Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ನೀಟ್ ಪರೀಕ್ಷೆ ರದ್ದು : ಡಾಕ್ಟರ್ ಆಗುವ ಕನಸು ಕಂಡಿದ್ದ ವಿದ್ಯಾರ್ಥಿನಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

---Advertisement---

ಮಧ್ಯಪ್ರದೇಶದ ಮೌಗಂಜ್ ಜಿಲ್ಲೆಯ ಮಗನಿಯಾ ಗ್ರಾಮದಲ್ಲಿ ಮನಕಲಕುವ ಘಟನೆಯೊಂದು ನಡೆದಿದ್ದು, ನೀಟ್ (NEET) ಪರೀಕ್ಷೆಗೆ ಸಿದ್ಧತೆ ನಡೆಸಿದ್ದ ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬವನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಡಾಕ್ಟರ್ ಆಗುವ ಮಹತ್ವಾಕಾಂಕ್ಷೆ ಹೊಂದಿದ್ದ ಆಕಾಂಕ್ಷ ಚತುರ್ವೇದಿ ಎಂಬ ವಿದ್ಯಾರ್ಥಿನಿ ಮನೆಯಲ್ಲಿದ್ದ ಫ್ಯಾನ್‌ಗೆ ನೇಣು ಬಿಗಿದುಕೊಂಡು ಜೀವ ಅಂತ್ಯಗೊಳಿಸಿದ್ದಾಳೆ.

ಕುಟುಂಬದವರ ಮಾಹಿತಿಯ ಪ್ರಕಾರ, ಇತ್ತೀಚೆಗೆ ನಡೆದ ನೀಟ್ ಪರೀಕ್ಷೆಯಲ್ಲಿ ಆಕಾಂಕ್ಷ ಸುಮಾರು 650 ಅಂಕಗಳನ್ನು ಪಡೆಯುವ ವಿಶ್ವಾಸ ಹೊಂದಿದ್ದಳು. ಆದರೆ ಪರೀಕ್ಷೆಯ ಸುತ್ತಮುತ್ತ ಉಂಟಾದ ಪ್ರಶ್ನೆಪತ್ರಿಕೆ ಸೋರಿಕೆ ಆರೋಪಗಳು ಹಾಗೂ ನಂತರ ಪರೀಕ್ಷೆ ರದ್ದಾದ ಬೆಳವಣಿಗೆಗಳು ಆಕೆಯ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರಿದ್ದವು. ಇದೇ ನಿರಾಸೆ ಆಕೆಯನ್ನು ತೀವ್ರ ಖಿನ್ನತೆಗೆ ತಳ್ಳಿದೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಆಕಾಂಕ್ಷಳ ಕುಟುಂಬ ಆರ್ಥಿಕವಾಗಿ ಸಬಲವಾಗಿರಲಿಲ್ಲ. ಆದರೂ ಮಗಳು ವೈದ್ಯೆಯಾಗಬೇಕು ಎಂಬ ಕನಸಿಗಾಗಿ ತಂದೆ ಕೃಷ್ಣ ಕುಮಾರ್ ಚತುರ್ವೇದಿ ಸಾಕಷ್ಟು ಕಷ್ಟಪಟ್ಟಿದ್ದರು. ರೈತರಾಗಿರುವ ಅವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಸುಮಾರು 3 ಲಕ್ಷ ರೂಪಾಯಿ ಸಾಲ ಪಡೆದು ಮಗಳನ್ನು ನಾಗ್ಪುರದ ಖಾಸಗಿ ಕೋಚಿಂಗ್ ಸಂಸ್ಥೆಯಲ್ಲಿ ಸೇರಿಸಿದ್ದರು.

ಅಷ್ಟೇ ಅಲ್ಲದೆ, ಮಗಳ ವಿದ್ಯಾಭ್ಯಾಸಕ್ಕಾಗಿ ನಾಗ್ಪುರದಲ್ಲೇ ಅಡುಗೆ ಕೆಲಸ ಮಾಡುತ್ತಾ ಆಕೆಯ ಭವಿಷ್ಯ ರೂಪಿಸಲು ಶ್ರಮಿಸಿದ್ದರು. ಈ ಬಾರಿ ನೀಟ್ ಪರೀಕ್ಷೆಯ ಬಳಿಕ ಮಗಳು ಖಂಡಿತವಾಗಿ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆಯುತ್ತಾಳೆ ಎಂಬ ಭರವಸೆ ಕುಟುಂಬದಲ್ಲಿತ್ತು. ಆದರೆ ಪರೀಕ್ಷೆ ರದ್ದಾದ ಸುದ್ದಿ ಅವರ ಕನಸುಗಳಿಗೆ ದೊಡ್ಡ ಹೊಡೆತ ನೀಡಿತು.

