Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಉಚಿತ ರೇಷನ್‌ ನಿಂದ ವಂದೇ ಭಾರತ್‌ ವರೆಗೆ ಪ್ರಧಾನಿ ಮೋದಿ ಸರ್ಕಾರದ 9 ಮಹತ್ತರ ಸಾಧನೆಗಳು!

---Advertisement---

ದೆಹಲಿ: ಕೇಂದ್ರದಲ್ಲಿ ತಮ್ಮ ನೇತೃತ್ವದ ಸರ್ಕಾರ ಯಶಸ್ವಿಯಾಗಿ 12 ವರ್ಷಗಳನ್ನು ಪೂರೈಸಿರುವ ಐತಿಹಾಸಿಕ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ದೇಶದ ಜನತೆಯನ್ನುದ್ದೇಶಿಸಿ ಮಾತನಾಡಿದ್ದಾರೆ. ಕಳೆದ 12 ವರ್ಷಗಳ ಅವಧಿಯು ದೇಶದ ಜನರ ನಂಬಿಕೆ, ಅಭಿವೃದ್ಧಿ ಮತ್ತು ಜನಕಲ್ಯಾಣಕ್ಕೆ ಸಮರ್ಪಿತವಾಗಿದೆ ಎಂದು ಅವರು ಹೇಳಿದ್ದಾರೆ.

140 ಕೋಟಿ ದೇಶವಾಸಿಗಳ ಆಶೀರ್ವಾದ ಮತ್ತು ‘ರಾಷ್ಟ್ರ ಪ್ರಥಮ’ ಎಂಬ ಭಾವನೆಯೊಂದಿಗೆ, ತಮ್ಮ ಸರ್ಕಾರವು ಯುವಕರು, ಮಹಿಳೆಯರು, ರೈತರು ಮತ್ತು ಬಡವರ ಸಬಲೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದೆ. ಇದರ ಫಲವಾಗಿ ಇಂದು ಭಾರತವು ಜಾಗತಿಕ ಮಟ್ಟದಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ ಎಂದು ಪ್ರಧಾನಿ ಹೆಮ್ಮೆಯಿಂದ ಹೇಳಿದ್ದಾರೆ.

ಸಾಮಾಜಿಕ ಮಾಧ್ಯಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ಮೋದಿ,

ನಮ್ಮ ಸರ್ಕಾರದ ಕಳೆದ 12 ವರ್ಷಗಳು ನಂಬಿಕೆ, ಪ್ರಗತಿ ಮತ್ತು ಜನಕಲ್ಯಾಣಕ್ಕಾಗಿ ಮುಡಿಪಾಗಿವೆ. 140 ಕೋಟಿ ಭಾರತೀಯರ ಆಶೀರ್ವಾದದೊಂದಿಗೆ ನಮ್ಮ ಯುವಕರು, ಮಹಿಳೆಯರು ಮತ್ತು ರೈತ ಬಾಂಧವರನ್ನು ಸಬಲೀಕರಣಗೊಳಿಸಲು ನಾವು ಯಾವುದೇ ಅವಕಾಶವನ್ನು ಕೈಬಿಟ್ಟಿಲ್ಲ. ‘ವಿಕಸಿತ ಭಾರತ’ದ ಸಂಕಲ್ಪವನ್ನು ಈಡೇರಿಸಲು ನಾವು ಸೇವೆ, ಸುಶಾಸನ ಮತ್ತು ಸಮೃದ್ಧಿಯ ಈ ಹಾದಿಯಲ್ಲಿ ಸದಾ ಮುನ್ನಡೆಯಲಿದ್ದೇವೆ” ಎಂದು ಬರೆದುಕೊಂಡಿದ್ದಾರೆ.

