರಲ್ಲಿ ಗೊಂದಲ ಮುಂದುವರಿದಿದೆ.ಕೆಲವು ಬಳಕೆದಾರರಿಗೆ ಟೆಲಿಗ್ರಾಂ ಎಂದಿನಂತೆ ಕೆಲಸ ಮಾಡುತ್ತಿದೆ. ಇನ್ನೂ ಕೆಲವರಿಗೆ ಆ್ಯಪ್ ಓಪನ್ ಆಗುತ್ತಿಲ್ಲ ಅಥವಾ ಸಂದೇಶಗಳು ಸೆಂಡ್ ಆಗುತ್ತಿಲ್ಲ. ಪ್ರಮುಖವಾಗಿ, ಭಾರತದ ಆಪಲ್ ಆಪ್ ಸ್ಟೋರ್ನಲ್ಲಿ (App Store) ಟೆಲಿಗ್ರಾಂ ಆ್ಯಪ್ ಇನ್ನೂ ಕಾಣಿಸುತ್ತಿಲ್ಲ ಎಂದು ಹಲವು ಐಫೋನ್ ಬಳಕೆದಾರರು ವರದಿ ಮಾಡಿದ್ದಾರೆ.
ಐಟಿ ಇಲಾಖೆಯ ಅಧಿಕಾರಿಯೊಬ್ಬರ ಪ್ರಕಾರ, ಸರ್ಕಾರವು ನಿಷೇಧವನ್ನು ವಿಸ್ತರಿಸುವ ಯಾವುದೇ ಯೋಜನೆಯನ್ನು ಹೊಂದಿಲ್ಲ. ಪ್ರಸ್ತುತ ಎದುರಾಗಿರುವ ಸಮಸ್ಯೆಯು ಹಂತ-ಹಂತವಾಗಿ ಆ್ಯಪ್ ಅನ್ನು ಮರುಸ್ಥಾಪಿಸುವ (Phased Restoration) ಪ್ರಕ್ರಿಯೆಯಿಂದಾಗಿ ಆಗಿರಬಹುದು ಎಂದು ತಿಳಿಸಿದ್ದಾರೆ. ಸದ್ಯಕ್ಕೆ ದೇಶಾದ್ಯಂತ ಸಂಪೂರ್ಣವಾಗಿ ಸೇವೆ ಮರುಸ್ಥಾಪನೆಯಾಗಿರುವ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ. ಭದ್ರತಾ ಕಾರಣಗಳಿಗಾಗಿ ದೇಶದ ವಿವಿಧೆಡೆ ಹಂತ ಹಂತವಾಗಿ ಟೆಲಿಗ್ರಾಂ ಸೇವೆಗಳು ಲಭ್ಯವಾಗುತ್ತಿದ್ದು, ಶೀಘ್ರದಲ್ಲೇ ಇದು ಸಂಪೂರ್ಣವಾಗಿ ಸರಿಹೋಗುವ ನಿರೀಕ್ಷೆಯಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













