ಸುದ್ದಿಒನ್,ಬೆಂಗಳೂರು,ಜೂನ್.03: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ರಾಜಕೀಯದ ದೀರ್ಘಾವಧಿ ನಾಯಕತ್ವದ ಪೈಪೋಟಿಗೆ ತೆರೆ ಬಿದ್ದಿದ್ದು, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೂಲಕ ಅವರ ರಾಜಕೀಯ ಜೀವನದ ಮಹತ್ವದ ಕನಸೊಂದು ನನಸಾಗುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.
ಇಂದು ಸಂಜೆ 4:05ಕ್ಕೆ ರಾಜಭವನದ ಗ್ಲಾಸ್ ಹೌಸ್ ನಲ್ಲಿ ಆಯೋಜಿಸಲಾದ ಭವ್ಯ ಸಮಾರಂಭದಲ್ಲಿ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಾಗೂ ಗೌಪ್ಯತೆಯ ಪ್ರಮಾಣ ವಚನ ಬೋಧಿಸಲಿದ್ದಾರೆ. ಮುಖ್ಯಮಂತ್ರಿಗಳ ಜೊತೆಗೆ ಮೊದಲ ಹಂತದಲ್ಲಿ ಕೆಲ ಪ್ರಮುಖ ಶಾಸಕರು ಸಹ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಮೊದಲ ಹಂತದಲ್ಲಿ 13 ಸಚಿವರು?
ಅಧಿಕೃತವಾಗಿ ಸಚಿವರ ಪಟ್ಟಿ ಇನ್ನು ಹೊರಬೀಳದಿದ್ದರೂ, ಮೊದಲ ಹಂತದಲ್ಲಿ ಸುಮಾರು 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ. ಹೈಕಮಾಂಡ್ ಸೂಚನೆ ಮೇರೆಗೆ ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮ್ಯನವರು ರಾಜೀನಾಮೆ ನೀಡಿದ ನಂತರ, ಕಳೆದ ವಾರ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ನಾಯಕರನ್ನಾಗಿ ಆಯ್ಕೆ ಮಾಡಲಾಗಿತ್ತು.
ಎಂಟು ಬಾರಿ ಶಾಸಕರಾಗಿ ಆಯ್ಕೆಯಾಗಿರುವ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರಾದ ಡಿ.ಕೆ. ಶಿವಕುಮಾರ್ ಅವರಿಗೆ ಈ ಹುದ್ದೆ ಸಿಕ್ಕಿರುವುದು ಅವರ ಸುದೀರ್ಘ ರಾಜಕೀಯ ಹೋರಾಟಕ್ಕೆ ಸಂದ ಜಯವಾಗಿದೆ.
ಕಾಂಗ್ರೆಸ್ ವಲಯದಲ್ಲಿ ‘ಟ್ರಬಲ್ ಶೂಟರ್’ ಎಂದೇ ಖ್ಯಾತರಾಗಿರುವ ಡಿ.ಕೆ. ಶಿವಕುಮಾರ್, ಪಕ್ಷ ಸಂಘಟನೆ ಮತ್ತು ರಾಜಕೀಯ ಬಿಕ್ಕಟ್ಟಿನ ಸಮಯದಲ್ಲಿ ಸರ್ಕಾರಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಸುದೀರ್ಘ ನಾಯಕತ್ವದ ಪೈಪೋಟಿಯ ಬಳಿಕ ಈಗ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಸುಸೂತ್ರವಾಗಿ ನಡೆದಿದೆ.