ಸರ್ಕಾರದ 9 ಪ್ರಮುಖ ಸಾಧನೆಗಳು

ಪ್ರಧಾನಮಂತ್ರಿಯವರು ತಮ್ಮ ಆಡಳಿತದ ಒಂಬತ್ತು ಪ್ರಮುಖ ಕ್ಷೇತ್ರಗಳಾದ; ಬಡವರ ಕಲ್ಯಾಣ, ನಾರಿ ಶಕ್ತಿ, ರಾಷ್ಟ್ರ ನಿರ್ಮಾಣ, ಯುವ ಶಕ್ತಿ, ಆರೋಗ್ಯ, ರಾಷ್ಟ್ರ ಪ್ರಥಮ, ರೈತರ ಕಲ್ಯಾಣ, ಮಧ್ಯಮ ವರ್ಗ ಹಾಗೂ ಪರಂಪರೆ ಮತ್ತು ಅಭಿವೃದ್ಧಿ ಆಧಾರಿತ ಸಾಧನೆಗಳನ್ನು ಮುನ್ನೆಲೆಗೆ ತಂದಿದ್ದಾರೆ.

ಬಡವರ ಕಲ್ಯಾಣಕ್ಕೆ ಆದ್ಯತೆ: ಜನಕಲ್ಯಾಣಕ್ಕೆ ಮೊದಲ ಆದ್ಯತೆ ನೀಡಿರುವ ಸರ್ಕಾರ, ಪ್ರತಿ ತಿಂಗಳು 81 ಕೋಟಿಗೂ ಹೆಚ್ಚು ಜನರಿಗೆ ಉಚಿತ ಪಡಿತರ (ರೇಷನ್) ನೀಡುತ್ತಿದೆ. ಇದರೊಂದಿಗೆ 4 ಕೋಟಿಗೂ ಹೆಚ್ಚು ಪ್ರಧಾನಮಂತ್ರಿ ಆವಾಸ್ ಮನೆಗಳು, 10.5 ಕೋಟಿಗೂ ಅಧಿಕ ಉಜ್ವಲ ಗ್ಯಾಸ್ ಸಂಪರ್ಕಗಳು ಮತ್ತು 12 ಕೋಟಿ ಶೌಚಾಲಯಗಳನ್ನು ನಿರ್ಮಿಸುವ ಮೂಲಕ ಕೋಟ್ಯಂತರ ಕುಟುಂಬಗಳ ಜೀವನವನ್ನು ಸುಗಮಗೊಳಿಸಲಾಗಿದೆ.

ನಾರಿ ಶಕ್ತಿಯ ಸಬಲೀಕರಣ: ಮಹಿಳಾ ಸಬಲೀಕರಣದ ಅಡಿಯಲ್ಲಿ 32 ಕೋಟಿಗೂ ಹೆಚ್ಚು ಮಹಿಳೆಯರ ಜನ-ಧನ್ ಖಾತೆಗಳನ್ನು ತೆರೆಯಲಾಗಿದೆ. ಮಹಿಳೆಯರಿಗೆ ಸೇನೆಯಲ್ಲಿ ಕಾಯಂ ಕಮಿಷನ್ ಪಡೆಯುವ ಅವಕಾಶ ಸಿಕ್ಕಿದೆ. ದೇಶದಲ್ಲಿ 3 ಕೋಟಿಗೂ ಹೆಚ್ಚು ಮಹಿಳೆಯರು ‘ಲಖಪತಿ ದೀದಿ’ಯರಾಗಿದ್ದಾರೆ. ಅಲ್ಲದೆ, 91 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಮೂಲಕ 10 ಕೋಟಿ ಗ್ರಾಮೀಣ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಸಾಧಿಸಿದ್ದಾರೆ.

