ಸುದ್ದಿಒನ್,ಬೆಂಗಳೂರು,ಜೂನ್.03 : ಕರ್ನಾಟಕ ರಾಜಕೀಯ ವಲಯದಲ್ಲಿ ಮತ್ತೊಂದು ಅತ್ಯಂತ ಮಹತ್ವದ ಹಾಗೂ ಸಂಚಲನ ಮೂಡಿಸುವಂತಹ ಬೆಳವಣಿಗೆಯೊಂದು ನಡೆದಿದೆ. ರಾಜ್ಯದ ಹಿರಿಯ ನಾಯಕ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ರಾಷ್ಟ್ರ ಮಟ್ಟದ ಅತ್ಯುನ್ನತ ಹುದ್ದೆಯೊಂದನ್ನು ನೀಡಿದೆ. ಪಕ್ಷದ ಅತ್ಯುನ್ನತ ಹಾಗೂ ಪರಮೋಚ್ಛ ನಿರ್ಧಾರಗಳನ್ನು ತೆಗೆದುಕೊಳ್ಳುವ ಶಕ್ತಿಶಾಲಿ ವಿಭಾಗವಾದ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ (CWC) ಖಾಯಂ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.
ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಸೂಚನೆಯ ಮೇರೆಗೆ ಈ ಪ್ರಮುಖ ನೇಮಕಾತಿ ಆದೇಶ ಹೊರಬಿದ್ದಿದೆ. ನವದೆಹಲಿಯ ಅಕ್ಬರ್ ರಸ್ತೆಯಲ್ಲಿರುವ ಕಾಂಗ್ರೆಸ್ ಪ್ರಧಾನ ಕಚೇರಿಯಿಂದ ಎಐಸಿಸಿ (AICC) ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಜೂನ್ 2, 2026ರಂದು ಈ ಕುರಿತು ಅಧಿಕೃತ ಪತ್ರಿಕಾ ಪ್ರಕಟಣೆಯನ್ನು ಬಿಡುಗಡೆ ಮಾಡಿದ್ದಾರೆ.

ಪ್ರಸ್ತುತ ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಹಂಚಿಕೆಯ ಕುರಿತು ಭರ್ಜರಿ ಕಸರತ್ತು ಮತ್ತು ಹಗ್ಗಜಗ್ಗಾಟ ನಡೆಯುತ್ತಿರುವ ಬೆನ್ನಲ್ಲೇ, ಸಿದ್ದರಾಮಯ್ಯ ಅವರಿಗೆ ದೆಹಲಿ ಮಟ್ಟದ ಉನ್ನತ ಸಮಿತಿಯಲ್ಲಿ ಸ್ಥಾನ ಸಿಕ್ಕಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಈ ಮೂಲಕ ಹೈಕಮಾಂಡ್ ಮಟ್ಟದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ತೂಕ ಮತ್ತಷ್ಟು ಹೆಚ್ಚಾಗಿದ್ದು, ಮುಂದಿನ ದಿನಗಳಲ್ಲಿ ಇದು ರಾಜ್ಯ ರಾಜಕೀಯದ ಮೇಲೇನು ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡಬೇಕಿದೆ.










