ಬೆಂಗಳೂರು: ರಾಜ್ಯ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಸರ್ಕಾರವು ಭರ್ಜರಿ ಬಿಸಿ ಮುಟ್ಟಿಸಿದೆ. ಇನ್ಮುಂದೆ ಪ್ರತಿಯೊಬ್ಬ ಸರ್ಕಾರಿ ನೌಕರರು ಪ್ರತಿದಿನ ಬೆಳಗ್ಗೆ 10:00 ಗಂಟೆಯೊಳಗೆ ಕಡ್ಡಾಯವಾಗಿ ಕಚೇರಿಗೆ ಹಾಜರಾಗಬೇಕೆಂದು ಮುಖ್ಯಮಂತ್ರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್ ಅವರು ಇಂದೇ (ಜೂನ್ 05, 2026) ಹೊಸ ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ.
ಇ-ಆಡಳಿತ ಇಲಾಖೆಯು ಸಿದ್ಧಪಡಿಸಿರುವ ‘ಕರ್ತವ್ಯ App’ ನಲ್ಲಿ ಈಗಾಗಲೇ ಹೆಚ್.ಆರ್.ಎಂ.ಎಸ್ (HRMS) ನಲ್ಲಿ ಲಭ್ಯವಿರುವ ಎಲ್ಲಾ ನೌಕರರ ಮಾಹಿತಿಯನ್ನು ನೋಂದಾಯಿಸಲಾಗಿದೆ. ಆದರೆ, ಬಹಳಷ್ಟು ಸಿಬ್ಬಂದಿಗಳು ಈ ಆಪ್ ಅನ್ನು ನಿರಂತರವಾಗಿ ಬಳಸುತ್ತಿಲ್ಲದಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಹೀಗಾಗಿ, ಇನ್ಮುಂದೆ ಈ ಕೆಳಗಿನ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಆದೇಶ ನೀಡಲಾಗಿದೆ.
ಎಲ್ಲಾ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಸೇರಿದಂತೆ ಎಲ್ಲಾ ಸಿಬ್ಬಂದಿಗಳು ಬೆಳಗ್ಗೆ 10:00 ಗಂಟೆಗೆ ‘ಕರ್ತವ್ಯ App’ ನಲ್ಲಿ ‘Check In’ ಹಾಗೂ ಕಚೇರಿಯಿಂದ ನಿರ್ಗಮಿಸುವಾಗ ‘Check Out’ ದಾಖಲಿಸುವುದು ಕಡ್ಡಾಯವಾಗಿದೆ.
ಒಂದು ವೇಳೆ ಅಧಿಕಾರಿಗಳು ಅಥವಾ ಸಿಬ್ಬಂದಿಗಳು ಕಚೇರಿ ಕರ್ತವ್ಯದ ನಿಮಿತ್ತ ಪ್ರವಾಸದಲ್ಲಿದ್ದರೆ, ಆಪ್ನಲ್ಲಿರುವ ‘OOD option’ ನಲ್ಲಿ ಪ್ರವಾಸದ ಉದ್ದೇಶವನ್ನು ನಮೂದಿಸಿ ಹಾಜರಾತಿ ದಾಖಲಿಸಬೇಕು. ಇದನ್ನು ಸಂಬಂಧಪಟ್ಟ ಮೇಲಾಧಿಕಾರಿಗಳು ಧೃಡೀಕರಿಸಬೇಕಾಗುತ್ತದೆ.
ಸರ್ಕಾರದ ಈ ಹೊಸ ನಿಯಮದಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರತಿದಿನ ಬೆಳಗ್ಗೆ 10:00 ಗಂಟೆಗೆ ಹಾಜರಾತಿ ದಾಖಲಿಸದ ಅಧಿಕಾರಿ ಮತ್ತು ಸಿಬ್ಬಂದಿಗಳ ಜಿಲ್ಲಾವಾರು ಹಾಗೂ ಕಚೇರಿವಾರು ಮಾಹಿತಿಯನ್ನು AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನದ ಮೂಲಕ ಆಯಾ ಇಲಾಖಾ ಮುಖ್ಯಸ್ಥರಿಗೆ ಸ್ವಯಂಚಾಲಿತವಾಗಿ (Automated) ವರದಿ ರವಾನೆಯಾಗಲಿದೆ.
ಇಲಾಖಾ ಮುಖ್ಯಸ್ಥರು ತಮ್ಮ ವೈಯಕ್ತಿಕ ಲಾಗಿನ್ ಮೂಲಕ ‘ಕರ್ತವ್ಯ ಡ್ಯಾಶ್ಬೋರ್ಡ್’ ಪರಿಶೀಲಿಸಿ, ಹಾಜರಾತಿ ದಾಖಲಿಸದವರಿಗೆ ತಕ್ಷಣವೇ ಸೂಕ್ತ ಸೂಚನೆ/ಎಚ್ಚರಿಕೆ ನೀಡಬೇಕಾಗುತ್ತದೆ. ಈ ಆದೇಶವನ್ನು ಅತ್ಯಂತ ತುರ್ತು ಮತ್ತು ಕಡ್ಡಾಯವೆಂದು ಪರಿಗಣಿಸಲಾಗಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ ಕ್ರಮ ಕೈಗೊಳ್ಳಲು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹಾಗೂ ಇಲಾಖಾ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿಗಳು ಸೂಚಿಸಿದ್ದಾರೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.













