ಬಾಗಲಕೋಟೆ, ದಾವಣಗೆರೆ, ಧಾರವಾಡ, ಚಿತ್ರದುರ್ಗ ಹಾಗೂ ಕೋಲಾರ ಜಿಲ್ಲಾ ನ್ಯಾಯಾಲಯಗಳಿಗೆ ಶುಕ್ರವಾರ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಸಂದೇಶಗಳು ಬಂದ ಹಿನ್ನೆಲೆಯಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಮುನ್ನೆಚ್ಚರಿಕಾ ಕ್ರಮವಾಗಿ ನ್ಯಾಯಾಲಯಗಳ ಕಲಾಪವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿ, ಆವರಣದಲ್ಲಿ ಸಮಗ್ರ ತಪಾಸಣೆ ನಡೆಸಲಾಯಿತು.
ಬೆಳಿಗ್ಗೆ 7.47ರ ಸುಮಾರಿಗೆ ಜಿಲ್ಲಾ ನ್ಯಾಯಾಲಯಗಳ ಅಧಿಕೃತ ಇ-ಮೇಲ್ ವಿಳಾಸಗಳಿಗೆ ಅನುಮಾನಾಸ್ಪದ ಸಂದೇಶ ರವಾನೆಯಾಗಿದ್ದು, ಮಧ್ಯಾಹ್ನ 2 ಗಂಟೆಗೆ ಸ್ಫೋಟ ಸಂಭವಿಸುವುದಾಗಿ ಅದರಲ್ಲಿ ಉಲ್ಲೇಖಿಸಲಾಗಿತ್ತು. ತಮಿಳುನಾಡಿನ ಶಿವಗಂಗೆಯಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮೃತಪಟ್ಟ ಅಜಿತ್ ಕುಮಾರ್ ಪ್ರಕರಣಕ್ಕೆ ಪ್ರತೀಕಾರವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಹೇಳಿಕೆಯೂ ಸಂದೇಶದಲ್ಲಿತ್ತು.

ಮಾಹಿತಿ ತಿಳಿದ ತಕ್ಷಣ ನ್ಯಾಯಾಲಯ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದರು. ಬಳಿಕ ವಕೀಲರು, ಸಿಬ್ಬಂದಿ ಹಾಗೂ ಕಕ್ಷಿದಾರರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ ನ್ಯಾಯಾಲಯ ಆವರಣದಲ್ಲಿ ಬಿಗಿ ಭದ್ರತೆ ಒದಗಿಸಲಾಯಿತು.ಸ್ಥಳಕ್ಕೆ ಆಗಮಿಸಿದ ಬಾಂಬ್ ನಿಷ್ಕ್ರಿಯ ದಳ ಮತ್ತು ಪೊಲೀಸ್ ಸಿಬ್ಬಂದಿ ನ್ಯಾಯಾಲಯ ಕಟ್ಟಡಗಳು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ತೀವ್ರ ಶೋಧ ಕಾರ್ಯ ನಡೆಸಿದರು. ಆದರೆ ಯಾವುದೇ ಅನುಮಾನಾಸ್ಪದ ವಸ್ತು ಪತ್ತೆಯಾಗದ ಹಿನ್ನೆಲೆಯಲ್ಲಿ ಇದು ಹುಸಿ ಬಾಂಬ್ ಬೆದರಿಕೆ ಎಂಬುದು ದೃಢಪಟ್ಟಿತು.
ಪರಿಸ್ಥಿತಿ ಸುರಕ್ಷಿತವಾಗಿದೆ ಎಂದು ಖಚಿತವಾದ ಬಳಿಕ ಮಧ್ಯಾಹ್ನ 3 ಗಂಟೆಯ ನಂತರ ನ್ಯಾಯಾಲಯಗಳ ಕಲಾಪಗಳು ಎಂದಿನಂತೆ ಪುನರಾರಂಭಗೊಂಡವು.ಗಮನಾರ್ಹ ಸಂಗತಿಯೆಂದರೆ, ಈ ವರ್ಷದ ಫೆಬ್ರವರಿಯಲ್ಲಿಯೂ ಧಾರವಾಡ ಹೈಕೋರ್ಟ್ ಪೀಠ ಸೇರಿದಂತೆ ಒಂಬತ್ತು ಜಿಲ್ಲಾ ನ್ಯಾಯಾಲಯಗಳಿಗೆ ಇದೇ ರೀತಿಯ ಹುಸಿ ಬಾಂಬ್ ಬೆದರಿಕೆ ಸಂದೇಶಗಳು ಬಂದಿದ್ದವು. ಈ ಘಟನೆಗಳ ಹಿಂದೆ ಇರುವವರ ಪತ್ತೆಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