ಡೆತ್ ನೋಟ್ ನಲ್ಲಿ ವಿದ್ಯಾರ್ಥಿನಿ,ಕ್ಷಮಿಸಿ ಅಮ್ಮ, ಅಪ್ಪ… ನನ್ನ ಮೇಲೆ ಅಪಾರ ನಂಬಿಕೆ ಇಟ್ಟು ಡಾಕ್ಟರ್ ಮಾಡಬೇಕೆಂದು ನೀವು ಶ್ರಮಿಸಿದ್ದೀರಿ. ಆದರೆ ಮತ್ತೊಮ್ಮೆ ನೀಟ್ ಪರೀಕ್ಷೆ ಎದುರಿಸುವ ಧೈರ್ಯ ನನ್ನಲ್ಲಿಲ್ಲ. ನಿಮ್ಮನ್ನು ಸಾಲದ ಹೊರೆ ಹೊರುವಂತೆ ಮಾಡಿದ್ದೇನೆ. ಮತ್ತೆ ಪರೀಕ್ಷೆ ಬರೆದರೂ ಉತ್ತಮ ಫಲಿತಾಂಶ ಬರುತ್ತದೆ ಎಂಬ ವಿಶ್ವಾಸ ನನಗಿಲ್ಲ,” ಎಂದು ಆಕೆ ತನ್ನ ಅಂತಿಮ ಪತ್ರದಲ್ಲಿ ಬರೆದುಕೊಂಡಿದ್ದಾಳೆ.

ದೇಶಾದ್ಯಂತ ಆಘಾತ ಮೂಡಿಸಿದ NEET ಪರೀಕ್ಷೆ ವಿವಾದ

ನೀಟ್ ಯುಜಿ 2026 ಪರೀಕ್ಷೆ ರದ್ದಾದ ಘಟನೆ ದೇಶದ ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳಿಗೆ ದೊಡ್ಡ ಆಘಾತ ತಂದಿದೆ. ಮೇ 3ರಂದು ನಡೆದ ಪರೀಕ್ಷೆಯಲ್ಲಿ ಅಕ್ರಮಗಳ ಸುಳಿವು ಕಂಡುಬಂದ ಹಿನ್ನೆಲೆ, ಮೇ 7ರಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ತನಿಖೆ ಆರಂಭಿಸಿತ್ತು. ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದ್ದು, ಮೇ 12ರಂದು ಪರೀಕ್ಷೆಯನ್ನು ಸಂಪೂರ್ಣವಾಗಿ ರದ್ದುಪಡಿಸಲಾಯಿತು. ನಂತರ ಶಿಕ್ಷಣ ಸಚಿವಾಲಯ ಹಾಗೂ ಎನ್‌ಟಿಎ ಮೇ 21ರಂದು ಮರುಪರೀಕ್ಷೆ ನಡೆಸುವುದಾಗಿ ಪ್ರಕಟಿಸಿವೆ.

ಪ್ರಕರಣದ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದ್ದು, ಇದುವರೆಗೆ 13 ಮಂದಿಯನ್ನು ಬಂಧಿಸಲಾಗಿದೆ. ಪ್ರಶ್ನೆಪತ್ರಿಕೆ ಸೋರಿಕೆ ಜಾಲದ ವಿರುದ್ಧ ತನಿಖೆ ತೀವ್ರಗೊಂಡಿದೆ. ಇದೇ ವೇಳೆ ಪರೀಕ್ಷಾ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಹಾಗೂ ಪೆನ್-ಪೇಪರ್ ಮಾದರಿಯ ಬದಲಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷಾ ವಿಧಾನ ಜಾರಿಗೊಳಿಸುವಂತೆ ಸುಪ್ರೀಂ ಕೋರ್ಟ್‌ನಲ್ಲಿ ಹಲವು ಅರ್ಜಿಗಳು ಸಲ್ಲಿಕೆಯಾಗಿವೆ.

ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ

ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.

ವರದಿ ಮಾಡುವುದು ಹೇಗೆ?

  • ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ವಾಟ್ಸಪ್ ಮಾಡಿ: 90369 74702

ನಾವು ಏನು ಮಾಡುತ್ತೇವೆ?

  • ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
  • ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
  • ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.

Join WhatsApp

Join Now

Join Telegram

Join Now