ದೇಶದ ಪ್ರಮುಖ ಡಿಜಿಟಲ್ ಪಾವತಿ ವೇದಿಕೆಗಳಲ್ಲೊಂದಾದ ಫೋನ್‌ಪೆ (PhonePe) ತನ್ನ ವ್ಯಾಲೆಟ್ ಸೇವೆಯನ್ನು ದೀರ್ಘಕಾಲ ಬಳಸದ ಗ್ರಾಹಕರಿಗೆ ನಿರ್ವಹಣಾ ಶುಲ್ಕ ವಿಧಿಸುವ ನಿರ್ಧಾರ ಕೈಗೊಂಡಿದೆ ಎನ್ನುವ ಮಾಹಿತಿ ಹೊರಬಿದ್ದಿದ್ದು, ಬಳಕೆದಾರರಲ್ಲಿ ಆತಂಕ ಮೂಡಿಸಿದೆ.ವರದಿಗಳ ಪ್ರಕಾರ, ಫೋನ್‌ಪೆ ವ್ಯಾಲೆಟ್ ಅನ್ನು ನಿರಂತರ 12 ತಿಂಗಳುಗಳ ಕಾಲ ಯಾವುದೇ ಹಣಕಾಸು ವಹಿವಾಟಿಗೆ ಬಳಸದೇ ಇದ್ದರೆ ಅದನ್ನು ‘ಇನ್‌ಆಕ್ಟಿವ್’ ಅಥವಾ ‘ಡಾರ್ಮೆಂಟ್’ ವ್ಯಾಲೆಟ್ ಎಂದು ಪರಿಗಣಿಸಲಾಗುತ್ತದೆ. ಇಂತಹ ವ್ಯಾಲೆಟ್‌ಗಳಿಗೆ ಪ್ರತಿ ಮೂರು ತಿಂಗಳಿಗೊಮ್ಮೆ ₹100 ನಿರ್ವಹಣಾ ಶುಲ್ಕವನ್ನು ವ್ಯಾಲೆಟ್‌ನಲ್ಲಿರುವ ಬ್ಯಾಲೆನ್ಸ್‌ನಿಂದ ಕಡಿತಗೊಳಿಸುವ ಸಾಧ್ಯತೆ ಇದೆ.
ಈ ಕುರಿತು ಹಲವಾರು ಗ್ರಾಹಕರಿಗೆ ಈಗಾಗಲೇ ಎಸ್‌ಎಂಎಸ್ ಹಾಗೂ ನೋಟಿಫಿಕೇಶನ್‌ಗಳು ತಲುಪುತ್ತಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.
ಕೇವಲ ಫೋನ್‌ಪೆ ಆಪ್ ತೆರೆಯುವುದು ಅಥವಾ ಬ್ಯಾಂಕ್ ಖಾತೆಯಿಂದ ನೇರ ಯುಪಿಐ ಪಾವತಿ ಮಾಡುವುದು ವ್ಯಾಲೆಟ್ ಬಳಕೆಯಾಗಿ ಪರಿಗಣಿಸಲಾಗುವುದಿಲ್ಲ. ವ್ಯಾಲೆಟ್‌ಗೆ ಹಣ ಸೇರಿಸುವುದು ಅಥವಾ ವ್ಯಾಲೆಟ್‌ನಲ್ಲಿರುವ ಹಣದಿಂದ ರೀಚಾರ್ಜ್, ಬಿಲ್ ಪಾವತಿ ಅಥವಾ ಇತರೆ ವಹಿವಾಟು ನಡೆಸಿದರೆ ಮಾತ್ರ ಅದು ಸಕ್ರಿಯವಾಗಿದೆ ಎಂದು ಪರಿಗಣಿಸಲಾಗುತ್ತದೆ.
