ತಿರುವನಂತಪುರಂ.ಜೂನ್.15: ಕೇರಳದಲ್ಲಿ ಮಕ್ಕಳನ್ನು ಕ್ಯಾನ್ಸರ್ ಮತ್ತು ಇತರೆ ಗಂಭೀರ ಕಾಯಿಲೆಗಳಿಂದ ರಕ್ಷಿಸಲು ಶಾಲೆಗಳಲ್ಲಿ ಲಿಪ್‌ಸ್ಟಿಕ್ ಹಾಗೂ ಸೌಂದರ್ಯವರ್ಧಕಗಳ ಬಳಕೆಯನ್ನು ನಿಷೇಧಿಸುವ ಮಹತ್ವದ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.
ಕೊಲ್ಲಂ ಜಿಲ್ಲೆಯ ಮಕ್ಕಳ ಕಲ್ಯಾಣ ಸಮಿತಿಯು ಈ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಕೈಗೆತ್ತಿಕೊಂಡಿದ್ದು, ಶಾಲಾ ಆವರಣಗಳಿಂದ ಕಾಸ್ಮೆಟಿಕ್ಸ್ ಉತ್ಪನ್ನಗಳನ್ನು ಸಂಪೂರ್ಣವಾಗಿ ದೂರವಿಡಲು ಮುಂದಾಗಿದೆ. ಸದ್ಯ ಕೇರಳದಲ್ಲಿ ಆರಂಭವಾಗಿರುವ ಈ ಕಟ್ಟುನಿಟ್ಟಿನ ನಿಯಮವನ್ನು ಮುಂಬರುವ ದಿನಗಳಲ್ಲಿ ಇಡೀ ದೇಶಾದ್ಯಂತ ವಿಸ್ತರಿಸುವಂತೆ ಶಿಫಾರಸು ಮಾಡಲಾಗಿದೆ.
ಲಿಪ್‌ಸ್ಟಿಕ್ ಮತ್ತು ಇತರೆ ಸೌಂದರ್ಯವರ್ಧಕಗಳಲ್ಲಿ ಕಂಡುಬರುವ ಮರ್ಕ್ಯುರಿ (ಪಾದರಸ) ಹಾಗೂ ಕ್ಯಾಡ್ಮಿಯಂನಂತಹ ವಿಷಕಾರಿ ಭಾರ ಲೋಹಗಳು ಮಕ್ಕಳ ಆಂತರಿಕ ಅಂಗಗಳಿಗೆ ತೀವ್ರ ಹಾನಿ ಉಂಟುಮಾಡುತ್ತವೆ ಎಂದು ಆರೋಗ್ಯ ಇಲಾಖೆ ಎಚ್ಚರಿಸಿದೆ. ವಯಸ್ಕರಿಗೆ ಹೋಲಿಸಿದರೆ ಮಕ್ಕಳ ಚರ್ಮವು ಅತ್ಯಂತ ತೆಳುವಾಗಿ ಮತ್ತು ಸೂಕ್ಷ್ಮವಾಗಿರುವುದರಿಂದ, ಅವರು ಈ ರಾಸಾಯನಿಕಗಳನ್ನು ಬೇಗನೆ ಹೀರಿಕೊಳ್ಳುತ್ತಾರೆ.
