ಸುದ್ದಿಒನ್, ಚಿತ್ರದುರ್ಗ, ಜೂನ್. 21 : ತಾಲೂಕಿನ ದೊಡ್ಡಸಿದ್ದವ್ವನಹಳ್ಳಿ ಗ್ರಾಮದ ಮುಖ್ಯ ರಸ್ತೆಯಲ್ಲಿ ಯಾವುದೇ ಕ್ಷಣದಲ್ಲಾದರೂ ಮುರಿದು ಬೀಳುವ ಸ್ಥಿತಿಯಲ್ಲಿದ್ದ ಅಪಾಯಕಾರಿ ವಿದ್ಯುತ್ ಕಂಬವನ್ನು ಕೊನೆಗೂ ತೆರವುಗೊಳಿಸಲಾಗಿದೆ. ‘ಸುದ್ದಿಒನ್’ ಪ್ರಸಾರ ಮಾಡಿದ ವಿಶೇಷ ವರದಿಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಬೆಸ್ಕಾಂ ಅಧಿಕಾರಿಗಳು, ಸ್ಥಳಕ್ಕೆ ಭೇಟಿ ನೀಡಿ ವಾಲಿದ್ದ ಕಂಬವನ್ನು ತೆಗೆದು ಹೊಸ ವಿದ್ಯುತ್ ಕಂಬವನ್ನು ಅಳವಡಿಸಿದ್ದಾರೆ.
ವರದಿಯ ಹಿನ್ನೆಲೆ :
ಗ್ರಾಮದ ಮುಖ್ಯ ರಸ್ತೆಯಲ್ಲಿರುವ ನಿವೃತ್ತ ಶಿಕ್ಷಕರಾದ ಹೇಮಾರೆಡ್ಡಿ ಅವರ ಮನೆಯ ಪಕ್ಕದಲ್ಲಿ ಹಾಗೂ ಆಂಜನೇಯ ಸ್ವಾಮಿ ದೇವಸ್ಥಾನದ ಹತ್ತಿರವಿದ್ದ ವಿದ್ಯುತ್ ಕಂಬವೊಂದು ತೀವ್ರವಾಗಿ ಬಾಗಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿತ್ತು. ಈ ಕಂಬ ಯಾವುದೇ ಕ್ಷಣದಲ್ಲಾದರೂ ಮುರಿದು ಬೀಳುವ ಅಪಾಯವಿತ್ತು. ಇದೇ ರಸ್ತೆಯಲ್ಲಿ ಇತ್ತೀಚೆಗೆ ಭಾರಿ ಗಾಳಿ-ಮಳೆಗೆ ಆಂಜನೇಯ ಸ್ವಾಮಿ ದೇವಾಲಯದ ಎದುರುಗಡೆ ಅಂಜಿನಪ್ಪ ಅವರ ಮನೆ ಮುಂಭಾಗದಲ್ಲಿದ್ದ ಮತ್ತೊಂದು ಕಂಬ ಮುರಿದು ಬಿದ್ದಿತ್ತು. ಅದೃಷ್ಟವಶಾತ್ ಆಗ ಯಾವುದೇ ಅನಾಹುತ ಸಂಭವಿಸಿರಲಿಲ್ಲ.

ನಿರಂತರವಾಗಿ ಸಾರ್ವಜನಿಕರು ಹಾಗೂ ವಾಹನಗಳು ಸಂಚರಿಸುವ ಈ ಮುಖ್ಯ ರಸ್ತೆಯಲ್ಲೇ ಈ ಕಂಬ ಇಷ್ಟೊಂದು ಬಾಗಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದಿರುವ ಬಗ್ಗೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಗಂಭೀರ ಸಮಸ್ಯೆಯ ಕುರಿತು ‘ಸುದ್ದಿಒನ್’ ಮೇ 31 ರಂದು ವಿಸ್ತೃತ ವರದಿ ಪ್ರಸಾರ ಮಾಡುವ ಮೂಲಕ ಅಧಿಕಾರಿಗಳ ಗಮನ ಸೆಳೆದಿತ್ತು.
‘ಸುದ್ದಿಒನ್’ಗೆ ಗ್ರಾಮಸ್ಥರ ಕೃತಜ್ಞತೆ:
`ಸುದ್ದಿಒನ್ ಮಾಧ್ಯಮದಲ್ಲಿ ಈ ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಬೆಸ್ಕಾಂ ಸಿಬ್ಬಂದಿ ಊರಿಗೆ ಧಾವಿಸಿ, ವಾಲಿದ್ದ ಅಪಾಯಕಾರಿ ಕಂಬವನ್ನು ತೆರವುಗೊಳಿಸಿ ಹೊಸ ಕಂಬವನ್ನು ನೆಟ್ಟಿದ್ದಾರೆ. ಇದರಿಂದ ನಮ್ಮ ಗ್ರಾಮಸ್ಥರ ದೊಡ್ಡ ಆತಂಕ ದೂರಾಗಿದೆ ಎಂದು ದೊಡ್ಡಸಿದ್ದವ್ವನಹಳ್ಳಿ ಗ್ರಾಮಸ್ಥರು ಸಂತೋಷ ಹಂಚಿಕೊಂಡಿದ್ದಾರೆ. ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸಿ, ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಮಾಡಿದ ‘ಸುದ್ದಿಒನ್’ ವಾಹಿನಿಗೆ ಗ್ರಾಮಸ್ಥರು ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.














