Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಚಿಕೂನ್‌ಗುನ್ಯಾ ವಿರುದ್ಧ ಹೋರಾಡಲು ಗೋಮೂತ್ರದಲ್ಲಿದೆ ಸಾಮಾರ್ಥ್ಯ; IIT ರೂರ್ಕಿ ಅಧ್ಯಯನದಲ್ಲಿ ಅಚ್ಚರಿ ಫಲಿತಾಂಶ!

---Advertisement---

ದೆಹಲಿ.ಜೂನ್.22 : ಪ್ರಸ್ತುತ ಜಗತ್ತಿಗೆ ದೊಡ್ಡ ಸವಾಲಾಗಿ ಪರಿಣಮಿಸಿರುವ, ಸೊಳ್ಳೆಗಳಿಂದ ಹರಡುವ ವೈರಲ್ ಕಾಯಿಲೆಯಾದ ‘ಚಿಕೂನ್‌ಗುನ್ಯಾ’ ನಿಯಂತ್ರಣಕ್ಕೆ ಭಾರತೀಯ ತಂತ್ರಜ್ಞಾನ ಸಂಸ್ಥೆ ರೂರ್ಕಿ (IIT Roorkee) ಸಂಶೋಧಕರು ಆಶಾದಾಯಕ ಪರಿಹಾರವೊಂದನ್ನು ಕಂಡುಕೊಂಡಿದ್ದಾರೆ. ಗೋಮೂತ್ರದ ಅರ್ಕದಲ್ಲಿ (Cow Urine Distillate) ಇರುವ ಕೆಲವು ಪ್ರಮುಖ ಜೈವಿಕ ಸಕ್ರಿಯ ಸಂಯುಕ್ತಗಳು ಚಿಕೂನ್‌ಗುನ್ಯಾ ವೈರಸ್ (CHIKV) ವಿರುದ್ಧ ಪ್ರಬಲವಾಗಿ ಹೋರಾಡುವ ಸಾಮರ್ಥ್ಯ ಹೊಂದಿವೆ ಎಂದು ಸಂಶೋಧಕರು ವರದಿ ಮಾಡಿದ್ದಾರೆ.

ಇದು ಆಯುರ್ವೇದ ಆಧಾರಿತ ಮತ್ತು ಕೈಗೆಟುಕುವ ಬೆಲೆಯ ಆಂಟಿವೈರಲ್ ಔಷಧಗಳ ಅಭಿವೃದ್ಧಿಗೆ ಹೊಸ ಹಾದಿ ಸೃಷ್ಟಿಸಿದೆ.
ಪ್ರತಿಷ್ಠಿತ ‘ACS ಅಗ್ರಿಕಲ್ಚರಲ್ ಸೈನ್ಸ್ & ಟೆಕ್ನಾಲಜಿ’ ಜರ್ನಲ್‌ನಲ್ಲಿ ಈ ಸಂಶೋಧನಾ ವರದಿ ಪ್ರಕಟವಾಗಿದೆ. ಐಐಟಿ ರೂರ್ಕಿಯ ಬಯೋಸೈನ್ಸ್ ಮತ್ತು ಬಯೋಇಂಜಿನಿಯರಿಂಗ್ ವಿಭಾಗದ ಪ್ರೊ. ಶೈಲಿ ತೋಮರ್ ನೇತೃತ್ವದ ತಂಡವು, ದೇಶದ ಪ್ರಮುಖ ಆಯುರ್ವೇದ ಮತ್ತು ಬಯೋಮೆಡಿಕಲ್ ಸಂಸ್ಥೆಗಳ ಸಂಶೋಧಕರೊಂದಿಗೆ ಸೇರಿ ಈ ಅಧ್ಯಯನ ನಡೆಸಿದೆ.

ಕೇವಲ ಗೋಮೂತ್ರದ ಅರ್ಕದ ಬಳಕೆಯಿಂದ ಚಿಕೂನ್‌ಗುನ್ಯಾ ವೈರಸ್ ಮಟ್ಟವು ಶೇಕಡಾ 90 ಕ್ಕಿಂತ ಹೆಚ್ಚು ಕಡಿಮೆಯಾಗಿರುವುದು ಪ್ರಯೋಗಾಲಯದಲ್ಲಿ ದೃಢಪಟ್ಟಿದೆ. ಇದರೊಂದಿಗೆ ಕೃಷ್ಣ ಜೀರಿಗೆಯಿಂದ (Nigella sativa) ಪಡೆದ ‘ಥೈಮೋಕ್ವಿನೋನ್’ ಮತ್ತು ಕಪ್ಪು ಮೆಣಸಿನಿಂದ ಪಡೆದ ‘ಪೈಪರಿನ್’ ಅನ್ನು ಸೂಕ್ತ ಪ್ರಮಾಣದಲ್ಲಿ ಸಂಯೋಜಿಸಿದಾಗ, ವೈರಸ್ ಪ್ರಮಾಣವು ಭಾರಿ ಪ್ರಮಾಣದಲ್ಲಿ ಅಂದರೆ ಶೇ. 99.85 ರಷ್ಟು ಕಡಿಮೆಯಾಗಿದೆ.