ಶುಲ್ಕ ವಿಧಿಸುವ ಮೊದಲು ಗ್ರಾಹಕರಿಗೆ 15 ದಿನಗಳ ಮುಂಚಿತವಾಗಿ ಎಸ್‌ಎಂಎಸ್ ಅಥವಾ ನೋಟಿಫಿಕೇಶನ್ ಮೂಲಕ ಮಾಹಿತಿ ನೀಡಲಾಗುತ್ತದೆ. ಈ ಅವಧಿಯಲ್ಲಿ ವ್ಯಾಲೆಟ್ ಮೂಲಕ ಸಣ್ಣ ವಹಿವಾಟು ನಡೆಸಿದರೆ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು.
ವ್ಯಾಲೆಟ್‌ನಲ್ಲಿ ₹100ಕ್ಕಿಂತ ಕಡಿಮೆ ಹಣ ಇದ್ದರೆ, ಲಭ್ಯವಿರುವ ಮೊತ್ತವನ್ನಷ್ಟೇ ಕಡಿತಗೊಳಿಸಿ ಬ್ಯಾಲೆನ್ಸ್ ಅನ್ನು ಶೂನ್ಯಗೊಳಿಸಲಾಗುತ್ತದೆ. ಗ್ರಾಹಕರ ಬ್ಯಾಂಕ್ ಖಾತೆಯಿಂದ ಹೆಚ್ಚುವರಿ ಹಣ ಕಡಿತಗೊಳ್ಳುವುದಿಲ್ಲ ಹಾಗೂ ವ್ಯಾಲೆಟ್ ಮೈನಸ್ ಬ್ಯಾಲೆನ್ಸ್‌ಗೆ ಹೋಗುವುದಿಲ್ಲ.
ಭಾರತದಲ್ಲಿ ಬಹುತೇಕ ಬಳಕೆದಾರರು ನೇರವಾಗಿ ಯುಪಿಐ ಮೂಲಕ ಬ್ಯಾಂಕ್ ಖಾತೆಯಿಂದಲೇ ಹಣ ವರ್ಗಾವಣೆ ಮಾಡುತ್ತಾರೆ. ಹೀಗಾಗಿ ಅನೇಕರಿಗೆ ತಮ್ಮ ಫೋನ್‌ಪೆ ಖಾತೆಯಲ್ಲಿ ವ್ಯಾಲೆಟ್ ಸಕ್ರಿಯವಾಗಿದೆ ಎಂಬುದೇ ತಿಳಿದಿರುವುದಿಲ್ಲ. ಬಳಸದ ಸೇವೆಗೆ ನಿರ್ವಹಣಾ ಶುಲ್ಕ ವಿಧಿಸುವ ಕ್ರಮದ ವಿರುದ್ಧ ಹಲವು ಗ್ರಾಹಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಮೊಬಿಕ್ವಿಕ್ ಹಾಗೂ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್ ಕೂಡ ಇನ್‌ಆಕ್ಟಿವ್ ವ್ಯಾಲೆಟ್‌ಗಳಿಗೆ ಇದೇ ರೀತಿಯ ಶುಲ್ಕ ನಿಯಮಗಳನ್ನು ಜಾರಿಗೆ ತಂದಿದ್ದವು.ತಜ್ಞರ ಸಲಹೆಯಂತೆ, ವ್ಯಾಲೆಟ್ ಬಳಕೆಯ ಅವಶ್ಯಕತೆ ಇಲ್ಲದಿದ್ದರೆ ಅದರಲ್ಲಿರುವ ಹಣವನ್ನು ಖಾಲಿ ಮಾಡುವುದು ಅಥವಾ ಫೋನ್‌ಪೆ ಸೆಟ್ಟಿಂಗ್ಸ್‌ನಲ್ಲಿ ‘Close Wallet’ ಆಯ್ಕೆ ಮೂಲಕ ವ್ಯಾಲೆಟ್ ಮುಚ್ಚುವುದು ಉತ್ತಮ ಎಂದು ಹೇಳಲಾಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












