ಸುದ್ದಿಒನ್,ಬೆಂಗಳೂರು,ಜೂನ್.04: ರಾಜ್ಯದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದ ಕೆಲವೇ ಗಂಟೆಗಳಲ್ಲಿ ಜನಸಾಮಾನ್ಯರಿಗೆ ಮಹತ್ವದ ಘೋಷಣೆಗಳನ್ನು ನೀಡಲಾಗಿದೆ. ವಿಧಾನಸೌಧದಲ್ಲಿ ಮುಖ್ಯಮಂತ್ರಿ ಹುದ್ದೆ ಸ್ವೀಕರಿಸಿದ ಬಳಿಕ ನಡೆದ ಮೊದಲ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಲವು ಜನಪರ ನಿರ್ಧಾರಗಳನ್ನು ಪ್ರಕಟಿಸಿದರು. ಅದರಲ್ಲೂ ‘ಭೂ ಗ್ಯಾರಂಟಿ’ ಹೆಸರಿನ ಹೊಸ ಯೋಜನೆ ಹೆಚ್ಚು ಗಮನ ಸೆಳೆದಿದ್ದು, ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿಯಾಗಿ ಅಧಿಕೃತ ಘೋಷಣೆಗೊಂಡಿದೆ.
ಸ್ವಂತ ಮನೆ ನಿರ್ಮಾಣ ಮಾಡಿರುವ ಸಾವಿರಾರು ಕುಟುಂಬಗಳಿಗೆ ಸರ್ಕಾರ ದೊಡ್ಡ ಮಟ್ಟದ ನಿರಾಳತೆಯನ್ನು ನೀಡಿದೆ. ಇನ್ನು ಮುಂದೆ 3 ಮಹಡಿಗಳವರೆಗೆ ನಿರ್ಮಿಸಿರುವ ಹಾಗೂ 2,500 ಚದರ ಅಡಿ ವ್ಯಾಪ್ತಿಯೊಳಗಿನ ಮನೆಗಳಿಗೆ ಆಕ್ಯುಪೆನ್ಸಿ ಸರ್ಟಿಫಿಕೇಟ್ (OC) ಪಡೆಯುವ ಕಡ್ಡಾಯ ನಿಯಮ ಇರದು ಎಂದು ಮುಖ್ಯಮಂತ್ರಿ ಘೋಷಿಸಿದ್ದಾರೆ.ಈ ಕ್ರಮದಿಂದ ವಿಶೇಷವಾಗಿ ಮಧ್ಯಮ ವರ್ಗದ ಮನೆ ಮಾಲೀಕರು ಮತ್ತು ಸಣ್ಣ ಪ್ರಮಾಣದ ಕಟ್ಟಡ ನಿರ್ಮಾಣದವರು ಹೆಚ್ಚಿನ ಪ್ರಯೋಜನ ಪಡೆಯಲಿದ್ದಾರೆ.
ಇದುವರೆಗೆ ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದ್ದ ಬಿ-ಖಾತಾ ಆಸ್ತಿಗಳನ್ನು ಎ-ಖಾತಾಗೆ ಪರಿವರ್ತಿಸುವ ವ್ಯವಸ್ಥೆಯನ್ನು ಇಡೀ ಕರ್ನಾಟಕಕ್ಕೆ ವಿಸ್ತರಿಸಲು ಸರ್ಕಾರ ನಿರ್ಧರಿಸಿದೆ.ಈ ನಿರ್ಧಾರದಿಂದ ನಗರ ಹಾಗೂ ಪಟ್ಟಣ ಪ್ರದೇಶಗಳ ಸಾವಿರಾರು ಆಸ್ತಿ ಮಾಲೀಕರು ತಮ್ಮ ಆಸ್ತಿಗಳನ್ನು ಕಾನೂನುಬದ್ಧ ದಾಖಲೆಗಳೊಂದಿಗೆ ನೋಂದಾಯಿಸಿಕೊಳ್ಳಲು ಅನುಕೂಲವಾಗಲಿದೆ. ಆಸ್ತಿ ಹಕ್ಕು ಸಂಬಂಧಿತ ಹಲವು ಸಮಸ್ಯೆಗಳಿಗೆ ಇದು ಶಾಶ್ವತ ಪರಿಹಾರ ನೀಡುವ ನಿರೀಕ್ಷೆಯಿದೆ.