ತಿರುವನಂತಪುರಂನ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರವು ಇತ್ತೀಚೆಗೆ ನಡೆಸಿದ ಅಧ್ಯಯನದಲ್ಲಿ ಕೊಲ್ಲಂ, ಎರ್ನಾಕುಲಂ ಮತ್ತು ಕೋಝಿಕ್ಕೋಡ್ ಜಿಲ್ಲೆಗಳ ಮಕ್ಕಳಲ್ಲಿ ಕರುಳಿನ ಕ್ಯಾನ್ಸರ್ ಪ್ರಕರಣಗಳು ದಿಢೀರನೆ ಹೆಚ್ಚುತ್ತಿರುವುದು ಪತ್ತೆಯಾಗಿದೆ. ಇದೇ ವೇಳೆ ಶಾಲಾ ವಿದ್ಯಾರ್ಥಿನಿಯರು ಬಿಡುವಿನ ವೇಳೆಯಲ್ಲಿ ಲಿಪ್‌ಸ್ಟಿಕ್ ಮತ್ತು ಮೇಕಪ್ ಸಾಮಗ್ರಿಗಳನ್ನು ಬಳಸುವ ಪ್ರವೃತ್ತಿ ಹೆಚ್ಚಾಗಿರುವುದು ಶಿಕ್ಷಕರ ಗಮನಕ್ಕೆ ಬಂದಿತ್ತು. ಈ ಹಿನ್ನೆಲೆಯಲ್ಲಿ ಮಯ್ಯನಾಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಕವಿ ಕುರೀಪುಳ ಶ್ರೀಕುಮಾರ್ ಅವರು ಈ ವಿಶೇಷ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ.
ಲಿಪ್‌ಸ್ಟಿಕ್, ಐಲೈನರ್, ಫೇಸ್ ಕ್ರೀಮ್ ಗಳಂತಹ ಉತ್ಪನ್ನಗಳ ಅತಿಯಾದ ಬಳಕೆಯಿಂದ ಚರ್ಮದ ಅಲರ್ಜಿ, ಹಾರ್ಮೋನ್ ಅಸಮತೋಲನ, ದೈಹಿಕ-ಮಾನಸಿಕ ಬೆಳವಣಿಗೆ ಕುಂಠಿತ ಹಾಗೂ ಕ್ಯಾನ್ಸರ್‌ನಂತಹ ಭೀಕರ ಪರಿಣಾಮಗಳು ಎದುರಾಗುತ್ತವೆ. ಕಳೆದ ವರ್ಷ ಔಷಧ ನಿಯಂತ್ರಣ ಇಲಾಖೆ ನಡೆಸಿದ ದಾಳಿಯಲ್ಲಿ, ನಿಗದಿತ ಮಿತಿಗಿಂತ ಹೆಚ್ಚು ಮರ್ಕ್ಯುರಿ ಹೊಂದಿದ್ದ ಲಿಪ್‌ಸ್ಟಿಕ್ ಗಳನ್ನು ಶಾಲೆಗಳ ಸಮೀಪದ ಅಂಗಡಿಗಳಲ್ಲೇ ವಶಪಡಿಸಿಕೊಳ್ಳಲಾಗಿತ್ತು. ಹೀಗಾಗಿ ವೈದ್ಯಕೀಯ ತಜ್ಞರ ನೇತೃತ್ವದಲ್ಲಿ ಜಾಗೃತಿ ಮೂಡಿಸಿ ಶಾಲೆಗಳನ್ನು ‘ಲಿಪ್‌ಸ್ಟಿಕ್ ಮುಕ್ತ ಕ್ಯಾಂಪಸ್’ ಎಂದು ಘೋಷಿಸಲಾಗುತ್ತಿದೆ. ಈ ಜಾಗೃತಿಯನ್ನು ಪೋಷಕರು, ರೆಸಿಡೆಂಟ್ಸ್ ಅಸೋಸಿಯೇಷನ್‌ಗಳು ಹಾಗೂ ‘ಕುಟುಂಬಶ್ರೀ’ ಸಂಘಗಳ ಮೂಲಕ ತಳಮಟ್ಟಕ್ಕೆ ತಲುಪಿಸಲು ಸಿಡಬ್ಲ್ಯೂಸಿ ಯೋಜಿಸಿದೆ. ಈ ಅಭಿಯಾನವನ್ನು ದೇಶಾದ್ಯಂತ ವಿಸ್ತರಿಸಲು ಮತ್ತು ಶಾಲೆಗಳ ಸುತ್ತಮುತ್ತಲಿನ ಅಂಗಡಿಗಳ ಮೇಲೆ ಕಟ್ಟುನಿಟ್ಟಿನ ತಪಾಸಣೆ ನಡೆಸಲು ಕೇರಳ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಈಗಾಗಲೇ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.