ದೃಢ ರಾಷ್ಟ್ರ ನಿರ್ಮಾಣ ಮತ್ತು ಮೂಲಸೌಕರ್ಯ: ದೇಶದ 26 ನಗರಗಳಲ್ಲಿ 1,100 ಕಿಲೋಮೀಟರ್‌ಗಿಂತಲೂ ಹೆಚ್ಚು ಮೆಟ್ರೋ ನೆಟ್‌ವರ್ಕ್ ಅಭಿವೃದ್ಧಿಪಡಿಸಲಾಗಿದೆ. ಸದ್ಯ ದೇಶದಲ್ಲಿ 164 ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ. ಅಟಲ್ ಸೇತು, ಸುದರ್ಶನ್ ಸೇತು, ಚೆನಾಬ್ ರೈಲ್ವೆ ಸೇತುವೆ, ಬೋಗಿಬೀಲ್ ಸೇತುವೆ ಮತ್ತು ಪಂಬನ್ ಕಡಲ ಸೇತುವೆಯಂತಹ ಬೃಹತ್ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ದೇಶದಲ್ಲಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 74 ರಿಂದ 164 ಕ್ಕೆ ಏರಿಕೆಯಾಗಿದೆ.

ಯುವಶಕ್ತಿ ಮತ್ತು ನಾವೀನ್ಯತೆ: ಯುವಕರಿಗಾಗಿ ಸುಮಾರು 2 ಕೋಟಿ ಜನರಿಗೆ ಕೌಶಲ್ಯ ತರಬೇತಿ ನೀಡಲಾಗಿದೆ. ಮುದ್ರಾ ಯೋಜನೆಯಡಿ 40 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಸಾಲ ವಿತರಿಸಲಾಗಿದೆ. ದೇಶದಲ್ಲಿ 2.2 ಲಕ್ಷಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಮತ್ತು 10 ಸಾವಿರಕ್ಕೂ ಹೆಚ್ಚು ಅಟಲ್ ಟಿಂಕರಿಂಗ್ ಲ್ಯಾಬ್‌ಗಳು ಹೊಸ ಆವಿಷ್ಕಾರಗಳಿಗೆ ದಾರಿದೀಪವಾಗಿವೆ.

ಆರೋಗ್ಯ ರಕ್ಷಣೆ: ಆಯುಷ್ಮಾನ್ ಭಾರತ ಯೋಜನೆಯಡಿ 60 ಕೋಟಿಗೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ಸುರಕ್ಷತೆ ಒದಗಿಸಲಾಗಿದೆ. 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೂ 5 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆಯ ಲಾಭ ನೀಡಲಾಗುತ್ತಿದೆ. 19 ಸಾವಿರಕ್ಕೂ ಹೆಚ್ಚು ಜನೌಷಧಿ ಕೇಂದ್ರಗಳ ಮೂಲಕ ಜನರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ವಿತರಿಸಲಾಗುತ್ತಿದೆ.

ಪರಂಪರೆ ಮತ್ತು ಆಧುನಿಕತೆಯ ಸಮನ್ವಯ:
ರೈತರ ಕಲ್ಯಾಣ, ರಾಷ್ಟ್ರೀಯ ಭದ್ರತೆ, ಮಧ್ಯಮ ವರ್ಗದವರಿಗೆ ತೆರಿಗೆ ವಿನಾಯಿತಿ ಮತ್ತು ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಯನ್ನು ಸರ್ಕಾರದ ಪ್ರಮುಖ ಮೈಲಿಗಲ್ಲುಗಳು ಎಂದು ಪ್ರಧಾನಿ ಬಣ್ಣಿಸಿದ್ದಾರೆ. ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣ, ಕಾಶಿ ವಿಶ್ವನಾಥ ಧಾಮ, ಮಹಾಕಾಲ್ ಮಹಾಲೋಕ ಮತ್ತು ಕೇದಾರನಾಥ ಧಾಮಗಳ ಪುನರ್‌ನವೀಕರಣ ಕಾರ್ಯಗಳು ಭಾರತದ ಸಾಂಸ್ಕೃತಿಕ ಪರಂಪರೆ ಹಾಗೂ ಆಧುನಿಕ ಅಭಿವೃದ್ಧಿಯ ಸಮನ್ವಯಕ್ಕೆ ಅತ್ಯುತ್ತಮ ಸಂಕೇತಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

 

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now