ರೈತ ಸಮುದಾಯದ ಪಾಲಿಗೆ ಅದೃಷ್ಟದ ಮಳೆಯೆಂದೇ ಪರಿಗಣಿಸಲ್ಪಡುವ ಆರಿದ್ರಾ ನಕ್ಷತ್ರದ ಮಳೆ ಜೂನ್ 23ರಿಂದ ಆರಂಭವಾಗಲಿದ್ದು, ರಾಜ್ಯದ ಅನ್ನದಾತರು ಭಾರೀ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಮಳೆಯ ಕೊರತೆಯಿಂದ ಕಂಗಾಲಾಗಿರುವ ರೈತರಿಗೆ ಆರಿದ್ರಾ ಮಳೆಯೇ ಆಸರೆಯಾಗಿದ್ದು, ಈ ಮಳೆಯೂ ಕೈಕೊಟ್ಟರೆ ರಾಜ್ಯದಲ್ಲಿ ಜಲಕ್ಷಾಮ ಹಾಗೂ ಬರಗಾಲದ ಆತಂಕ ಮತ್ತಷ್ಟು ಹೆಚ್ಚಲಿದೆ.
ಜೂನ್ ಆರಂಭದಲ್ಲಿ ಮುಂಗಾರು ಚುರುಕುಗೊಂಡಿದ್ದರೂ, ನಂತರದ ದಿನಗಳಲ್ಲಿ ಮಳೆ ಗಣನೀಯವಾಗಿ ಕುಂಠಿತಗೊಂಡಿದೆ. ಹಲವು ಜಿಲ್ಲೆಗಳಲ್ಲಿ ರೈತರು ಬಿತ್ತನೆ ಕಾರ್ಯ ಪೂರ್ಣಗೊಳಿಸಿದ್ದರೂ, ಬೆಳೆಗಳ ಬೆಳವಣಿಗೆಗೆ ಅಗತ್ಯವಾದ ಮಳೆಯಿಲ್ಲದೆ ಸಂಕಷ್ಟ ಎದುರಿಸುತ್ತಿದ್ದಾರೆ.
ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ಪ್ರಕಾರ, ಜೂನ್ ತಿಂಗಳಲ್ಲಿ ರಾಜ್ಯಾದ್ಯಂತ ವಾಡಿಕೆಯ ಮಳೆಯೊಂದಿಗೆ ಹೋಲಿಸಿದರೆ ಶೇ.35ರಷ್ಟು ಮಳೆ ಕೊರತೆ ದಾಖಲಾಗಿದೆ. ಮಲೆನಾಡು ಪ್ರದೇಶದಲ್ಲಿ ಶೇ.50 ಹಾಗೂ ಕರಾವಳಿ ಭಾಗದಲ್ಲಿ ಶೇ.54ರಷ್ಟು ಮಳೆ ಕೊರತೆಯಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಹಾಗೂ ಬೀದರ್ ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿದೆ.

ಇದರ ಪರಿಣಾಮವಾಗಿ ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹ ಪ್ರಮಾಣ ಕೇವಲ ಶೇ.23ಕ್ಕೆ ಕುಸಿದಿದ್ದು, ಕೃಷಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಭೀತಿ ವ್ಯಕ್ತವಾಗಿದೆ.
ಗ್ರಾಮೀಣ ಭಾಗದಲ್ಲಿ “ಆರಿದ್ರಾ ಮಳೆ ಬಾರದಿದ್ದರೆ ಧರೆತುಂಬಾ ದರಿದ್ರ” ಎಂಬ ಗಾದೆ ಮಾತಿದೆ. ಏಕೆಂದರೆ ಮುಂಗಾರು ಹಂಗಾಮಿನ ಭತ್ತ, ರಾಗಿ, ಜೋಳ, ತೊಗರಿ, ಹೆಸರು ಸೇರಿದಂತೆ ಹಲವು ಪ್ರಮುಖ ಬೆಳೆಗಳ ಬಿತ್ತನೆ ಮತ್ತು ಬೆಳವಣಿಗೆಗೆ ಈ ಮಳೆ ಅತ್ಯಂತ ಅವಶ್ಯಕವಾಗಿದೆ. ಮಳೆ ಕೈಕೊಟ್ಟರೆ ಮರುಬಿತ್ತನೆ ಅನಿವಾರ್ಯವಾಗಿ ರೈತರ ವೆಚ್ಚ ಹೆಚ್ಚಳವಾಗಲಿದೆ.
ಇದೇ ವೇಳೆ, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಿಗೆ ನೀರುಣಿಸುವ ಕೆಆರ್‌ಎಸ್, ತುಂಗಭದ್ರಾ, ಹೇಮಾವತಿ, ಹಾರಂಗಿ ಮತ್ತು ಆಲಮಟ್ಟಿ ಜಲಾಶಯಗಳಲ್ಲೂ ನೀರಿನ ಮಟ್ಟ ಕುಸಿಯುತ್ತಿರುವುದು ಮತ್ತಷ್ಟು ಕಳವಳ ಮೂಡಿಸಿದೆ.
ಆದರೆ ಭಾರತೀಯ ಹವಾಮಾನ ಇಲಾಖೆ (IMD) ಕೊಂಚ ಸಮಾಧಾನಕರ ಮುನ್ಸೂಚನೆ ನೀಡಿದ್ದು, ಮುಂಗಾರು ಮಾರುತಗಳು ಮತ್ತೆ ಚುರುಕುಗೊಳ್ಳುತ್ತಿವೆ ಎಂದು ತಿಳಿಸಿದೆ. ಜೂನ್ 26ರವರೆಗೆ ಕರಾವಳಿ ಕರ್ನಾಟಕದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯ ಸಾಧ್ಯತೆ ಇದ್ದು, ಹಳದಿ ಅಲರ್ಟ್ ಘೋಷಿಸಲಾಗಿದೆ. ನಾಳೆಯಿಂದ ಆರಂಭವಾಗಲಿರುವ ಆರಿದ್ರಾ ಮಳೆಯ ಮೇಲೆ ರಾಜ್ಯದ ರೈತ ಸಮುದಾಯದ ಭವಿಷ್ಯವೇ ನಿಂತಿದ್ದು, ಈ ಮಳೆ ಸಮೃದ್ಧಿಯಾಗಿ ಸುರಿಯಲೆಂದು ಅನ್ನದಾತರು ಎದುರು ನೋಡುತ್ತಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