ಗೋಮೂತ್ರದ ಅರ್ಕದಲ್ಲಿರುವ ಬೆಂಜಾಯಿಕ್ ಆಮ್ಲ (Benzoic acid), ಹಿಪ್ಪುರಿಕ್ ಆಮ್ಲ (Hippuric acid) ಮತ್ತು ಒಲಿಕ್ ಆಮ್ಲಗಳು (Oleic acid) ಈ ಆಂಟಿವೈರಲ್ ಗುಣಕ್ಕೆ ಪ್ರಮುಖ ಕಾರಣ ಎಂದು ಗುರುತಿಸಲಾಗಿದೆ. ಇವು ವೈರಸ್ ತನ್ನ ಸಂಖ್ಯೆಯನ್ನು ವೃದ್ಧಿಸಿಕೊಳ್ಳದಂತೆ ತಡೆಯುತ್ತವೆ.

ಹೊಸದಾಗಿ ಕಾಣಿಸಿಕೊಳ್ಳುತ್ತಿರುವ ವೈರಲ್ ಕಾಯಿಲೆಗಳಿಗೆ ನವೀನ, ಕೈಗೆಟುಕುವ ಮತ್ತು ವೈಜ್ಞಾನಿಕವಾಗಿ ಸಾಬೀತಾದ ಪರಿಹಾರಗಳ ಅಗತ್ಯವಿದೆ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ಜೈವಿಕ ತಂತ್ರಜ್ಞಾನದೊಂದಿಗೆ ಜೋಡಿಸುವ ಐಐಟಿ ರೂರ್ಕಿಯ ಬದ್ಧತೆಗೆ ಈ ಸಂಶೋಧನೆ ಅತ್ಯುತ್ತಮ ಉದಾಹರಣೆಯಾಗಿದೆ ಎಂದು ಐಐಟಿ ರೂರ್ಕಿ ಪ್ರೊ. ಕಮಲ್ ಕಿಶೋರ್ ಪಂತ್ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಮುಖ ಸಂಶೋಧಕಿ ಪ್ರೊ. ಶೈಲಿ ತೋಮರ್, ನಮ್ಮ ಸಂಶೋಧನೆಯು ಆಯುರ್ವೇದದ ‘ಗೋಮೂತ್ರ ಅರ್ಕ’ದಲ್ಲಿರುವ ಸಕ್ರಿಯ ಅಣುಗಳನ್ನು ಗುರುತಿಸುವುದಲ್ಲದೆ, ನೈಸರ್ಗಿಕ ಸಂಯೋಜನೆಗಳ ಶಕ್ತಿಯನ್ನು ಸಾಬೀತುಪಡಿಸಿದೆ. ಇದು ಚಿಕೂನ್‌ಗುನ್ಯಾ ಮತ್ತು ಇತರ ವೈರಲ್ ಸೋಂಕುಗಳ ವಿರುದ್ಧ ಮುಂದಿನ ಪೀಳಿಗೆಯ ಆಂಟಿವೈರಲ್ ತಂತ್ರಗಳನ್ನು ಅಭಿವೃದ್ಧಿಪಡಿಸಲು ಬಲವಾದ ಬುನಾದಿ ನೀಡುತ್ತದೆ. ಇದರ ಮುಂದಿನ ಹಂತದ ಕ್ಲಿನಿಕಲ್ ಪ್ರಯೋಗಗಳು ಅತ್ಯಗತ್ಯವಾಗಿವೆ ಎಂದಿದ್ದಾರೆ.

ಕೇಂದ್ರ ಆಯುಷ್ (AYUSH) ಸಚಿವಾಲಯದ ಬೆಂಬಲದೊಂದಿಗೆ ಈ ಸಂಶೋಧನೆ ನಡೆದಿದ್ದು, ಜಾಗತಿಕ ಆರೋಗ್ಯ ರಂಗದಲ್ಲಿ ಚಿಕೂನ್‌ಗುನ್ಯಾಗೆ ಸೂಕ್ತ ಆಂಟಿವೈರಲ್ ಲಸಿಕೆ ಅಥವಾ ಸೀಮಿತ ಚಿಕಿತ್ಸೆ ಇರುವ ಸದ್ಯದ ಪರಿಸ್ಥಿತಿಯಲ್ಲಿ, ಈ ಆವಿಷ್ಕಾರವು ಅತ್ಯಂತ ಮೌಲ್ಯಯುತ ಕೊಡುಗೆಯಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಲಾಗಿದೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now